ಹಮ್ಮಿಕೊಂಡಿರುವ 18ನೇ ಆವೃತ್ತಿಯ ‘ಇನ್ನೋ ಮಂಥನ್’ ಸ್ಪರ್ಧೆಗೆ ಚಾಲನೆ  
ಬೆಂಗಳೂರು

ನಮ್ಮ ನೆಲದಲ್ಲಿಯೇ ಉದ್ಯಮ ಆರಂಭಿಸುವವರಿಗೆ ‘ಮಂಥನ್’ ವೇದಿಕೆ: ಸಚಿವ ಡಾ. ಎಂ.ಸಿ. ಸುಧಾಕರ್

ಪ್ರಮುಖ ಮುಖ್ಯಾಂಶಗಳು

  • 18ನೇ ಆವೃತ್ತಿಯ ‘ಇನ್ನೋ ಮಂಥನ್’ ಸ್ಪರ್ಧೆಗೆ ಚಾಲನೆ
  • ಮುಂದಿನ ಜೂನ್‌ನಲ್ಲಿ ಗ್ರಾೃಂಡ್ ಫಿನಾಲೆ ನಡೆಯಲಿದ್ದು, ವಿಜೇತರಿಗೆ 25 ಲಕ್ಷ ರೂ.ಗಳವರೆಗೆ ಬಹುಮಾನ ನೀಡಲಾಗುತ್ತದೆ.
  • ಕರ್ನಾಟಕದಲ್ಲಿ ನವೋದ್ಯಮಗಳಿಗೆ ಲಭ್ಯವಿರುವ ಬಂಡವಾಳವನ್ನು ಗಣನೀಯವಾಗಿ ಹೆಚ್ಚಿಸುವ ಅಗತ್ಯವಿದೆ.
ಬೆಂಗಳೂರು: ಯುವ ಜನಾಂಗವು ವಿದೇಶಗಳಿಗಿಂತ ನಮ್ಮ ನೆಲದಲ್ಲಿಯೇ ಉದ್ಯಮ ಆರಂಭಿಸುವ ಯೋಜನೆಗಳಿಗೆ ‘ಮಂಥನ್’ ವೇದಿಕೆಯಾಗಿದ್ದು, ಈ ವಿಚಾರದಲ್ಲಿ ಎಫ್‌ಕೆಸಿಸಿಐ ಪ್ರಮುಖ ಪಾತ್ರ ವಹಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಫ್‌ಕೆಸಿಸಿಐ) ಉನ್ನತ ಶಿಕ್ಷಣ ಸಹಯೋಗದಲ್ಲಿ ಹಮ್ಮಿಕೊಂಡಿರುವ 18ನೇ ಆವೃತ್ತಿಯ ‘ಇನ್ನೋ ಮಂಥನ್’ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿರುವ ಉದ್ಯಮ ಐಡಿಯಾಗಳನ್ನು ಹೆಕ್ಕಿ ತೆಗೆಯುವುದು ಮತ್ತು ಉದ್ಯಮ ಆರಂಭಿಸುವ ಯೋಜನೆಗಳಿಗೆ ಅನುದಾನ, ಕೈಗಾರಿಕೆಗಳಿಂದ ಹೆಚ್ಚಿನ ಸಂಪನ್ಮೂಲಗಳನ್ನು ಕಲ್ಪಿಸುವುದು ಸೇರಿ ಹಲವು ರೀತಿಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದ ಯುವಕರು ಉದ್ಯೋಗಿಗಳಾಗುವ ಬದಲು ತಮ್ಮ ಆಲೋಚನೆಗಳಿಂದ ದೇಶಲ್ಲಿಯೇ ಉದ್ಯಮ ಆರಂಭಿಸುವುದಕ್ಕೆ ವೇದಿಕೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ನವೋದ್ಯಮಗಳಿಗೆ ಲಭ್ಯವಿರುವ ಬಂಡವಾಳವನ್ನು ಗಣನೀಯವಾಗಿ ಹೆಚ್ಚಿಸುವ ಅಗತ್ಯವಿದೆ. ಬೆಂಗಳೂರು ಪ್ರಮುಖ ನಾವೀನ್ಯತಾ ಕೇಂದ್ರವಾಗಿದ್ದರೂ ದೆಹಲಿ ಎನ್‌ಸಿಆರ್  ಪ್ರದೇಶವು ಹೆಚ್ಚಿನ ನವೋದ್ಯಮ ಹೂಡಿಕೆಯನ್ನು ಆಕರ್ಷಿಸುತ್ತಿದೆ. ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಕೈಗಾರಿಕೆ ತೊಡಗಿಸಿಕೊಳ್ಳುವಿಕೆ, ಕೌಶಲಾಭಿವೃದ್ಧಿ ಕಾರ್ಯಕ್ರಮಗಳು ಮತ್ತು ಬಹುಮಾನ ಪ್ರೋತ್ಸಾಹಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದರು. 
ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಮಾತನಾಡಿ, ಭವಿಷ್ಯವು ಅವಕಾಶಗಳನ್ನು ಕಾಯುವವರಿಗಲ್ಲ, ಅವಕಾಶಗಳನ್ನು ಸೃಷ್ಟಿಸುವವರಿಗೆ ಸೇರಿದೆ. ಕಾಲೇಜು ಆವರಣಗಳಲ್ಲಿ ಬಲಿಷ್ಠ ನಾವೀನ್ಯತೆಯ ಪರಿಸರ ನಿರ್ಮಾಣದಲ್ಲಿ ಇನ್ನೋ ಮಂಥನ್ ಪಾತ್ರ ವಹಿಸಲಿದೆ ಎಂದರು.
2009ರಲ್ಲಿ ಆರಂಭವಾದ ಮಂಥನ್ ಕಾರ್ಯಕ್ರಮವು 17 ವರ್ಷಗಳ ಪರಂಪರೆಯನ್ನು ಮುಂದುವರಿಸಿದೆ. ರಾಜ್ಯದ ಉದ್ಯಮಶೀಲ ಪ್ರತಿಭೆಯನ್ನು ನಿರಂತರವಾಗಿ ಬೆಳೆಸಿಕೊಂಡು ಬಂದಿದೆ. 2026ರ ಆವೃತ್ತಿಯು ಯುವಜನರಲ್ಲಿ ಉದ್ಯಮಶೀಲ ಮನೋಭಾವವನ್ನು ಇನ್ನಷ್ಟು ಪ್ರಚೋದಿಸುವ ಗುರಿಯೊಂದಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನವೋದ್ಯಮ ಆಧಾರಿತ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ನಿರ್ದೇಶಕಿ ಪ್ರೊ. ಜಿ. ಶೋಭಾ, ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷ ಟಿ. ಸಾಯಿರಾಮ್ ಪ್ರಸಾದ್ ಸೇರಿ ಹಲವರು ಉಪಸ್ಥಿತರಿದ್ದರು.

ಜೂನ್‌ಗೆ ಫಿನಾಲೆ, 25 ಲಕ್ಷ ರೂ. ಬಹುಮಾನ

ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಂಥನ್ ಕಾರ್ಯಕ್ರಮವು ಸಾಮರ್ಥ್ಯ ವೃದ್ಧಿ ಕಾರ್ಯಾಗಾರಗಳು, ತಜ್ಞರ ಮಾರ್ಗದರ್ಶನದ ಮೂಲಕ ವ್ಯವಹಾರ ಯೋಜನೆಗಳನ್ನು ಪ್ರಸ್ತುತಪಡಿಸುವ ಸ್ಪರ್ಧಾತ್ಮಕ ವೇದಿಕೆಯಾಗಲಿದೆ. ಮುಂದಿನ ಜೂನ್‌ನಲ್ಲಿ ಗ್ರಾೃಂಡ್ ಫಿನಾಲೆ ನಡೆಯಲಿದ್ದು, ವಿಜೇತರಿಗೆ 25 ಲಕ್ಷ ರೂ.ಗಳವರೆಗೆ ಬಹುಮಾನ ನೀಡಲಾಗುತ್ತದೆ.
"
- ಉಲ್ಲಾಸ್ ಕಾಮತ್, ಯುಕೆ ಆೃಂಡ್ ಕೋ ಸಂಸ್ಥಾಪಕ