gba office 
ಬೆಂಗಳೂರು

ವಾರ್ಡ್ ವಿಂಗಡಣೆಗೆ ಅಂತಿಮ ಅಧಿಸೂಚನೆ ಸಿದ್ಧ

ಪ್ರಮುಖ ಮುಖ್ಯಾಂಶಗಳು

  • ನಾಳೆ ನಗರಾಭಿವೃದ್ಧಿ ಇಲಾಖೆಯಿಂದ ಬಿಡುಗಡೆ ಸಾಧ್ಯತೆ
  • ಸುಪ್ರೀಂಕೋರ್ಟ್‌ಗೂ ಮಾಹಿತಿ ಸಲ್ಲಿಸಲಿರುವ ಸರ್ಕಾರ
ಬೆಂಗಳೂರು: ಬೆಂಗಳೂರು ಮಹಾನಗರದ ಪಂಚ ಪಾಲಿಕೆಗಳ ವಾರ್ಡ್‌ವಾರು ವಿಂಗಡಣೆ ಪ್ರಕ್ರಿಯೆಯ ಅಂತಿಮ ಅಧಿಸೂಚನೆ ಸಿದ್ಧಗೊಂಡಿದ್ದು, ಒಂದೆರಡು ದಿನಗಳಲ್ಲಿ ಅಧಿಕೃತ ಬಿಡುಗಡೆಯಾಗುವ ಸಾಧ್ಯತೆ ಇದೆ.
ಒಂದೂವರೆ ತಿಂಗಳ ಹಿಂದೆಯೇ ಕರಡು ಅಧಿಸೂಚನೆ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಕೋರಲಾಗಿತ್ತು. ಐದೂ ಪಾಲಿಕೆಗಳಲ್ಲಿ ಒಟ್ಟು 368 ವಾರ್ಡ್‌ಗಳನ್ನು ರಚಿಸಿದ್ದು, ಕೆಲವೊಂದು ವಾರ್ಡ್‌ಗಳು ಸಮರ್ಪಕವಾಗಿ ರಚಿಸಿಲ್ಲ ಎಂಬ ಆಕ್ಷೇಪಣೆ ಸಲ್ಲಿಸಲಾಗಿದೆ. ಇವುಗಳನ್ನು ಪರಿಶೀಲಿಸಿರುವ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.
ಈ ತಿಂಗಳ ನ.3ರಂದು ಸುಪ್ರೀಂಕೋರ್ಟ್ ಅಂತಿಮ ಅಧಿಸೂಚನೆಯನ್ನು ಹೊರಡಿಸಲು 15 ದಿನಗಳ ಕಾಲಾವಕಾಶ ನೀಡಿತ್ತು. ಈ ಗಡುವು ಮಂಗಳವಾರ (ನ.18) ಕೊನೆಗೊಳ್ಳಲಿದ್ದು, ಬುಧವಾರ ಬಿಡುಗಡೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ, ಅಂತಿಮ ಪಟ್ಟಿಯನ್ನು ಬೆಂಗಳೂರು ನಗರಾಭಿವೃಧ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಒಪ್ಪಿಗೆ ಪಡೆದು ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಜಾತಿ ಸಮೀಕ್ಷೆಯಿಂದ ವಿಳಂಬ:

ಐದು ಪಾಲಿಕೆಗಳ ರಚನಾ ವೇಳಾಪಟ್ಟಿ ಅನ್ವಯ ವಾರ್ಡ್‌ವಾರು ಅಂತಿಮ ಅಧಿಸೂಚನೆ ಅಕ್ಟೋಬರ್ ಕೊನೆ ವಾರ ಬಿಡುಗಡೆ ಮಾಡಬೇಕಿತ್ತು. ಆದರೆ, ಆ ಸಮಯದಲ್ಲಿ ಜಾತಿ ಸಮೀಕ್ಷೆಯಲ್ಲಿ ಇಲಾಖೆ ಹಾಗೂ ಪಾಲಿಕೆಗಳ ಅಧಿಕಾರಿ/ಸಿಬ್ಬಂದಿ ಪಾಲ್ಗೊಂಡಿದ್ದ ಕಾರಣ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಇದನ್ನು ಸುಪ್ರೀಂಕೋರ್ಟ್ ಗಮನಕ್ಕೆ ತಂದ ಬಳಿಕ ಹೆಚ್ಚುವರಿ ಸಮಯ ಪಡೆದು ಇದೀಗ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ತಪ್ಪು ಸರಿಪಡಿಸಿರುವ ಇಲಾಖೆ:

ಕರಡು ಅಧಿಸೂಚನೆಯಲ್ಲಿ ವಾರ್ಡ್ ವಿಂಗಡಣೆಗೆ ಸಂಬಂಧಿಸಿದ ಕೆಲ ತಪ್ಪುಗಳು ನುಸುಳಿದ್ದವು. ವಾರ್ಡ್‌ಗಳ ಹೆಸರನ್ನು ಕನ್ನಡದಲ್ಲಿ ತಪ್ಪಾಗಿ ನಮೂದಿಸಲಾಗಿತ್ತು. ಜತೆಗೆ ಕಾಗುಣಿತ ದೋಷವೂ ಕಾಣಿಸಿಕೊಂಡಿತ್ತು. ಮುಖ್ಯವಾಗಿ ಕೆಲ ವಾರ್ಡ್‌ಗಳನ್ನು ವಿಂಗಡಿಸುವ ವೇಳೆ ಮಾರ್ಗಸೂಚಿ ಪಾಲಿಸದ ಕಾರಣ ಗಡಿಗಳ ವಿಚಾರಕ್ಕೆ ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಜತೆಗೆ ಒಂದೇ ಬಡಾವಣೆಯ ಪ್ರದೇಶವನ್ನು ಎರಡು ವಾರ್ಡ್‌ಗಳಿಗೆ ಸೇರಿಸಿ ಸ್ಥಳೀಯರಲ್ಲಿ ಗೊಂದಲ ಮೂಡಿತ್ತು. ಈ ಬಗ್ಗೆ ಹಲವು ನಾಗರಿಕರು ಹಾಗೂ ಸಂಘ-ಸಂಸ್ಥೆಗಳು ತಮ್ಮ ತಗಾದೆಯನ್ನು ಸಲ್ಲಿಸಿದ್ದು, ಗಂಭೀರವಾದವುಗಳನ್ನು ಇಲಾಖೆ ಪರಿಗಣಿಸಿದೆ.

ಪಾಲಿಕೆವಾರು ವಾರ್ಡ್‌ಗಳ ವಿವರ:

ಉತ್ತರ ಪಾಲಿಕೆ 72
ದಕ್ಷಿಣ ಪಾಲಿಕೆ 72
ಪೂರ್ವ ಪಾಲಿಕೆ 50
ಪಶ್ಚಿಮ ಪಾಲಿಕೆ 111
ಕೇಂದ್ರ ಪಾಲಿಕೆ 63
ಒಟ್ಟು 368