obstructing-blos-work 
ಬೆಂಗಳೂರು

ಬಿಎಲ್‌ಒ ಕೆಲಸಕ್ಕೆ ಅಡ್ಡಿ ಮಾಡಿದರೆ ಎಫ್‌ಐಆರ್

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಸೂಚನೆ
  • ಎಸ್‌ಐಆರ್ ಕುರಿತು ಬಿಎಲ್ಒ ಮೇಲ್ವಿಚಾರಕರ ಸಭೆ
ಬೆಂಗಳೂರು: ಪ್ರಸ್ತುತ ಪ್ರಗತಿಯಲ್ಲಿರುವ ಎಸ್‌ಐಆರ್ ಅಭಿಯಾನದ ವೇಳೆ ಬಿಎಲ್‌ಒಗಳ (ಮತಗಟ್ಟೆ ಅಧಿಕಾರಿಗಳು) ಕೆಲಸಕ್ಕೆ ಅಡ್ಡಿ ಮಾಡಿದರೆ ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಎಚ್ಚರಿಕೆ ನೀಡಿದ್ದಾರೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತಂತೆ ಮಹಾಲಕ್ಷ್ಮೀ ಲೇಔಟ್, ರಾಜರಾಜೇಶ್ವರಿನಗರ ಹಾಗೂ ದಾಸರಹಳ್ಳಿ ವಿಭಾಗಗಳ ಕಂದಾಯ ಅಧಿಕಾರಿ ಕಚೇರಿಗಳಲ್ಲಿ ಭಾನುವಾರ ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರ (ಬಿಎಲ್‌ಒ ಸೂಪರ್‌ವೈಸರ್ಸ್‌) ಸಭೆ ನಡೆಸಿದ ವೇಳೆ ಅವರು ಈ ನಿರ್ದೇಶನವನ್ನು ನೀಡಿದರು.
ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಗಣತಿ ನಮೂನೆ ಹಂಚಿಕೆ, ಸಂಗ್ರಹ ಮತ್ತು ಡಿಜಿಟೈಸೇಶನ್ ಕೆಲಸಗಳಿಗೆ ವೇಗ ನೀಡಿ, ಶೇ.100 ಕೆಲಸ ಪೂರ್ಣಗೊಳಿಸಿದ ಬಗ್ಗೆ ಬಿಎಲ್‌ಒಗಳು ಖಚಿತಪಡಿಸಿಕೊಳ್ಳಬೇಕು. ನಮೂನೆಯಲ್ಲಿ ಮೊದಲೇ ಮುದ್ರಣಗೊಂಡಿರುವ ಮತದಾರರ ವಿಳಾಸಕ್ಕೆ ಮತಗಟ್ಟೆ ಅಧಿಕಾರಿಗಳು ಭೇಟಿ ನೀಡಲೇಬೇಕು. ನಮೂನೆ ಹಂಚಿಕೆ ಕೆಲಸಗಳು ಸೋಮವಾರ ಸಾಯಂಕಾಲದ ಒಳಗೆ ಪೂರ್ಣಗೊಳ್ಳಬೇಕು. ಈ ಬಗ್ಗೆ ವಿಫಲಗೊಂಡ ಬಿಎಲ್‌ಒ ಮತ್ತು ಸಂಬಂಧಿತ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.
ಈ ವೇಳೆ ಜಂಟಿ ಆಯುಕ್ತೆ ಡಾ. ಆರತಿ ಆನಂದ್, ಉಪ ಆಯುಕ್ತ ಶಂಕರೆಪ್ಪ ವಣಿಕ್ಯಾಳ ಹಾಗೂ ಕಂದಾಯ ಅಧಿಕಾರಿಗಳು ಹಾಜರಿದ್ದರು.

ಸಭೆಯಲ್ಲಿ ಆಯುಕ್ತರು ನೀಡಿದ ಇತರ ಸೂಚನೆ:

* ಪೂರಕವಾಗಿ ಸ್ಪಂದಿಸದ ಇತರ ಇಲಾಖೆಗಳ ಸಿಬ್ಬಂದಿ (ಬಿಎಲ್‌ಒ) ವಿರುದ್ಧ ಕ್ರಮ ಕೈಗೊಳ್ಳಲು ಇಲಾಖೆಗಳಿಗೆ ನಿರ್ದೇಶನ
* ಫಾರ್ಮ್ ಸಿಗದೆ ಕರಡು ಮತಪಟ್ಟಿಯಲ್ಲಿ ಹೆಸರು ಡಿಲೀಟ್ ಆದರೂ ನಮೂನೆ-6 ಸಲ್ಲಿಸಿ ಹೆಸರು ಸೇರ್ಪಡೆಗೊಳಿಸುವ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಬೇಕು
* ವೋಟರ್ ಫೆಸಿಲಿಟೇಶನ್ ಕೇಂದ್ರ (ವಿಎಫ್‌ಸಿ) ಗಳಲ್ಲಿ ಡಿಜಿಟೈಸೇಶನ್‌ಗೆ ವ್ಯವಸ್ಥೆ ಮಾಡುವುದು
* ನಮೂನೆ ಹಿಂತಿರುಗಿಸಲು ತಡಮಾಡಿದಲ್ಲಿ ಡಿಜಿಟೈಸೇಶನ್ ನಿಧಾನಗೊಂಡು ಕರಡು ಪಟ್ಟಿಯಲ್ಲಿ ಹೆಸರು ಅಳಿಸಲ್ಪಡಬಹುದು ಎಂಬ ಬಗ್ಗೆ ಮನವರಿಕೆ ಮಾಡಿಕೊಡಿ
* ನಮೂನೆ ಸಂಗ್ರಹಕ್ಕೆ ವಿದ್ಯಾರ್ಥಿಗಳು, ಮಾರ್ಷಲ್ ಬಳಸಿಕೊಳ್ಳುವ ಬಗ್ಗೆ ಆಲೋಚಿಸುವುದು
* ಮತದಾರರು ನಮೂನೆ ಭರ್ತಿ ಮಾಡಿ ಹಿಂತಿರುಗಿಸುವುದರ ಮಹತ್ವದ ಬಗ್ಗೆ ರಾಜಕೀಯ ಪಕ್ಷಗಳು ಹಾಗೂ ಬಿಎಲ್‌ಎಗಳಿಗೆ ಮನವರಿಕೆ ಮಾಡಿಕೊಡಬೇಕು.

ಆಟೋ ಟಿಪ್ಪರ್‌ಗಳ ಮೂಲಕ ಪ್ರಚಾರ:

ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಸ್‌ಐಆರ್ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಮನೆ ಮನೆ ತ್ಯಾಜ್ಯ ಸಂಗ್ರಹಣೆ ಮಾಡುವ ಆಟೋ ಟಿಪ್ಪರ್‌ಗಳಲ್ಲಿ ಮೈಕ್ ಮೂಲಕ ಮನವಿ ಮಾಡಲಾಗುತ್ತಿದೆ. ನಮೂನೆಗಳನ್ನು ಬಿಎಲ್ಒ ಅವರಿಂದ ಪಡೆದುಕೊಂಡು ಆದಷ್ಟು ಬೇಗ ಅಗತ್ಯ ಮಾಹಿತಿ ಭರ್ತಿ ಮಾಡಿ ಹಿಂದಿರುಗಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಕಂದಾಯ ವಿಭಾಗದ ಸಿಬ್ಬಂದಿಗಳು ಸಹ ಮೈಕ್ ಮೂಲಕ ಮನೆ ಮನೆ, ಗಲ್ಲಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಪಾಲಿಕೆ ಆಯುಕ್ತ ಜಿ.ಜಗದೀಶ್ ತಿಳಿಸಿದ್ದಾರೆ.