Venkatesh  
ಬೆಂಗಳೂರು

ವೃದ್ಧೆಗೆ ವಂಚನೆ ನಕಲಿ ಜ್ಯೋತಿಷ್ಯ ಬಂಧನ

40 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ,

ಬೆಂಗಳೂರು: ಜ್ಯೋತಿಷ್ಯ ಹೇಳುವ ನೆಪದಲ್ಲಿ ವೃದ್ಧೆಯೊಬ್ಬರನ್ನು ನಂಬಿಸಿ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ ವ್ಯಕ್ತಿಯೋರ್ವನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವೆಂಕಟೇಶ್ ಬಂಧಿತ ಆರೋಪಿ. ಶಾಂತಮ್ಮ ಎಂಬ ವೃದ್ಧೆಗೆ ವಂಚಿಸಿದ್ದ ಆರೋಪಿ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು 200 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಅನಾರೋಗ್ಯದ ನಿಮಿತ್ತ ಆಗಾಗ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದ ಶಾಂತಮ್ಮ ಅವರಿಗೆ ವೆಂಕಟೇಶ್ ಪರಿಚಯವಾಗಿದ್ದ. ಅನಾರೋಗ್ಯದ ಬಗ್ಗೆ ಶಾಂತಮ್ಮ ಭವಿಷ್ಯ ಕೇಳಿದಾಗ, ಕೆಲವೇ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ವೆಂಕಟೇಶ್ ನಂಭಿಸಿದ್ದ. ಶಾಂತಮ್ಮ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದ್ದರಿಂದ ಆತನ ಮೇಲೆ ನಂಬಿಕೆ ಮೂಡಿತ್ತು. ಬಳಿಕ ಮಗನ ಕುಡಿತದ ಚಟ ಹಾಗೂ ಮಗಳ ಮದುವೆ ವಿಚಾರವಾಗಿ ಆರೋಪಿಯಿಂದ ಸಲಹೆ ಪಡೆಯಲು ಶಾಂತಮ್ಮ ನಿರ್ಧರಿಸಿದ್ದರು. ಮನೆಗೆ ಬಂದ ಶಾಂತಮ್ಮ ಅವರಿಗೆ ನಿಂಬೆಹಣ್ಣು ನೀಡಿ ಚೌಡೇಶ್ವರಿ ಪೂಜೆ ಮಾಡಬೇಕೆಂದು ಮನೆಯಲ್ಲಿದ್ದ ಚಿನ್ನಾಭರಣ ಪೂಜೆ ಸಲ್ಲಿಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದ 40 ಲಕ್ಷ ರೂ.ಮೌಲ್ಯದ 300 ಗ್ರಾಂ ಚಿನ್ನಾಭರಣ ದೋಚಿಕೊಂಡು ಆಗಸ್ಟ್ 19ರಂದು ಪರಾರಿಯಾಗಿದ್ದ. ಆರೋಪಿ ವಿಚಾರಣೆ ನಡೆಸಿರುವ ಪೊಲೀಸರು, ಆತನ ಹಿನ್ನೆಲೆ ಪರಿಶೀಲನೆ ನಡೆಸಿದ್ದಾರೆ.