ಜಿಬಿಎ 
ಬೆಂಗಳೂರು

ಗಣಪತಿ ಬಪ್ಪ ಮೊರೆಯಾ... ಮಣ್ಣಿನ ಮೂರ್ತಿ ಮೊರೆಯಾ!

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಪಿಒಪಿಗೆ ಗುಡ್​ ಬೈ ಪರಿಸರಸ್ನೇಹಿಗೆ ಜೈ ಜೈ!!
  • ನಗರದ ಬೀದಿಗಳಲ್ಲಿ ಗೌರಿ&ಗಣೇಶ ವಿಗ್ರಹ ಮಾರಾಟ ಜೋರು
  • 250ಕ್ಕೂ ಹೆಚ್ಚು ಮಳಿಗೆಗಳು, ಸಾವಿರಾರು ವಿಗ್ರಹ, 50 ಸಾವಿರವರೆಗೆ ಬೆಲೆ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ಗೌರಿ-ಗಣೇಶ ಹಬ್ಬಕ್ಕೆ ಕೆಲವು ದಿನ ಉಳಿದಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಗಣಪ ಹಾಗೂ ಗೌರಿದೇವಿಯ ವಿಗ್ರಹ ಮಾರಾಟ ಭರಾಟೆ ಜೋರಾಗಿದೆ. ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪ್ಲಾಸ್ಟರ್​ ಆಫ್​ ಪ್ಯಾರಿಸ್​ (ಪಿಒಪಿ) ಮತ್ತು ಬಣ್ಣಲೇಪಿತ ವಿಗ್ರಹಗಳಿಗೆ ನಿಷೇಧ ಹೇರಿದರೂ, ಮಾರುಕಟ್ಟೆಯಲ್ಲಿ ಈಗಲೂ ಪಿಒಪಿ ಗಣಪನಿಗೆ ಬೇಡಿಕೆ ಇದೆ. ಆದರೆ, ಈ ಬಾರಿ ಮಾರಾಟಗಾರರು ಮತ್ತು ಗ್ರಾಹಕರು ಪಿಒಪಿಗೆ ಬಹುತೇಕ ಗುಡ್​ ಬೈ ಹೇಳಿದಂತೆ ಭಾಸವಾಗುತ್ತಿದೆ.
ಸಣ್ಣ ಗಾತ್ರದ ಮಣ್ಣಿನ ಗಣಪನ ಮೂರ್ತಿ ಮೇಲೆ ಗ್ರಾಹಕರು ಒಲವು ತೋರಿದ್ದು, ನಗರದ ಬೀದಿಗಳಲ್ಲಿ ಮಣ್ಣಿನ ಗಣಪ ಗಮನ ಸೆಳೆಯುತ್ತಿದ್ದಾನೆ. ಪಿಒಪಿ ಮೂರ್ತಿಗಳಲ್ಲಿ ಹೆಚ್ಚಿನ ವಿನ್ಯಾಸ ಹಾಗೂ ವಿವಿಧ ಬಣ್ಣಗಳು ಆಕರ್ಷಕವಾಗಿತ್ತು. ಆದರೆ, ಮಣ್ಣಿನ ವಿಗ್ರಹಗಳು ಅಷ್ಟೊಂದು ವರ್ಣಮಯವಾಗಿಲ್ಲದಿದ್ದರೂ, ಪರಸರಸ್ನೇಹಿಯಾಗಿ ನಿರ್ಮಲ ಅನುಭೂತಿ ನೀಡುತ್ತದೆ ಎಂಬುದು ಜನರ ಇಂಗಿತ. ಪಿಒಪಿ ಕಡಿಮೆ ತೂಕ ಹಾಗೂ ಕಡಿಮೆ ಬೆಲೆಗೆ ಗ್ರಾಹಕರ ಪ್ರಿಯವಾಗಿತ್ತಾದರೂ, ಮಣ್ಣಿನ ಮೂರ್ತಿಗಳು ಭಾರವಾಗಿದ್ದರೂ, ಗರಿಷ್ಠ 6 ಅಡಿ ಇದ್ದರೂ ಯಾರಿಗೂ ಇದರಿಂದ ಅಪಾಯವಿಲ್ಲ ಎಂಬುದು ಸರ್ಕಾರದ ಕಾಳಜಿಯಾಗಿದೆ.
ಹಬ್ಬಕ್ಕೆ ಇನ್ನೇನು 5&6 ದಿನ ಬಾಕಿ ಇರುವಾಗಲೇ ಬಾಂಬೆ ಹಾಗೂ ಹೈದರಾಬಾದ್​ನಿಂದ ತಂದಿರುವ ನೂರಾರು ಗಣೇಶನ ಬೃಹತ್​ ಮೂರ್ತಿಗಳು ನಗರದ ವಿವಿಧೆಡೆ ರಾರಾಜಿಸುತ್ತಿವೆ. "ಕಾಂಸೆಪ್ಟ್​ ಗಣಪ' ವಿಗ್ರಹಗಳು ಹೆಚ್ಚಾಗಿ ಕಂಡುಬಂದಿದ್ದು, ಕೆಂಪೇಗೌಡ, ರಾಣಿ ಚನ್ನಮ್ಮ, ಗಜಗೌರಿ, ಪಾಂಡುರಂಗ ಹೀಗೇ ಹಲವು ದೇವರ ಹಾಗೂ ನಾಡಿನ ದೊರೆಗಳ ಅಂಶಾವತಾರ ಗಣೇಶನ ಮೂರ್ತಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಅದರಲ್ಲೂ ಪೇಟ ಧರಿಸಿರುವ ಚೆನ್ನಾಗಿ ವಿನ್ಯಾಸಗೊಳಿಸಿರುವ ಮಧ್ಯಮ ಗಾತ್ರದ ವಿಗ್ರಹಗಳಿಗೆ ಜನ ಮುಗಿಬೀಳುತ್ತಿದ್ದಾರೆ. ಮುಗ್ಧವಾಗಿ ಕಾಣುವ "ಮಗು ಗಣಪ' ಕೂಡ ವಿಶೇಷ ಆಕರ್ಷಣೆಯಾಗಿದೆ.
50 ಸಾವಿರ ರೂ. ವಿಗ್ರಹ!: 
ನಗರದಲ್ಲಿ 50 ರೂಪಾಯಿಯಿಂದ ಹಿಡಿದು 50 ಸಾವಿರ ರೂ.ವರೆಗೆ ವಿವಿಧ ಗಾತ್ರಕ್ಕೆ ಅನುಗುಣವಾಗಿ ಗಣಪನ ಮೂರ್ತಿಗಳು ಲಭ್ಯವಿದ್ದು, 6 ಇಂಚಿನಿಂದ 15&18 ಅಡಿವರೆಗೆ ಎತ್ತರದ ಗಣಪನ ವಿಗ್ರಹಗಳು ಸದ್ಯ ಬೀದಿಬದಿ ಕಾಣಸಿಗುತ್ತಿವೆ. ಸುಮಾರು ಒಂದೂವರೆ ಅಡಿ ಎತ್ತರದ ಗಣಪನ ವಿಗ್ರಹಕ್ಕೆ ಅಂದಾಜು 3 ಸಾವಿರ ರೂ. ಬೆಲೆ ಇದ್ದು, ಅದಕ್ಕಿಂತ ಚಿಕ್ಕ ಮೂರ್ತಿಗಳಿಗೆ ಕನಿಷ್ಠ 1,500 ರೂ.ನಿಂದ ದರ ಪ್ರಾರಂಭವಾಗುತ್ತದೆ. ಕಾಂಸೆಪ್ಟ್​ ಗಣಪನ ಮೂರ್ತಿ ಬೇಕಿದ್ದರೆ ಬೆಲೆ ಸ್ವಲ್ಪ ದುಬಾರಿ ಎನಿಸಿದ್ದು, ಸುಮಾರು 5&6 ಅಡಿ ಎತ್ತರದ ಗಣಪನಿಗೆ 50 ಸಾವಿರ ರೂ.ವರೆಗೂ ತಗುಲುತ್ತದೆ ಎಂದು ವಿಗ್ರಹ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.
ನೂರಾರು ಸ್ಟಾಲ್​ಗಳು: 
ನಗರದಲ್ಲಿ ಈಗಾಗಲೇ ಒಟ್ಟಾರೆ 250ಕ್ಕೂ ಅಧಿಕ ಸ್ಟಾಲ್​ಗಳನ್ನು ತೆರೆಯಲಾಗಿದ್ದು, ಸಾವಿರಾರು ವಿಗ್ರಹಗಳು ಮಾರಾಟಕ್ಕೆ ಸಿದ್ಧವಾಗಿವೆ. ರಸ್ತೆ ಬದಿಯಲ್ಲಿ ಅಂಗಡಿ ಹಾಕಿ, ಸಾಲಾಗಿ ವಿಗ್ರಹಗಳನ್ನು ಇರಿಸಲಾಗಿದೆ. ಅಂಗಡಿಯ ಇನ್ನೊಂದು ಭಾಗದಲ್ಲಿ ಕೆಲವು ಮೂರ್ತಿಗಳಿಗೆ ಬಣ್ಣ ಬಳಿಯುತ್ತಿರುವ ದೃಶ್ಯವೂ ಸಾಮಾನ್ಯವಾಗಿತ್ತು. 4 ವರ್ಷದಿಂದ ಪರಿಸರಸ್ನೇಹಿ ಗಣೇಶ ಮೂರ್ತಿಗೆ ಒತ್ತು ನೀಡುತ್ತಿರುವುದರಿಂದಲೇ ಮಾರಾಟಗಾರರಲ್ಲೂ ಅಷ್ಟೊಂದು ಉತ್ಸಾಹ ಕಾಣುತ್ತಿಲ್ಲ. ನಿಷೇಧ ಹೇರಿ ಮೂರು ವರ್ಷ ಕಳೆದರೂ ಈ ಬಾರಿ ಗ್ರಾಹಕರು ಮಣ್ಣಿನ ಗಣಪನತ್ತ ಮುಖ ಮಾಡಿರುವುದು ಬದಲಾವಣೆಯ ಭರವಸೆ ಹೆಚ್ಚಿಸಿದೆ.
ಜೇಡಿಮಣ್ಣಿಗೆ ಬೇಡಿಕೆ ತಯಾರಕರ ಕೊರತೆ
ಪ್ಲಾಸ್ಟರ್​ ಆಫ್​ ಪ್ಯಾರಿಸ್​ (ಪಿಒಪಿ) ಮೂರ್ತಿಗಳ ಮಾರಾಟಕ್ಕೆ ಸರ್ಕಾರ ಕಡಿವಾಣ ಹಾಕಿ, ಪರಿಸರಸ್ನೇಹಿ ಜೇಡಿಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದರೂ, ಅವುಗಳ ತಯಾರಿಕೆಗೆ ಅಗತ್ಯವಾದ ಜೇಡಿಮಣ್ಣಿನ ಕೊರತೆ ಮೂರ್ತಿಕಾರರನ್ನು ಕಾಡುತ್ತಿದೆ. ಹಿಂದೆ ನಾಗವಾರ ಕೆರೆಯಲ್ಲಿ ಉತ್ತಮ ಗುಣಮಟ್ಟದ ಜೇಡಿಮಣ್ಣು ದೊರೆಯುತ್ತಿತ್ತು. ಇದೀಗ ನಗರೀಕರಣದಿಂದಾಗಿ ಆ ಅವಕಾಶವೂ ಇಲ್ಲದಂತಾಗಿದೆ. ಮಣ್ಣಿಗಾಗಿ ತಮಿಳುನಾಡು, ಕೊಲ್ಕತ್ತಾ ಇತ್ಯಾದಿ ಅನ್ಯ ರಾಜ್ಯಗಳನ್ನು ಅವಲಂಬಿಸಬೇಕಾಗಿದೆ. ಸಾಗಣೆ ವೆಚ್ಚ, ಕಾರ್ಮಿಕರ ಕೂಲಿ ಸೇರಿ ಉತ್ಪಾದನಾ ವೆಚ್ಚ ಹೆಚ್ಚಿದ್ದರೂ, ಗ್ರಾಹಕರಿಗೆ ನಿಗದಿತ ದರದಲ್ಲೇ ಮೂರ್ತಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಮಾರಾಟಗಾರರಿಗೆ ಇದೆ. ಅಲ್ಲದೆ, ಈ ಹಿಂದೆ ಮಣ್ಣಿನಲ್ಲಿ ಸಾಂಪ್ರದಾಯಕವಾಗಿ ಮೂರ್ತಿ ತಯಾರಿಸಲು ಜನರೇ ಇಲ್ಲ ಎಂಬ ಪರಿಸ್ಥಿತಿಯೂ ಇದೆ ಎಂದು ಮಾರಾಟಗಾರರು ಅಳಲು ತೋಡಿಕೊಂಡಿದ್ದಾರೆ.

ಕಳೆದ ವರ್ಷ ನಮ್ಮಲ್ಲಿ 9 ಗಣಪನ ಮೂರ್ತಿಗಳು ಕಳುವಾಗಿದ್ದವು. ಆದ್ದರಿಂದ ಈ ಬಾರಿ ನಾವು ಎತ್ತರದ ಗಣಪನ ವಿಗ್ರಹಗಳನ್ನು ತಯಾರಿಸಿಲ್ಲ. ಹಾಗೆ ತಯಾರಿಸಿದರೂ ಬೀದಿಬದಿಯಲ್ಲಿ ಇರಿಸುವುದು ಕಷ್ಟ. 2 ವಾರ ಮೊದಲೇ ವ್ಯಾಪಾರ ಶುರು ಮಾಡುವುದು ರೂಢಿ. ಗಂಗಾ ತೀರಗಳಿಂದ ತಂದಿರುವ ಮೃದುವಾದ ಮಣ್ಣು ಗಣಪನ ವಿಗ್ರಹಕ್ಕೆ ಯೋಗ್ಯವಾಗಿದ್ದು, ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ.>

— ಮಧು, ವಿಗ್ರಹ ವ್ಯಾಪಾರಿ


ಸುಮಾರು ಒಂದಡಿ ಗಣೇಶನ ವಿಗ್ರಹ ಮಾಡಲು 5 ಕೆಜಿ ಮಣ್ಣು ಬೇಕಾಗುತ್ತದೆ. ಹಾಗಿದ್ದಲ್ಲಿ ವರ್ಷಕ್ಕೆ ಲಾಂತರ ಮೂರ್ತಿಗಳು ತಯಾರಾಗುತ್ತವೆ. ಆಗ ಎಷ್ಟು ಮಣ್ಣು ಅಗೆಯಬೇಕಾಗುತ್ತದೆ? ಮೈನಿಂಗ್​ಗೆ ಈಗಾಗಲೇ ಸರ್ಕಾರ ಷರತ್ತುಗಳನ್ನು ಹಾಕಿದೆ. ಹಿಂದಿನ ಕಾಲದಲ್ಲಿ ಹೊಲಗದ್ದೆಗಳಿಗೆ ಮಣ್ಣು ಉಪಯೋಗಿಸಲಾಗುತ್ತಿತ್ತು. ಅಲ್ಲದೆ, ಮಣ್ಣಿನ ಗಣಪ ಬಂದಮೇಲೆ ವ್ಯಾಪಾರ ಕುಸಿಯ ತೊಡಗಿದೆ. ಕಳೆದ ವರ್ಷದ ಮೂರ್ತಿಗಳನ್ನೇ ಮಾರಾಟ ಮಾಡುತ್ತಿದ್ದೇವೆ. ಈ ಬಾರಿ ತಂದಿರುವುದು ಕಡಿಮೆ. ಹೀಗೆ ಹೋದರೆ ಮುಂದೆ ವ್ಯಾಪಾರವೇ ಕಷ್ಟವಾಗಬಹುದು.

— ವಿಘ್ನೇಶ್​, ವಿಗ್ರಹ ವ್ಯಾಪಾರಿ, ಕುಂಬಳಗೋಡು


ಪಿಒಪಿ ಬ್ಯಾನ್​ ಮಾಡಿರುವುದರಿಂದ ಹಬ್ಬ ಪರಿಸರಸ್ನೇಹಿಯಾಗಿದೆ. ನಾವು ಪ್ರತಿ ಬಾರಿಯೂ ಮಣ್ಣಿನ ಗಣಪನನ್ನೇ ಪೂಜಿಸುತ್ತೇವೆ. ಆರ್​.ವಿ. ರಸ್ತೆ ಸಮೀಪ ಗಣೇಶನ ವಿಗ್ರಹಗಳು ನಮಗೆ ಇಷ್ಟದ ವಿನ್ಯಾಸದಲ್ಲಿ ಸಿಗುತ್ತದೆ. ಖರೀದಿಸುವಾಗಲೂ ಬೇಕಾದಷ್ಟು ಆಯ್ಕೆಗಳು ಇವೆ.

— ಸೌಮ್ಯ, ಗ್ರಾಹಕಿ


ಸರ್ಕಾರ ಸರಿಯಾದ ತೀರ್ಮಾನವನ್ನೇ ಕೈಗೊಂಡಿದೆ. ಸಾಂಪ್ರದಾಯಕ ಹಬ್ಬವನ್ನು ಇದೇ ರೀತಿ ಆಚರಿಸುವುದು ಉತ್ತಮ, ನಾವು ಉತ್ತರ ಕರ್ನಾಟಕ ಭಾಗದವರು. ಅಲ್ಲಿ ಮಹಾರಾಷ್ಟ್ರ ಸಮೀಪ ಇರುವುದರಿಂದ ಒಳ್ಳೆಯ ಗಣೇಶ ಮೂರ್ತಿಗಳು ಸಿಗುತ್ತವೆ. ಬೆಂಗಳೂರಿನಲ್ಲೂ ಚೆನ್ನಾಗಿರುವ ಮಣ್ಣಿನ ಮೂರ್ತಿಗಳು ಸಿಗುತ್ತಿರುವುದು ಸಂತಸದ ವಿಚಾರ.

— ಸವಿತಾ, ಗ್ರಾಹಕಿ