- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸುಪ್ರಿಂ ಕೋರ್ಟ್ ಆದೇಶವನ್ನು ನಾವು ಪಾಲಿಸಿಕೊಂಡು ಪಾದಚಾರಿ ಮಾರ್ಗದಲ್ಲಿರುವ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜೀ ಇಲ್ಲ. ಆದರೆ, ಬೀದಿಬದಿ ವ್ಯಾಪಾರಿಗಳ ಜೀವನೋಪಾಯಕ್ಕೂ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪಾಲಿಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕೇಂದ್ರ ಕಚೇರಿಯಲ್ಲಿ ಗುರುವಾರ ಬೀದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ ಪದಾಧಿಕಾರಿಗಳ ಜತೆ ನಡೆಸಿ, ತ್ರೀವ್ರ ವಿರೋಧ ಮತ್ತು ಆಕ್ರೋಶದ ನಡುವೆಯು ಪಾದಚಾರಿ ಮಾರ್ಗ ಒತ್ತುವರಿ ತೆರವಿನ ಮಹತ್ವವನ್ನು ಮನದಟ್ಟು ಮಾಡಿಸಿದ್ದಾರೆ.
ನಾಗರಿಕರು ಓಡಾಡಲು ಸುಗಮ ಮಾರ್ಗ ನಿರ್ಮಿಸಲು ನಾವು ಈ ಕ್ರಮ ಕೈಗೊಳ್ಳುತ್ತಿದ್ದೇವೆ. ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಬೀದಿಬದಿ ವ್ಯಾಪಾರಿಗಳ ಸಹಕಾರ ಪ್ರಮುಖವಾಗಿ ಬೇಕಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಸುಮಾರು 1,500 ಕಿ.ಮೀ. ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕಾಗಿದ್ದು, ಅಲ್ಲಿ ವ್ಯಾಪಾರ ಮಾಡಲು ಅವಕಾಶವಿರುವುದಿಲ್ಲ. ಉಳಿದ ಶೇ. 80&-90 ವಾರ್ಡ್ ರಸ್ತೆಗಳಲ್ಲಿ ವ್ಯಾಪಾರ ಮಾಡಿಕೊಳ್ಳಲು ಅವಕಾಶವಿದೆ. ಅದಕ್ಕೆ ಪಾಲಿಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಪಾರ್ಕಿಂಗ್, ಗಾರ್ಡನ್ ಸೇರಿ ಪಾದಚಾರಿ ಮಾರ್ಗಗಳಲ್ಲಿರುವ ಎಲ್ಲ ಅಡೆತಡೆಗಳನ್ನು ಹಂತ- ಹಂತವಾಗಿ ಕೈಗೆತ್ತಿಕೊಳ್ಳುತ್ತೇವೆ. ಸುಪ್ರಿಂ ಕೋರ್ಟ್ ಅದೇಶ ಹಾಗೂ ಬೀದಿ ಬದಿ ವ್ಯಾಪಾರಿಗಳಿಗಾಗಿ ಇರುವ ಕಾಯ್ದೆ, ಕಾನೂನು ಅನುಷ್ಠಾನವನ್ನು ಪಾಲಿಸಲು ಕ್ರಮ ಕೈಗೊಳ್ಳಲಾಗುವುದು. ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಹೊಸ ಗುರುತಿನ ಚೀಟಿಗಳನ್ನು ತ್ವರಿತವಾಗಿ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಕಾನೂನು ಕೋಶ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಪಾಟೀಲ್, ಸಹಾಯ ಆಯುಕ್ತ ಮುರಳಿ, ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
430 ಕಿ.ಮೀ. ಒತ್ತುವರಿ ತೆರವು
ನಗರದಲ್ಲಿ ಬುಧವಾರದವರೆಗೆ 430 ಕಿ.ಮೀ. ಒತ್ತುವರಿ ತೆರವು ಮಾಡಲಾಗಿದೆ. ಇದನ್ನು ನಿರಂತರವಾಗಿ ಮುಂದುವರಿಸಲಾಗುವುದು. ಪಾದಚಾರಿ ಮಾರ್ಗಗಳಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಮಾತ್ರವಲ್ಲದೆ, ಗಂಗಡಿಗಳು, ಪೆಟ್ಟಿ ಅಂಗಡಿಗಳು, ತಳ್ಳುವ ಗಾಡಿಗಳು, ಶೀಟ್ಸ್, ಮೇಲ್ಚಾವಣಿ, ಕೆನೋಪಿ, ಮೆಟ್ಟಿಲುಗಳು, ರ್ಯಾಂಪ್ಸ್, ತಡೆಗೋಡೆಗಳು, ಜಾಹೀರಾತು, ನಾಮಫಲಕಗಳು, ತಾತ್ಕಾಲಿಕ ಅಥವಾ ಶಾಶ್ವತ ಶೆಡ್ಗಳನ್ನು ಕೂಡಾ ತೆರವುಗೊಳಿಸಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಬೆಂಗಳೂರಿನ ಒಟ್ಟಾರೆ ಸುಧಾರಣೆಗೆ ಕೆಲವು ಕಠಿಣ ತೀರ್ಮಾನಗಳು ಅನಿವಾರ್ಯವಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕಾರ್ಯಾಚರಣೆ ಮುಂದುವರಿಯಲಿದೆ. ಇದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಕಾನೂನಿನ ಚೌಕಟ್ಟಿನಲ್ಲಿಯೇ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ವೆಂಡಿಂಗ್ ಜೋನ್ ಗುರುತಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುವುದು.
— ಕೃಷ್ಣ ಬೈರೇಗೌಡ, ಬೆಂಗಳೂರು ನಗರಾಭಿವೃದ್ಧಿ ಸಚಿವ
ಪಾದಚಾರಿ ಮಾರ್ಗ 462.78 ಕಿ.ಮೀ. ಒತ್ತುವರಿ ತೆರವು
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಐದು ಪಾಲಿಕೆಗಳಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ 9 ದಿನ ಪೂರೈಸಿದ್ದು, ಜು.9ರ ವರೆಗೆ 5 ಪಾಲಿಕೆಗಳಿಂದ ಒಟ್ಟು 462.78 ಕಿ.ಮೀ. ಒತ್ತುವರಿಯನ್ನು ಮುಕ್ತಗೊಳಿಸಲಾಗಿದೆ.
ಕೇಂದ್ರ ಪಾಲಿಕೆಯಲ್ಲಿ 65.45 ಕಿ.ಮೀ., ಉತ್ತರ &111.98 ಕಿ.ಮೀ., ದಕ್ಷಿಣ &88.01 ಕಿ.ಮೀ., ಪಶ್ಚಿಮ &118.62 ಕಿ.ಮೀ.ಹಾಗೂ ಪೂರ್ವ ಪಾಲಿಕೆಯಲ್ಲಿ 78.72 ಕಿ.ಮೀ ಪಾದಚಾರಿ ಮಾರ್ಗ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಜಿಬಿಎ ತಿಳಿಸಿದೆ.
ಗುದ್ದಲಿ ಮೆರವಣಿಗೆ:
ಪಾದಚಾರಿ ಮಾರ್ಗ ಒತ್ತುವರಿ ತೆರವಿನಿಂದ ಬೀದಿಬದಿ ವ್ಯಾಪರಿಗಳ ಸ್ಥಿತಿ ಅತಂತ್ರವಾಗಿದೆ ಎಂದು ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ ನಡೆಸಿದರು. ಜೆಸಿಬಿಯ ಸಂಸತಿಯ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಚೇರಿ ಎದುರು ಗುದ್ದಲಿ ಮೆರವಣಿಗೆ ನಡೆಸಿದ್ದಾರೆ. ಬಡವರು, ದೀನದಲಿತರು, ನೋವಿನಲ್ಲಿರುವವರು, ದಿನಗೂಲಿಯವರು, ಹೊಟ್ಟೆ&ಬಟ್ಟೆಗಾಗಿ ನಡೆಸುತ್ತಿರುವ ಸಣ್ಣ&ಸಣ್ಣ ವ್ಯಾಪಾರಿಗಳು, ಒಂದು ಹೊತ್ತು ಊಟ ಮಾಡತಕ್ಕಂತಹವರು ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದರೆ ಜೆಸಿಬಿಯಿಂದ ಧಾಳಿ ಮಾಡಿ ಸಣ್ಣ&ಸಣ್ಣ ಅಂಗಡಿಗಳನ್ನು ಒಡೆದು ಉರುಳಿಸುತ್ತಿರುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫುಟ್ಪಾತ್ನಲ್ಲಿ ನಡೆಯಲು ದಾರಿ ಇಲ್ಲ ಎಂದು ಹೇಳಿ ಜೆಸಿಬಿಯಿಂದ ಒಡೆಯುವಂತಹ ಅಪರಾಧ ಏನು ಮಾಡಿದ್ದಾರೆ...? ಇದು ಸರ್ವಾಧಿಕಾರ ದೋರಣೆಯಾಗಿದ್ದು, ಇದರ ವಿರುದ್ಧ ನಿರಂತರವಾಗಿ ಹೋರಾಟ ನಡೆಯಲಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.