raithasante 
ಬೆಂಗಳೂರು

ಫೆ.28ರಂದು ಜಿಕೆವಿಕೆಯಲ್ಲಿ ‘ರೈತ ಸಂತೆ’

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಕೃಷಿ ವಿವಿಯಿಂದ ಆಯೋಜನೆ
  • ಬೆಳಗ್ಗೆಯಿಂದ ಸಂಜೆವರೆಗೂ ಕೃಷ್ಯುತ್ಪನ್ನ ಪ್ರದರ್ಶನ/ಮಾರಾಟ
ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ತನ್ನ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಪ್ರತೀ ತಿಂಗಳ ಕೊನೆಯ ಶನಿವಾರದಂದು ಆಯೋಜಿಸುತ್ತಾ ಬಂದಿರುವ ‘ರೈತ ಸಂತೆ’ ಕಾರ್ಯಕ್ರಮವು ಈ ಬಾರಿ ಫೆ.28ರಂದು ನಿಗದಿಯಾಗಿದೆ. ಅಂದು ಕ್ಯಾಂಪಸ್‌ನ ಶ್ರೀ ಗಣಪತಿ ದೇವಸ್ಥಾನದ ಬಳಿ ಇಡೀ ದಿನ ಸಂತೆ ನಡೆಯಲಿದೆ.
ರೈತ ಸಂತೆಯಲ್ಲಿ ವಿವಿಯ ವಿವಿಧ ವಿಭಾಗಗಳು ಅಭಿವೃದ್ಧಿಪಡಿಸಿರುವ ಕೃಷಿ ಪರಿಕರಗಳು ಹಾಗೂ ರೈತ ಉತ್ಪಾದಕ ಸಂಘಗಳು (ಎಫ್​​ಪಿಒ) ಸಿದ್ಧಪಡಿಸಿರುವ ವಸ್ತುಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗುತ್ತದೆ. ಈ ಬಾರಿ ವಿಶೇಷವಾಗಿ ಬೇಸಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರಿಂದ ಕಲ್ಲಂಗಡಿ, ಕರಬೂಜ, ದ್ರಾಕ್ಷಿ ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಾವಯವ ಹಾಗೂ ಸಿರಿಧಾನ್ಯ ಉತ್ಪನ್ನಗಳು, ಅಣಬೆ, ಹಣ್ಣು-ತರಕಾರಿ, ಪಾನೀಯ ಮಿಶ್ರಣ, ಸ್ವಸಹಾಯ ಗುಂಪುಗಳು ತಯಾರಿಸಿರುವ ತರಾವರಿ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಿರಲಿದೆ ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಗರ ಕೃಷಿಯ ಭಾಗವಾದ ತಾರಸಿ ತೋಟದಲ್ಲಿ ಬಳಸುವ ಸಸ್ಯಗಳು, ಸಾವಯವ ಗೊಬ್ಬರ, ಜೈವಿಕ ಕೀಟನಾಶಕ ಸಹಿತ ಕೃಷಿ ಪರಿಕರಗಳನ್ನು ಮಾರಾಟ ಮಾಡಲಾಗುತ್ತದೆ. ಅಡಿಕೆ ಉತ್ಪನ್ನ, ರೇಷ್ಮೆ ಕೃಷಿಯ ಉಪ ಉತ್ಪನ್ನ, ಪಶುಸಂಗೋಪನೆ, ಜೇನು ಕೃಷಿಯ ಮೌಲ್ಯವರ್ಧಿತ ವಸ್ತುಗಳು ಸಿಗಲಿವೆ.