ಬೆಂಗಳೂರು: ಸ್ತನ ಕ್ಯಾನ್ಸರ್ ಚಿಕಿತ್ಸೆಯ ಜತೆಗೆ ರೋಗಿಗಳಿಗೆ ಮಾನಸಿಕ ಧೈರ್ಯ ಮತ್ತು ನಿರಂತರ ಬೆಂಬಲ ಹಾಗೂ ಆರೈಕೆಗೆ ಒತ್ತು ನೀಡುವ ಉದ್ದೇಶದೊಂದಿಗೆ ಸ್ತನ ಕ್ಯಾನ್ಸರ್ನಿಂದ ಚೇತರಿಸಿಕೊಂಡ ಮಹಿಳೆಯರು ರೋಗಿಗಳಿಗೆ ನೆರವಾಗಲು ಎಚ್ಎಎಲ್ ವಿಮಾನ ನಿಲ್ದಾಣ ರಸ್ತೆಯಲ್ಲಿನ ಮಣಿಪಾಲ್ ಆಸ್ಪತ್ರೆಯು ‘ಶೀ ರೈಸಸ್’ ಶೀರ್ಷಿಕೆಯಡಿ ತರಬೇತಿ ಕಾರ್ಯಕ್ರಮ ಆರಂಭಿಸಿದೆ.
ಆಸ್ಪತ್ರೆಯು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಲಯ ನಿರ್ದೇಶಕ ಡಾ. ಮನೀಶ್ ರೈ ಮತ್ತು ಆಸ್ಪತ್ರೆಯ ನಿರ್ದೇಶಕಿ ನಯನಾ ಪೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ತನ ಕ್ಯಾನ್ಸರ್ನಿಂದ ಚೇತರಿಸಿಕೊಂಡ ಮಹಿಳೆಯರಿಗೆ ಈ ಕಾರ್ಯಕ್ರಮದಡಿ ತರಬೇತಿ ನೀಡಲಿದ್ದು, ಇಲ್ಲಿ ತರಬೇತಿ ಪಡೆದ ಮಹಿಳೆಯರು ರೋಗಿಗಳಿಗೆ ನೆರವಾಗುವ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ, ಸೂಕ್ತ ಚಿಕಿತ್ಸೆ ಮತ್ತು ಪರಸ್ಪರ ಬೆಂಬಲದ ಮೂಲಕ ಮಹಿಳೆಯರು ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಡಲು ನೆರವಾಗುವುದು ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಆಸ್ಪತ್ರೆಯ ವೈದ್ಯರು ಹೇಳಿದರು. ಈ ಜಾಗೃತಿ ಕಾರ್ಯಕ್ರಮದಲ್ಲಿ ನಾಲ್ಕು ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಸ್ತನ ಕ್ಯಾನ್ಸರ್ನಿಂದ ಚೇತರಿಸಿಕೊಂಡ ಮಹಿಳೆಯರು, ಕ್ಯಾನ್ಸರ್ನ ಅಪಾಯಕಾರಿ ಅಂಶಗಳು, ಶಸ್ತ್ರಚಿಕಿತ್ಸೆ, ದುಗ್ಧರಸ ಗ್ರಂಥಿಗಳ ಪರೀಕ್ಷೆ ಮತ್ತು ಆನುವಂಶಿಕ ಸಲಹೆಯ ಕುರಿತು ಚರ್ಚಿಸಿದರು. ಆರಂಭಿಕ ಪತ್ತೆ, ಸ್ವಯಂ ಸ್ತನ ಪರೀಕ್ಷೆ ಮತ್ತು ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವುದರ ಮಹತ್ವವನ್ನು ತಿಳಿಸಿದರು.