ಜಿಬಿಎ 
ಬೆಂಗಳೂರು

ಒತ್ತುವರಿ ತೆರವು ಬೀದಿಬದಿ ವ್ಯಾಪಾರಿಗಳಿಗಷ್ಟೇ ಸೀಮಿತವಾಗದಿರಲಿ?

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ತಾರತಮ್ಯ ಮಾಡದೆ ಕಾರ್ಯಾಚರಣೆ ನಡೆಸಬೇಕೆಂದು ಒತ್ತಾಯ
  • ವಾಹನ ನಿಲುಗಡೆ, ಶ್ರೀಮಂತರ ಒತ್ತುವರಿ ವಿರುದ್ಧವೂ ಕ್ರಮವಾಗಲಿ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ಗ್ರೇಟರ್​ ಬೆಂಗಳೂರು ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸುವ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ. ಶೇ.15 ತೆರವು ಕಾರ್ಯ ನಡೆದಿದ್ದು, ಸಾರ್ವಜನಿಕರಿಗೆ ಸುರಕ್ಷಿತ ಸಂಚಾರ ಕಲ್ಪಿಸುವ ಜಿಬಿಎ ಉದ್ದೇಶ ಶ್ಲಾಘನೀಯವಾಗಿದೆ. ಆದರೆ, ಬೀದಿಬದಿ ವ್ಯಾಪಾರಿಗಳಿಗಷ್ಟೇ ತೆರವು ಕಾರ್ಯಾಚರಣೆ ನಡೆಸದೆ ವಾಹನ ನಿಲುಗಡೆ, ಶ್ರೀಮಂತ ವ್ಯಕ್ತಿಗಳ ುಟ್​ಪಾತ್​ ಒತ್ತುವರಿಯನ್ನೂ ತೆರವುಗೊಳಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. 
ಪಾದಚಾರಿ ಮಾರ್ಗದಲ್ಲಿ ಹಣ್ಣು, ತರಕಾರಿ, ಹೂವು, ಎಳನೀರು ಮಾರುವ ಸಣ್ಣಪುಟ ವ್ಯಾಪಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಅಧಿಕಾರಿಗಳು, ಅದೇ ಮಾರ್ಗವನ್ನು ದಿನವಿಡೀ ಆಕ್ರಮಿಸಿಕೊಳ್ಳುವ ಐಷಾರಾಮಿ ಕಾರುಗಳು, ಶೋರೂಂಗಳು, ವಾಣಿಜ್ಯ ಕಟ್ಟಡಗಳು ಹಾಗೂ ಶಾಶ್ವತ ಅತಿಕ್ರಮಣಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತವಾಗಿದೆ. 
ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳು ಅಂಗಡಿಗಳ ಮೆಟ್ಟಿಲು, ರ್ಯಾಂಪ್​, ಜಾಹೀರಾತು ಫಲಕ, ಕಾಂಪೌಂಡ್​, ಪಾರ್ಕಿಂಗ್​ ಸ್ಥಳಗಳಾಗಿ ಬದಲಾಗಿರುವುದು ಹೊಸ ವಿಷಯವಲ್ಲ. ಅನೇಕ ಕಡೆಗಳಲ್ಲಿ ದುಬಾರಿ ಕಾರುಗಳನ್ನು ಗಂಟೆಗಟ್ಟಲೆ ಫುಟ್​ಪಾತ್​ ಮೇಲೆಯೇ ನಿಲ್ಲಿಸಲಾಗುತ್ತಿದೆ. ಪರಿಣಾಮ ಪಾದಚಾರಿಗಳು ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ನಿಮಾರ್ಣವಾಗುತ್ತಿದೆ. ಆದರೆ, ಇಂತಹ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವ ಆರೋಪ ಕೇಳಿಬಂದಿದೆ. ಕೆಲ ಪ್ರಮುಖ ಏರಿಯಾಗಳಲ್ಲಿ ುಟ್​ಪಾತ್​ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಇನ್ನೂ ಆರಂಭವಾಗಿಲ್ಲ. 
ಬೀದಿಬದಿ ವ್ಯಾಪಾರಿಗಳ ಒತ್ತುವರಿ ಗೋಚರವಾಗುವುದರಿಂದ ಅವರ ಮೇಲೆ ಕ್ರಮ ಕೈಗೊಳ್ಳುವುದು ಸುಲಭ. ಆದರೆ ರಾಜಕೀಯ ಪ್ರಭಾವ, ಆರ್ಥಿಕ ಸಾಮರ್ಥ್ಯ ಹೊಂದಿರುವವರಿಂದ ನಡೆದಿರುವ ಶಾಶ್ವತ ಅತಿಕ್ರಮಣಗಳ ತೆರವಿಗೆ ಅದೇ ವೇಗ ಕಾಣುತ್ತಿಲ್ಲ ಎನ್ನುವುದು ನಾಗರಿಕ ಹಾಗೂ ಸಂಘಟನೆಗಳ ಅಭಿಪ್ರಾಯವಾಗಿದೆ. 
ಸಮನೀತಿ ಅಗತ್ಯ
ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿಗೆ ಬೀದಿಬದಿ ವ್ಯಾಪಾರಿಗಳು ಮಾತ್ರ ಕಾರಣರಲ್ಲ. ಸಮರ್ಪಕ ಪಾರ್ಕಿಂಗ್​ ವ್ಯವಸ್ಥೆಯ ಕೊರತೆ, ಕಟ್ಟಡ ನಿಮಾರ್ಣ ನಿಯಮಗಳ ಉಲ್ಲಂಘನೆ, ರಸ್ತೆ ಬದಿಯ ವಾಣಿಜ್ಯ ಚಟುವಟಿಕೆಗಳ ಅನಿಯಂತ್ರಿತ ವಿಸ್ತರಣೆ ಕೂಡ ಪ್ರಮುಖ ಕಾರಣಗಳಾಗಿವೆ. ಇವುಗಳನ್ನು ರ್ನಿಲಕ್ಷಿಸಿ ಕೇವಲ ಸಣ್ಣ ವ್ಯಾಪಾರಿಗಳನ್ನು ತೆರವುಗೊಳಿಸುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ನಗರ ಯೋಜನಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಬೀದಿಬದಿ ವ್ಯಾಪಾರಿಗಳ ಜೀವನೋಪಾಯವೂ ಸರ್ಕಾರದ ಗಮನಕ್ಕೆ ಬರಬೇಕಿದೆ. ಸಾವಿರಾರು ಕುಟುಂಬಗಳು ಪ್ರತಿದಿನದ ವ್ಯಾಪಾರವನ್ನೇ ನಂಬಿ ಬದುಕುತ್ತಿವೆ. ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ತೆರವು ಕಾರ್ಯಾಚರಣೆ ನಡೆಸುವುದರಿಂದ ಜೀವನೋಪಾಯದ ಮೇಲೆಯೇ ಹೊಡೆತ ಬೀಳುತ್ತಿದೆ. "ತೆರವು ಮಾಡುತ್ತಿಲ್ಲ, ನಾವು ಸ್ಥಳಾಂತರಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಪಾದಚಾರಿಗಳ ಹಕ್ಕು ಮತ್ತು ಬೀದಿಬದಿ ವ್ಯಾಪಾರಿಗಳ ಬದುಕುವ ಹಕ್ಕು ಎರಡರ ನಡುವೆಯೂ ಸಮತೋಲನ ಸಾಧಿಸುವ ನೀತಿಯ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 
ಅಡೆತಡೆ ಎಲ್ಲ ನಿವಾರಿಸಿ...
ನಗರದ ಅಭಿವೃದ್ಧಿ ಎಂದರೆ ಕೇವಲ ಫುಟ್​ಪಾತ್​ಗಳನ್ನು ತೆರವುಗೊಳಿಸುವುದಲ್ಲ. ಇಂದಿನ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳ ಜಾಗವನ್ನು ವಿದ್ಯುತ್​ ಟ್ರಾನ್ಸ್​ಫಾರ್ಮರ್​ಗಳು, ವಿದ್ಯುತ್​ ಕಂಬಗಳು, ಜಂಕ್ಷನ್​ ಬಾಕ್ಸ್​ಗಳು, ಜಾಹೀರಾತು ಫಲಕಗಳು, ಕೇಬಲ್​ ಬಾಕ್ಸ್​ಗಳು, ಅನಧಿಕೃತ ವಾಹನ ನಿಲುಗಡೆ, ರಸ್ತೆಬದಿ ನಿಮಾರ್ಣ ಸಾಮಗ್ರಿಗಳು ಕೂಡ ಆಕ್ರಮಿಸಿಕೊಂಡಿವೆ. ಹಲವೆಡೆ ಪಾದಚಾರಿ ಮಾರ್ಗವೇ ಅಪೂರ್ಣವಾಗಿದ್ದು, ಕೆಲವೆಡೆ ಮಧ್ಯದಲ್ಲೇ ಕೊನೆಗೊಳ್ಳುತ್ತದೆ. ಇಂತಹ ಮೂಲಸೌಕರ್ಯ ಸಮಸ್ಯೆಗಳನ್ನು ಬಗೆಹರಿಸದೆ ಕೇವಲ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವುದರಿಂದ ಪಾದಚಾರಿಗಳಿಗೆ ಸಂಪೂರ್ಣ ಅನುಕೂಲ ಸಿಗುವುದಿಲ್ಲ. ನಗರದಲ್ಲಿ ಪಾದಚಾರಿಸ್ನೇಹಿ ವಾತಾವರಣ ನಿಮಾರ್ಣವಾಗಬೇಕಾದರೆ ಎಲ್ಲ ರೀತಿಯ ಅಡೆತಡೆಗಳನ್ನು ಸಮಾನವಾಗಿ ತೆರವುಗೊಳಿಸಬೇಕು. ಯೋಜಿತ ಪಾದಚಾರಿ ಮಾರ್ಗ, ವೈಜ್ಞಾನಿಕ ಪಾರ್ಕಿಂಗ್​ ವ್ಯವಸ್ಥೆ, ಬೀದಿ ವ್ಯಾಪಾರಿಗಳಿಗೆ ಗುರುತಿಸಲಾದ ವಲಯಗಳು ಹಾಗೂ ಕಟ್ಟಡ ನಿಯಮ ಉಲ್ಲಂಘನೆಗಳ ವಿರುದ್ಧ ನಿರಂತರ ಕಾರ್ಯಾಚರಣೆ ಕೈಗೊಂಡಾಗ ಮಾತ್ರ ನಗರದ ಸೌಂದರ್ಯ ಮತ್ತು ಸಾರ್ವಜನಿಕರ ಹಿತಾಸಕ್ತಿ ಎರಡನ್ನೂ ಸಮತೋಲನದಲ್ಲಿ ಕಾಪಾಡಲು ಸಾಧ್ಯವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪಾದಚಾರಿ ಮಾರ್ಗ ಮತ್ತು ಚರಂಡಿಗಳ ಮೇಲೆ ಅನಧಿಕೃತ ರ್ಯಾಂಪ್​ ನಿರ್ಮಾಣ, ವರ್ಷಗಳಿಂದ ಅಲ್ಲಲ್ಲಿ ಪಾರ್ಕಿಂಗ್​ ಮಾಡಿರುವ ವಾಹನಗಳ ತೆರವಿಗೆ ಪಶ್ಚಿಮ ಪಾಲಿಕೆ ವ್ಯಾಪ್ತಿಯ ಬಸವನಗುಡಿಯಲ್ಲಿ ಸುಮಾರು 2 ವರ್ಷದಿಂದ ಹೋರಾಟ ಮಾಡಿಕೊಂಡಿದ್ದು ಬಂದಿದ್ದೇವೆ. ಅಕ್ರಮ ಕಟ್ಟಡಗಳು, ಪಾರ್ಕಿಂಗ್​ ದುರುಪಯೋಗ, ನಿಯಮಬಾಹಿರ ವ್ಯಾಪಾರ ಪರವಾನಗಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರಸ್ತೆ, ಪಾದಚಾರಿ ಮಾರ್ಗ ಸೇರಿ ಮೂಲಸೌಕರ್ಯಗಳ ಸಮಸ್ಯೆಗಳಿಗೆ ಶ್ರೀ ಪರಿಹಾರ ಕಲ್ಪಿಸಬೇಕು.

— ಸತ್ಯಲಕ್ಷಿ$್ಮ ರಾವ್​, ಅಧ್ಯೆ, ಬಸವನಗುಡಿ ವಾರ್ಡ್​ ನಂ&154 ರೆಸಿಡೆಂಟ್ಸ್​ ಅಸೋಸಿಯೇಷನ್​
ಸರ್ಕಾರ ಏನು ಹೇಳುತ್ತದೆ?
ಸಾರ್ವಜನಿಕರಿಗೆ ಸುರಕ್ಷಿತ, ಸುಗಮ ಹಾಗೂ ಅಡೆತಡೆಯಿಲ್ಲದ ಪಾದಚಾರಿ ಸಂಚಾರ ಕಲ್ಪಿಸುವ ಉದ್ದೇಶದಿಂದ ಫುಟ್​ಪಾತ್​ಗಳ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ಕುರಿತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ. ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸ್ವತ್ತಾಗಿದ್ದು, ಅವುಗಳನ್ನು ಒತ್ತುವರಿಯಿಂದ ಮುಕ್ತಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ. ಬೀದಿಬದಿ ವ್ಯಾಪಾರಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವ ಉದ್ದೇಶವಿಲ್ಲ; ಬದಲಾಗಿ ಅವರಿಗೆ ಸ್ಟ್ರೀಟ್​ ವೆಂಡರ್ಸ್​ (ಜೀವನೋಪಾಯ ರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಕಾಯ್ದೆ&2014ರಡಿ ಗುರುತಿಸಲಾದ ವ್ಯಾಪಾರ ವಲಯಗಳಲ್ಲಿ ಅವಕಾಶ ಕಲ್ಪಿಸಲಾಗುವುದು. ಪಾದಚಾರಿಗಳ ಸುರಕ್ಷತೆಯ ನಿಟ್ಟಿನಲ್ಲಿ ಶೇ.20 ಜನಜಂಗುಳಿ ಹಾಗೂ ಮುಖ್ಯರಸ್ತೆಯಲ್ಲಿ ಮಾತ್ರ ತೆರವುಗೊಳಿಸಲಾಗುವುದು. ವಾರ್ಡ್​ಗಳಲ್ಲಿ ಬೀದಿಬದಿ ವ್ಯಾಪಾರಗಳು ನಿರಾತಂಕವಾಗಿ ನಡೆಯುತ್ತಿವೆ. ಕಾರ್ಯಾಚರಣೆಗೆ ಮುನ್ನ ಸಂಬಂಧಪಟ್ಟವರಿಗೆ ನೋಟೀಸ್​ ನೀಡಲಾಗಿದೆ ಎಂದು ತಿಳಿಸಿದ್ದಾರೆ.