- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ
- 435 ಕಿ.ಮೀ. ಪಾದಚಾರಿ ಮಾರ್ಗ ಸಂಚಾರ ಯೋಗ್ಯ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಜುಲೈ 1 ರಿಂದ ಈವರೆಗೂ ಒಟ್ಟು 435 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳಲ್ಲಿ 9,878 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದ ವಿವಿಧ ಕಡೆಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಹಾಗೂ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಕುರಿತು ಶುಕ್ರವಾರ ನಗರ ಪ್ರದಕ್ಷಿಣೆ ನಡೆಸಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರಿಂದ ಮಾಹಿತಿ ಪಡೆದ ಸಿಎಂ, ಜಯನಗರದ ಅಶೋಕ ಸ್ಥಂಭದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಒಟ್ಟು 1,340 ಅಂಗಡಿಗಳಿದ್ದವು, ಸುಮಾರು 1,800 ತಳ್ಳುವ ಗಾಡಿಗಳಿದ್ದವು. ತಳ್ಳುವ ಗಾಡಿಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಸುಮಾರು 2,267 ಅಂಗಡಿ ಮುಂಭಾಗದಲ್ಲಿ ತಗಡಿನ ಶೀಟ್ಗಳನ್ನು ಅಳವಡಿಸಲಾಗಿತ್ತು ಅದನ್ನೂ ತೆಗೆಯಲಾಗಿದೆ. 2,300 ಮೆಟ್ಟಿಲು, ರ್ಯಾಂಪ್ಗಳು, 2,662 ಪಿಲ್ಲರ್ಗಳು ಬೋರ್ಡ್ಗಳು, 2,247 ಶೆಡ್ಗಳನ್ನು ತೆರವುಗೊಳಿಸಲಾಗಿದೆ. ತೆರವಾದ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದು, ಜತೆಗೆ ಪಾದಚಾರಿ ಮಾರ್ಗಗಳನ್ನು ದುರಸ್ತಿ ಕೆಲಸವನ್ನೂ ಮಾಡಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು.
ಬೀದಿಬದಿ ವ್ಯಾಪಾರಿಗಳು ನಮ್ಮವರೇ..:
ಬೀದಿಬದಿ ವ್ಯಾಪಾರಿಗಳು ನಮ್ಮವರೇ ಆಗಿದ್ದಾರೆ. ಆತಂಕ ಬೇಡ. ಖಾಸಗಿ ಅಥವಾ ಸರ್ಕಾರಿ ಜಾಗ ಇರಬಹುದು ಯಾವುದೋ ಜಾಗದಲ್ಲಿ ವ್ಯಾಪಾರ ಮಾಡುವುದಕ್ಕೆ ಆಗುವುದಿಲ್ಲ. ಬೀದಿಬದಿ ವ್ಯಾಪಾರಿಗಳಿಗೂ ನಮ್ಮ ಸರ್ಕಾರ ಅವಕಾಶ ಮಾಡಿಕೊಡುತ್ತದೆ. ಬೀದಿಬದಿ ವ್ಯಾಪಾರಿಗಳು ಬದುಕಬೇಕು ಎಂಬ ಆಸೆ ನಮಗೂ ಇದೆ ಎಂದರು.
ನಾವು ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿದ್ದೆವು. ಅದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಈಗ ಮತ್ತೆ ಈ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ. ನಿಮಗಾಗಿಯೇ ಯೋಗ್ಯ ಜಾಗಗಳನ್ನು ಗುರುತಿಸಲಾಗುವುದು. ಅಲ್ಲಿ ನೀವು ವ್ಯಾಪಾರ ನಡೆಸಬಹುದು ಎಂದು ಬೀದಿಬದಿ ವ್ಯಾಪಾರಿಗಳಿಗೆ ಸಿಎಂ ಭರವಸೆ ನೀಡಿದರು.
ಇದರ ಹಿಂದೆ ದೊಡ್ಡ ಮಾಫಿಯಾ ಇದೆ:
ಬೆಂಗಳೂರಿನ ಸುಧಾರಣೆಗಾಗಿ ನಾವು ಟೀಕೆಗಳನ್ನು ಸ್ವೀಕರಿಸಲು ಸಿದ್ಧರಿದ್ದೇವೆ. ಇದರ ಹಿಂದೆ ದೊಡ್ಡ ಮಾಫಿಯಾ ಇದೆ. ರೌಡಿಗಳು ವ್ಯಾಪಾರಿಗಳಿಂದ ವಸೂಲಿ ಮಾಡುವ ಕೆಲಸಗಳು ನಡೆದಿವೆ. ಈ ಬಗ್ಗೆ ಮಾಹಿತಿಯೂ ನಮಗಿದೆ. ಪೊಲೀಸ್ ಹಾಗೂ ಜಿಬಿಎ ಅಧಿಕಾರಿಗಳಿಗೆ ನಾವು ಸ್ವಾತಂತ್ರ್ಯ ನೀಡಿದ್ದೇವೆ. ಸ್ವಚ್ಛ ಬೆಂಗಳೂರು ನಮ್ಮ ಗುರಿ. ಇಡೀ ದೇಶ ಬೆಂಗಳೂರನ್ನು ಗಮನಿಸುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಈಗಾಗಲೆ ಮೂರು ವರ್ಷಗಳಲ್ಲಿ ಸುಮಾರು 900ಕ್ಕೂ ಹೆಚ್ಚು ಪಾದಚಾರಿಗಳ ಸಾವಾಗಿದೆ. ಅದ್ದರಿಂದ ನಾಗರಿಕರು ಅನುಕೂಲಕ್ಕಾಗಿ ನಾವು ಈ ಕೆಲಸ ಮಾಡುತ್ತಿದ್ದೇವೆ. ಇದೇನು ನಮ್ಮ ಸ್ವಂತ ಲಾಭಕ್ಕಾಗಿ ಮಾಡುತ್ತಿರುವ ಕೆಲಸವಲ್ಲ. ಪಾದಚಾರಿ ಮಾರ್ಗ ಇಲ್ಲ ಎಂದರೆ ಜನ ರಸ್ತೆಯಲ್ಲಿ ನಡೆಯುತ್ತಾರೆ. ಆಗ ವಾಹನಗಳ ಓಡಾಟಕ್ಕೂ ತೊಂದರೆ ಉಂಟಾಗಲಿದೆ. ಕಳೆದ ಹದಿನೈದು ದಿನದಿಂದ ಏನೇನು ಕೆಲಸವಾಗಿದೆ ಎಂದು ಅವಲೋಕಿಸಿದ್ದೇನೆ ಎಂದರು.
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಆರೋಪ ಮಾಡಲಾಗುತ್ತಿದೆ ಎಂದು ಕೇಳಿದಾಗ, "ಬಹಳ ಸಂತೋಷ, ಆರೋಪ ಮಾಡುವವರೆಲ್ಲ ಮಾಡಲಿ. ಅವರಿಗೆ ಬೇರೆ ಜಾಗಗಳನ್ನು ನಾವು ಗುರುತಿಸಿ ನೀಡುತ್ತೇವೆ. ಹೆಚ್ಚು ವಾಹನಗಳು ಓಡಾಡುವ ಕಡೆ ಹಾಗೂ ಯಾರದೋ ಆಸ್ತಿಯ ಮುಂದೆ ವ್ಯಾಪಾರ ಮಾಡಲು ಅವಕಾಶವಿಲ್ಲ. ಯಾವುದೇ ತೊಂದರೆಯಿಲ್ಲದ ಜಾಗವನ್ನು ನೋಡಲಾಗುವುದು. ಯಾರಿಗೂ ಅನಾನುಕೂಲವಾಗದ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು. ಬೆಳಗ್ಗೆ ಬರಬೇಕು, ಸಾಯಂಕಾಲ ಹೋಗಬೇಕು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಜಯನಗರ ಮಾರುಕಟ್ಟೆ ಬಗ್ಗೆ ಶೀಘ್ರ ತೀಮಾರ್ನ
ಜಯನಗರ ಮಾರುಕಟ್ಟೆ ಬಗ್ಗೆ ಸದ್ಯದಲ್ಲೇ ತೀಮಾರ್ನ ಮಾಡಲಾಗುವುದು. ಅರ್ಧ ಕಟ್ಟಡ ನಿಮಾರ್ಣವಾಗಿದೆ. ಇನ್ನರ್ಧ ಕೆಲಸವಾಗಬೇಕು. ಶೀಘ್ರದಲ್ಲೇ ಈ ಕೆಲಸವನ್ನೂ ಮಾಡಲಾಗುವುದು. ಯಾವುದಾದರೂ ಒಂದು ಯೋಜನೆಯ ಅಡಿಯಲ್ಲಿ ಈ ಕೆಲಸ ಮಾಡಲಾಗುವುದು. ನಮ್ಮ ಆಸ್ತಿಗಳನ್ನು ರಕ್ಷಣೆ ಮಾಡಿ ನಾಗರಿಕರಿಗೆ ಗೌರವ ಕೊಡುವಂತಹ ಕೆಲಸಗಳನ್ನು ನಾವು ಮಾಡುತ್ತೇವೆ ಎಂದು ಸಿಎಂ ಹೇಳಿದರು.