- ಮೆಟ್ರೋ 3ಎ ಹಂತದ ಕಾಮಗಾರಿ ಚುರುಕು
- 2026ರ ಮೇಗೆ ಕಾರ್ಯಾಚರಣೆ ಸಾಧ್ಯತೆ
ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ಕಾಳೇನ ಅಗ್ರಹಾರದಿಂದ ನಾಗವಾರ ತನಕ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ 3ಎ ಹಂತದ ಯೋಜನೆ ಪಿಂಕ್ ಮಾರ್ಗದ ಕಾಮಗಾರಿಗಳು ದಿನದಿಂದ ದಿನಕ್ಕೆ ಚುರುಕಾಗುತ್ತಿದ್ದು, ಈ ಮಾರ್ಗ ಎರಡು ಹಂತಗಳಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಒಟ್ಟು 21.26 ಕಿಮೀ ಉದ್ದವಿರುವ ಈ ಮಾರ್ಗದಲ್ಲಿ ಭಾರತ್ ಅರ್ಥ್ ಮೂವರ್ಸ್ ನಿಯಮಿತ (ಬಿಇಎಂಎಲ್) ತನ್ನ ಮೊದಲ ಮಾದರಿ ರೈಲು ಬೋಗಿಯನ್ನು ಡಿಸೆಂಬರ್ನಲ್ಲಿ ಹೊರ ತರಲಿದೆ ಎಂದು ಮೂಲಗಳು ತಿಳಿಸಿವೆ. ಕಾಳೇನ ಅಗ್ರಹಾರ ಮತ್ತು ತಾವರೆಕೆರೆ ನಡುವಿನ 7.5 ಕಿಮೀ ಎತ್ತರಿಸಿದ ಮಾರ್ಗದ ವಿಭಾಗವು 2026ರ ಮೇ ವೇಳೆಗೆ ಕಾರ್ಯಾಚರಣೆ ಪ್ರಾರಂಭಿಸುವ ನಿರೀಕ್ಷೆ ಇದೆ. ಡೈರಿ ಸರ್ಕಲ್ನಿಂದ ನಾಗವಾರದವರೆಗಿನ ಉಳಿದ 13.76 ಕಿಮೀ ಸುರಂಗ ಮಾರ್ಗವು 2026ರ ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಂಕ್ ಎತ್ತರಿಸಿದ ಮಾರ್ಗದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. ಉದ್ಘಾಟನೆಗೆ ಮೊದಲು ಸಣ್ಣಪುಟ್ಟ ಕೆಲಸಗಳು ಮಾತ್ರ ಉಳಿದಿವೆ. ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ಸಾಗುವ ಈ ವಿಭಾಗವು ಆರು ನಿಲ್ದಾಣಗಳನ್ನು (ತಾವರೆಕೆರೆ, ಜಯದೇವ ಆಸ್ಪತ್ರೆ, ಜೆಪಿ ನಗರ 4ನೇ ಹಂತ, ಐಐಎಂಬಿ, ಹುಳಿಮಾವು ಮತ್ತು ಕಾಳೇನ ಅಗ್ರಹಾರ) ಹೊಂದಿರುತ್ತದೆ. ದಕ್ಷಿಣ ಭಾರತದ ಅತಿ ಎತ್ತರದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣವು ಇಂಟರ್ಚೇಂಜ್ ನಿಲ್ದಾಣವಾಗಿ ಈ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ. 2024ರ ಡಿಸೆಂಬರ್ನಲ್ಲಿ ಸುರಂಗ ಮಾರ್ಗ ಪೂರ್ಣಗೊಂಡರೂ ಕಾಮಗಾರಿಗಳು ಇನ್ನೂ ನಡೆಯುತ್ತಿದೆ. ಡೈರಿ ಸರ್ಕಲ್, ಎಂಜಿ ರಸ್ತೆ ಮತ್ತು ನಾಗವಾರ ಮೂಲಕ ಹಾದುಹೋಗುವ 13.76 ಕಿಮೀ ಕಾರಿಡಾರ್ 12 ನಿಲ್ದಾಣಗಳನ್ನು ಒಳಗೊಂಡಿದ್ದು, ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣವು ನಗರದ ನಾಲ್ಕನೇ ಇಂಟರ್ಚೇಂಜ್ ನಿಲ್ದಾಣವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಸುಲಭ ಸಂಪರ್ಕ: ಗುಲಾಬಿ ಮಾರ್ಗವು ನೇರಳೆ, ಹಳದಿ ಹಾಗೂ ನೀಲಿ ಮಾರ್ಗಗಳೊಂದಿಗೆ ಇಂಟರ್ಚೇಂಜ್ಗಳನ್ನು ಹೊಂದಿರುವುದರಿಂದ, ಯಾವುದೇ ಕೊನೆಯ ನಿಲ್ದಾಣದಿಂದ ಬೇರೆ ಮಾರ್ಗಕ್ಕೆ ಸ್ಥಳಾಂತರ ಸುಲಭವಾಗಲಿದೆ. ಈ ಯೋಜನೆ ಪೂರ್ಣಗೊಂಡರೆ ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ. ದಕ್ಷಿಣ ಬೆಂಗಳೂರು ಭಾಗದ ಬಡಾವಣೆಗಳಿಂದ ನಗರದ ಕೇಂದ್ರ ವ್ಯಾಪಾರ ಮತ್ತು ಉದ್ಯೋಗ ವಲಯಗಳಿಗೆ ನೇರ ಸಂಪರ್ಕ ಸಿಗಲಿದೆ.
3,177 ಕೋಟಿ ರೂ.ಯೋಜನೆ
ಗುರಾಬಿ ಮಾರ್ಗಕ್ಕೆ ಬಿಇಎಂಎಲ್ ಸಂಸ್ಥೆ ಜತೆಗೆ ಬಿಎಂಆರ್ಸಿಎಲ್ 3,177 ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಒಪ್ಪಂದದ ಪ್ರಕಾರ, 2026ರ ಮಾರ್ಚ್ ವೇಳೆಗೆ 6 ಬೋಗಿಗಳ ಚಾಲಕರಹಿತ ಇಪ್ಪತ್ತು ರೈಲು ಸೆಟ್ಗಳನ್ನು ತಯಾರಿಸಿ ನೀಡಬೇಕಿದೆ. ಆದರೆ, ಅಷ್ಟೊಂದು ಬೋಗಿಗಳು ಬರುವುದು ಇನ್ನೂ ತಡವಾಗಲಿದೆ. ಡಿಸೆಂಬರ್ನಲ್ಲಿ ಮೊದಲ ಮಾದರಿ ರೈಲನ್ನು ನಿರೀಸಲಾಗಿದೆ. ಈ ಮಾರ್ಗ ಸುಮಾರು 21.26 ಕಿ.ಮೀ ಉದ್ದವಿದ್ದು, 18 ನಿಲ್ದಾಣಗಳನ್ನು ಒಳಗೊಂಡಿದೆ. ತಾವರೆಕೆರೆ, ಜಯದೇವ ಆಸ್ಪತ್ರೆ, ಡೇರಿ ಸರ್ಕಲ್, ಎಂ.ಜಿ. ರಸ್ತೆ, ಕಾಳೇನ ಅಗ್ರಹಾರ, ನಾಗವಾರ ಮುಂತಾದ ಪ್ರಮುಖ ವಲಯಗಳನ್ನು ಸಂಪರ್ಕಿಸುತ್ತದೆ. ಈ ಮಾರ್ಗದ ಎತ್ತರಿಸಿದ ನಿಲ್ದಾಣಗಳ ನಿರ್ಮಾಣ ಬಹುತೇಕ ಪೂರ್ತಿಗೊಂಡಿದೆ. ಒಟ್ಟಾರೆ ಈ ಯೋಜನೆಯನ್ನು ದಕ್ಷಿಣ ಮತ್ತು ಉತ್ತರ ಬೆಂಗಳೂರನ್ನು ಸುಲಭದಲ್ಲಿ ಸಂಪರ್ಕಿಸುವ ಉದ್ದೇಶದಿಂದ ರೂಪಿಸಲಾಗಿದೆ.
318 ಕೋಚ್ಗಳ ನಿರ್ಮಾಣ!
ನಿರ್ವಹಣಾ ಪರೀಕ್ಷೆಗಳಿಗೆ ಹಾಗೂ ಸುರಕ್ಷತಾ ಮೌಲ್ಯಮಾಪನಕ್ಕೆ ಶ್ರೀ ಬಿಇಎಂಎಲ್ ತನ್ನ ಮೊದಲ ಮಾದರಿ ರೈಲು ಬೋಗಿಯನ್ನು ಹೊರತರುತ್ತದೆ. ಒಟ್ಟು 318 ಕೋಚ್ಗಳನ್ನು ನಿರ್ಮಿಸಲಿದ್ದು, ಅದರಲ್ಲಿ 96 ಕೋಚ್ಗಳು ಗುಲಾಬಿ ಮಾರ್ಗಕ್ಕೆ ಹಾಗೂ 222 ನೀಲಿ ಮಾರ್ಗಕ್ಕೆ ತಯಾರಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.