ಹೊನ್ನಾವರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ (Chittani) ಅವರ ಅಭಿಮಾನಿಗಳು ಮಾತನಾಡಿದರು
- ರಾಷ್ಟ್ರ ಪ್ರಶಸ್ತಿ ಸ್ಥಾಪನೆಗೆ ನಿರ್ಧಾರ
- ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಮಾಹಿತಿ
- ಚಿಟ್ಟಾಣಿ ರಾಮಚಂದ್ರ ಹೆಗಡೆ ಅಭಿಮಾನಿಗಳಿಂದ ಹೆಜ್ಜೆ
ಹೊನ್ನಾವರ: ಯಕ್ಷಗಾನದ ಮೇರು ಕಲಾವಿದರಾಗಿದ್ದ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ (Chittani) ಅವರ ಹೆಸರಲ್ಲಿ ಪ್ರತಿಷ್ಠಾನ ಮಾಡಲು ಅವರ ಅಭಿಮಾನಿಗಳು ಮುಂದಾಗಿದ್ದೇವೆ.
ಚಿಟ್ಟಾಣಿ ಘರಾಣೆ ಎನ್ನುವುದು ಮುಂದಿನ ಪರಂಪರೆಗೆ ಶಾಶ್ವತವಾಗಿ ಉಳಿಯಲು ಇದು ಸಹಕಾರಿಯಾಗಿದೆ ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಹೇಳಿದರು.
ಚಿಟ್ಟಾಣಿ ಹೆಸರಿನಲ್ಲಿ ಅಧ್ಯಯನ ಕೇಂದ್ರ, ಯಕ್ಷಗಾನ ಶಾಲೆ ಆಗಬೇಕು. ಇದು ನಮ್ಮ ಜಿಲ್ಲೆಯ ಕನಸಾಗಿದೆ ಎಂದು ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೆಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಚಿಟ್ಟಾಣಿ ಯಕ್ಷಗಾನದ ದಂತಕಥೆ ಆಗಿದ್ದಾರೆ.
ಯಕ್ಷಲೋಕಕ್ಕೆ ದೊಡ್ಡ ಕೊಡುಗೆ ನೀಡಿರುವ ಅವರು, ಪದ್ಮಶ್ರೀ ಪ್ರಶಸ್ತಿ ಪಡೆದು ರಾಷ್ಟ್ರದ ಗಮನ ಸೆಳೆದಿದ್ದಾರೆ. ಚಿಟ್ಟಾಣಿ ಹೆಸರಲ್ಲಿ ಪ್ರತಿಷ್ಠಾನ ಮಾಡಿ ವ್ಯವಸ್ಥಿತವಾಗಿ ಕೆಲಸವನ್ನು ಮಾಡಲು ನಿರ್ಧರಿಸಿದ್ದೇವೆ ಎಂದರು.
ಸಂಘಟಕ ರಾಜೇಶ ಭಂಡಾರಿ ಮಾತನಾಡಿ, ಚಿಟ್ಟಾಣಿಯವರು 74 ವರ್ಷಗಳ ಕಾಲ ನಮ್ಮನ್ನು ರಂಜಿಸಿದ್ದರು. ಆದರೆ, ನಾವು ಅವರಿಗೆ ಏನನ್ನು ನೀಡಿಲ್ಲ.
ಅವರ ಸ್ಮರಣಾರ್ಥ ರಂಗ ವೇದಿಕೆ, ಪ್ರಶಸ್ತಿ ಹಾಗೂ ಅವರ ಕಂಚಿನ ಪುತ್ಥಳಿಯನ್ನು ಮಾಡುವ ಬಯಕೆಯಿದೆ. ಎಲ್ಲಾ ಯಕ್ಷಾಭಿಮಾನಿಗಳು, ಚಿಟ್ಟಾಣಿ ಅಭಿಮಾನಿ ಬಳಗದವರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಯಕ್ಷಗಾನ ಕಲಾವಿದರಾದ ಕೃಷ್ಣ ಯಾಜಿ ಬಳ್ಕೂರು, ವಿದ್ಯಾಧರ ಜಲವಳ್ಳಿ, ಮುಗ್ವಾ ಗಣೇಶ ನಾಯ್ಕ, ನಿಲ್ಕೋಡು ಶಂಕರ ಹೆಗಡೆ, ಜಡ್ಡಿಕೇರಿ ಅಶೋಕ್ ನಾಯ್ಕ ಮಾತನಾಡಿದರು.
ಯಕ್ಷಗಾನ ಕಲಾವಿದರಾದ ಈಶ್ವರ ನಾಯ್ಕ ಮಂಕಿ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪಾ, ಪರಮೇಶ್ವರ ಭಂಡಾರಿ, ಲಕ್ಷ್ಮಣ ಗೌಡ, ಸುನಿಲ್ ಭಂಡಾರಿ, ಲಕ್ಷ್ಮೀನಾರಾಯಣ ಹೆಗಡೆ, ಚಂದನ್ ಪ್ರಭು, ಮಂಜುನಾಥ ನಾಯ್ಕ ಗೇರುಸೊಪ್ಪಾ, ಚಿಟ್ಟಾಣಿ ಕುಟುಂಬದ ಪ್ರಭಾಕರ ಚಿಟ್ಟಾಣಿ, ನಾರಾಯಣ ಚಿಟ್ಟಾಣಿ, ಕಾರ್ತಿಕ್ ಚಿಟ್ಟಾಣಿ ಇತರರಿದ್ದರು.
"
ನನ್ನ ತಂದೆ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಹೆಸರಲ್ಲಿ ಪ್ರತಿಷ್ಠಾನ ಮಾಡಿ ಅವರ ಕೊಡುಗೆಯನ್ನು ನಿರಂತರ ಸ್ಮರಿಸುವ ಕೆಲಸ ಆಗಬೇಕು ಎಂದು ಅಭಿಮಾನಿಗಳೇ ನಮ್ಮನ್ನು ಎಚ್ಚರಿಸಿದರು. ಚಿಟ್ಟಾಣಿಯವರ ಹೆಸರನ್ನು ಉಳಿಸಲು ನಮ್ಮ ಕುಟುಂಬ ಎಲ್ಲ ರೀತಿಯ ಸಹಕಾರ ನೀಡಲಿದೆ.
— ಸುಬ್ರಹ್ಮಣ್ಯ ಚಿಟ್ಟಾಣಿ, ಯಕ್ಷಗಾನ ಕಲಾವಿದ