appartment bill 
ಬೆಂಗಳೂರು

ಅಪಾರ್ಟ್‌ಮೆಂಟ್ ಕಾಯ್ದೆಯ ನಿಯಮಾವಳಿ ರೂಪಿಸಿ

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರಕ್ಕೆ ಬಿಎಎಫ್​ ಮನವಿ
  • ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಒಕ್ಕೂಟ

ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕ ಅಪಾರ್ಟ್‌ಮೆಂಟ್ ಓನರ್‌ಶಿಪ್ ಆ್ಯಂಡ್ ಮ್ಯಾನೇಜ್‌ಮೆಂಟ್ ಆಕ್ಟ್ - 2026ರ ವಿಧೇಯಕಕ್ಕೆ ಒಪ್ಪಿಗೆ ದೊರೆತಿರುವುದರಿಂದ ಶೀಘ್ರವೇ ನಿಯಮಾವಳಿ ರೂಪಿಸಿ ಕಾಯ್ದೆ ಜಾರಿಗೆ ತರುವಂತೆ ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಷನ್ (ಬಿಎಎಫ್​) ಸರ್ಕಾರಕ್ಕೆ ಮನವಿ ಮಾಡಿದೆ.

ಹಾಲಿ ಅಪಾರ್ಟ್‌ಮೆಂಟ್ ಕಾಯ್ದೆಯು 50 ವರ್ಷ ಪೂರೈಸಿದ್ದ ಕಾರಣ ಇಂದಿನ ಸ್ಥಿತಿಗತಿಗೆ ಹೊಂದಿಕೆಯಾಗದೆ ನಾನಾ ಸಮಸ್ಯೆಗಳನ್ನು ತಂದೊಡ್ಡಿತ್ತು. ಇದರಿಂದ ಲಕ್ಷಾಂತರ ಫ್ಲ್ಯಾಟ್‌ದಾರರು ಸಂಕಷ್ಟಕ್ಕೆ ಒಳಗಾಗಿ ಕಾನೂನು ಮೊರೆ ಹೋಗಬೇಕಾಗಿತ್ತು. ಆದರೀಗ ಸಮಗ್ರ ರೂಪದಲ್ಲಿ ವಿಧೇಯಕ್ಕೆ ಒಪ್ಪಿಗೆ ಪಡೆದು ಕಾಯ್ದೆ ರೂಪದಲ್ಲಿ ಜಾರಿಗೆ ತರಲು ಸರ್ಕಾರ ಮುತುವರ್ಜಿ ವಹಿಸಬೇಕು ಎಂದು ಬಿಎಎಫ್​ ಅಧ್ಯಕ್ಷ ಸತೀಶ್ ಮಲ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಎಎಫ್​ ಸದಸ್ಯೆ ಜಿ. ಸುಜಾತ ಮಾತನಾಡಿ, ಬಿಲ್ಡರ್ಸ್‌ ಸೇರಿದಂತೆ ರೇರಾ ಹಾಗೂ ಇತರ ಕಾಯ್ದೆಗಳು ಅಪಾರ್ಟ್‌ಮೆಂಟ್ ವಾಸಿಗಳಿಗೆ ಗೊಂದಲ ಮೂಡಿಸುವಂತಿದ್ದು, ಹಕ್ಕುಗಳ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇದಕ್ಕೀಗ ಕೊನೆಯಾಡಿದ್ದು ಫ್ಲ್ಯಾಟ್‌ದಾರರ ಹಿತಾಸಕ್ತಿ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಪ್ರತಿ ಅಪಾರ್ಟ್​​ಮೆಂಟ್ ಯೋಜನೆಗೆ ಒಂದು ಕಾನೂನುಬದ್ಧ ಅಸೋಸಿಯೇಷನ್ ಎಂಬ ಪರಿಕಲ್ಪನೆ ಅಪಾರ್ಟ್‌ಮೆಂಟ್ ಆಡಳಿತವನ್ನು ಮತ್ತಷ್ಟು ವ್ಯವಸ್ಥಿತಗೊಳಿಸಲಾಗಿದೆ. ಇಂತಹ ಕಾಯ್ದೆ ರೂಪಿಸಿದ ಸರ್ಕಾರ ಹಾಗೂ ಮುಖ್ಯಮಂತ್ರಿಯವರಿಗೆ ಧನ್ಯವಾದ ಅರ್ಪಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಎಎಫ್​​ ಪ್ರಧಾನ ಕಾರ್ಯದರ್ಶಿ ಕೆ.ಅರುಣ್‌ಕುಮಾರ್, ಸದಸ್ಯ ವಿಶ್ವ ವೆಂಕಟ ರೆಡ್ಡಿ ಹಾಜರಿದ್ದರು.

ಹೊಸ ಕಾಯ್ದೆಯಿಂದಾಗುವ ಪ್ರಮುಖ ಪ್ರಯೋಜನ:

* ಹಸ್ತಾಂತರದ ನಂತರವೂ ಪ್ರೊಮೋಟರ್‌ಗಳಿಗೆ ಹೊಣೆಗಾರಿಕೆ ಹಂಚಿಕೆ
* ಕಾಮನ್ ಏರಿಯಾಗಳಿಗೆ ಹೆಚ್ಚಿನ ರಕ್ಷಣೆ, ಕಾನೂನು ಮಾನ್ಯತೆ
* ಅಸೋಸಿಯೇಷನ್ ರಚನೆಗೆ ಕಾಲಮಿತಿ ನಿಗದಿ
* ಭವಿಷ್ಯದ ಅಭಿವೃದ್ಧಿಗೆ ಅಪಾರ್ಟ್‌ಮೆಂಟ್ ಮಾಲೀಕರಿಗೆ ಸಾಮೂಹಿಕ ಹಕ್ಕು
* ಕಟ್ಟಡ ಸುರಕ್ಷತೆ ಹಾಗೂ ಪುನರ್ ಅಭಿವೃದ್ಧಿಗೆ ಕಾನೂನು ಚೌಕಟ್ಟು