- ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತರ ಸೂಚನೆ
- ತ್ಯಾಜ್ಯದಿಂದ ಸ್ವಾತಂತ್ರ್ಯ' ಅಭಿಯಾನಕ್ಕೆ ಮುನ್ನ ಸ್ಥಳ ಪರಿಶೀಲನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಜಿಬಿಎ ವ್ಯಾಪ್ತಿಯಲ್ಲಿ ಆ.1ರಿಂದ ಆರಂಭವಾಗಲಿರುವ 'ತ್ಯಾಜ್ಯದಿಂದ ಸ್ವಾತಂತ್ರ್ಯ' ಅಭಿಯಾನದಲ್ಲಿ ಸ್ವಚ್ಛತೆ, ತ್ಯಾಜ್ಯ ತೆರವು ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉತ್ತರ ಹಾಗೂ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಎಸ್ಟೀಮ್ ಮಾಲ್ ಮುಂಭಾಗ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಪ್ರದೇಶದಲ್ಲಿ ಮಳೆನೀರು ಚರಂಡಿಗೆ ಕೊಳಚೆ ನೀರು ಹರಿಯುತ್ತಿರುವುದು ಕಂಡುಬಂದ ಹಿನ್ನೆಲೆ ಜಲಮಂಡಳಿ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲಿಸಿ, ಯಾವ ಕಟ್ಟಡದಿಂದ ಕೊಳಚೆ ನೀರು ಹರಿಯುತ್ತಿದೆ ಎಂಬುದನ್ನು ಪತ್ತೆಹಚ್ಚಿ ಸಂಬಂಧಿಸಿದ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸುವಂತೆ ಸೂಚಿಸಿದರು.
ಮೆಟ್ರೋ ಕಾಮಗಾರಿ ಪ್ರದೇಶದಲ್ಲಿ ಹಾಳಾಗಿರುವ ಚರಂಡಿ ಸ್ಲ್ಯಾಬ್ಗಳನ್ನು ಬದಲಿಸಿ, ತೆರೆದಿರುವ ಚರಂಡಿಗಳಿಗೆ ಹೊಸ ಸ್ಲ್ಯಾಬ್ ಅಳವಡಿಸಿ ಸಾರ್ವಜನಿಕ ಸುರಕ್ಷತೆ ಖಚಿತಪಡಿಸಬೇಕು. ಎಸ್ಟೀಮ್ ಮಾಲ್ ಸಮೀಪ ಸಾರ್ವಜನಿಕ ಶೌಚಗೃಹದ ಸ್ವಚ್ಛತೆ ಹಾಗೂ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ತಾಕೀತು ಮಾಡಿದರು.
ಎಸ್ಟೀಮ್ ಮಾಲ್ನಿಂದ ಹೆಬ್ಬಾಳ ಜಂಕ್ಷನ್ವರೆಗೆ ಎಡಭಾಗದಲ್ಲಿರುವ ಕೆಐಎಡಿಬಿ ಹಾಗೂ ಬಿಡಿಎ ಭೂಸ್ವಾಧಿನ ಪ್ರದೇಶಗಳಲ್ಲಿ ಮತ್ತು ಮೆಟ್ರೋ ಕಾಮಗಾರಿ ಪ್ರದೇಶದಲ್ಲಿ ದೀರ್ಘಕಾಲದಿಂದ ಸಂಗ್ರಹವಾಗಿರುವ ಡೆಬ್ರಿಸ್ ಹಾಗೂ ಬೆಳೆದಿರುವ ಗಿಡಗಂಟಿಗಳನ್ನು ಅಭಿಯಾನದಡಿ ತೆರವುಗೊಳಿಸಿ ಪ್ರದೇಶವನ್ನು ಸ್ವಚ್ಛ ಹಾಗೂ ಸುಂದರವಾಗಿಸಲು ಬೆಂಗಳೂರು ಉತ್ತರ ಪಾಲಿಕೆ, ವಿವಿಧ ಇಲಾಖೆಗಳ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಯಿತು.
ಭದ್ರಪ್ಪ ಲೇಔಟ್ ಮೇಲ್ಸೇತುವೆ ಇಳಿಜಾರು ಭಾಗದಲ್ಲಿ ಪ್ರಯಾಣಿಕರು ಬಸ್ ನಿಲ್ದಾಣವನ್ನು ಬಳಸದೆ ರಸ್ತೆಯಲ್ಲೇ ಬಸ್ ಏರುತ್ತಿರುವುದು ಅಪಾಯಕಾರಿ ಎಂದು ಸೂಚಿಸಿದ ಜಿಬಿಎ ಮುಖ್ಯ ಆಯುಕ್ತರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಬಸ್ ನಿಲ್ದಾಣವನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ, ಬಸ್ಗಳು ಅಲ್ಲೇ ನಿಲ್ಲುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.