- ಜನಸ್ನೇಹಿ ಪಾದಚಾರಿ ಮಾರ್ಗ ಅಭಿವೃದ್ಧಿ ಉದ್ದೇಶ
- ಮೊದಲ ಹಂತದಲ್ಲಿ 100 ಕಿ.ಮೀ. ಪಾದಚಾರಿ ಮಾರ್ಗ ಅಭಿವೃದ್ಧಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಕಾರ್ಯಾಚರಣೆಗೆ ನಗರ ಆಡಳಿತ ಸಜ್ಜಾಗಿದೆ. ಬುಧವಾರದಿಂದ (ಜು. 1) ನಗರದಾದ್ಯಂತ ವಿಶೇಷ ಕಾರ್ಯಾಚರಣೆ ಆರಂಭವಾಗಲಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆ ನಡೆಯಲಿದ್ದು, ಆಯಾ ಪಾಲಿಕೆ ಆಯುಕ್ತರು, ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ನಗರದ ವಿವಿಧ ಭಾಗಗಳಲ್ಲಿ ಅಂಗಡಿಗಳು, ತಾತ್ಕಾಲಿಕ ನಿಮಾರ್ಣಗಳು, ಕಟ್ಟಡ ಸಾಮಗ್ರಿಗಳು, ಕಸ ಹಾಗೂ ಇತರೆ ಅಡೆತಡೆಗಳು ನಿವಾರಿಸುವುದು ಇದರ ಉದ್ದೇಶವಾಗಿದೆ.
ನಗರ ಪಾಲಿಕೆ ವ್ಯಾಪ್ತಿಯ ಸುಮಾರು 1,000 ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗಗಳ ನಿರ್ವಹಣೆಗೆ 2026-&27ನೇ ಸಾಲಿನ ಬಜೆಟ್ನಲ್ಲಿ ಅನುದಾನ ಮೀಸಲಿರಿಸಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾರ್ಯಾದೇಶ ನೀಡುವ ಹಂತದಲ್ಲಿದೆ. ಮೊದಲ ಹಂತದಲ್ಲಿ ಪ್ರತಿ ವಿಭಾಗದಲ್ಲಿ 15 ಕಿ.ಮೀ.ನಂತೆ 100 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರ ಬಳಕೆಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗುತ್ತಿದೆ.
ಇದರ ಭಾಗವಾಗಿ ಪ್ರತಿ ವಿಭಾಗದಲ್ಲೂ ದುರಸ್ತಿ ಹಾಗೂ ನಿರ್ವಹಣೆ ಅಗತ್ಯವಿರುವ ಪಾದಚಾರಿ ಮಾರ್ಗಗಳ ಪಟ್ಟಿಯನ್ನು ಸಿದ್ಧಪಡಿಸಿ ತ್ವರಿತವಾಗಿ ಕಾಮಗಾರಿ ಆರಂಭಿಸಲು ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಲಾಗಿದೆ. ಒತ್ತುವರಿ ತೆರವು ನಡೆಯುವ ಪ್ರದೇಶಗಳಲ್ಲೇ ಹಾಳಾಗಿರುವ ಸ್ಲ್ಯಾಬ್ಗಳು, ಕರ್ಬ್ಸ್ಟೋನ್ಗಳು ಹಾಗೂ ಇತರೆ ನಾಗರಿಕ ಕಾಮಗಾರಿಗಳನ್ನು ಸಮಾನಾಂತರವಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ.
ಕಾರ್ಯಾಚರಣೆ ಬಳಿಕ ಮತ್ತೆ ಒತ್ತುವರಿ ಆಗದಂತೆ ಕಟ್ಟುನಿಟ್ಟಿನ ನಿಗಾ ವ್ಯವಸ್ಥೆ ಜಾರಿಯಾಗಲಿದೆ. ಈಗಿರುವ ಹಾಗೂ ಹೊಸದಾಗಿ ಖರೀದಿಸಲಾಗುತ್ತಿರುವ "ಪ್ರಹರಿ' ವಾಹನಗಳನ್ನು ಬಳಸಿಕೊಂಡು ಹಗಲಿರುಳು ಗಸ್ತು ನಡೆಸಲಾಗುತ್ತದೆ. ಪ್ರತಿ ವಾಹನಕ್ಕೆ ಇಬ್ಬರು ಮಾರ್ಷಲ್ಗಳನ್ನು ನಿಯೋಜಿಸಿ ಪಾದಚಾರಿ ಮಾರ್ಗಗಳ ಮೇಲೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಆರ್ಟೀರಿಯಲ್, ಸಬ್- ಆರ್ಟೀರಿಯಲ್ ಹಾಗೂ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳನ್ನು ಸುರಕ್ಷಿತ, ಸುಗಮ ಹಾಗೂ ಅಡೆತಡೆರಹಿತವಾಗಿಸುವ ಮೂಲಕ ಸಾರ್ವಜನಿಕರಿಗೆ ಗುಣಮಟ್ಟದ ನಗರ ಮೂಲಸೌಕರ್ಯ ಕಲ್ಪಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.