ವಿಧಾನಸೌಧ ಸ್ಫೋಟಿಸುವ ಎಐ ವಿಡಿಯೋ ಕ್ರಿಯೇಟ್ ಮಾಡಿದ್ದ ಬಿಹಾರದ ಯುವಕ.
ವಿಧಾನಸೌಧಕ್ಕೆ ಬಾಂಬ್ ಇಟ್ಟು ಸ್ಫೋಟಿಸುತ್ತಿದ್ದೇನೆ ಎಂದಿರುವ ವಿಡಿಯೋ ವೈರಲ್.
ಬಿಹಾರ ಮೂಲದ ಹಜರತ್ ಅಲಿ (25) ಬೆಂಗಳೂರು ನಗರ ಪೊಲೀಸರಿಂದ ಬಂಧನ.
ಬೆಂಗಳೂರು: ವಿಧಾನಸೌಧಕ್ಕೆ ಬಾಂಬ್ ಇಟ್ಟು ಸ್ಫೋಟಿಸುತ್ತೇನೆ ಎಂಬ ರೀತಿಯಲ್ಲಿ ಎಐ ವಿಡಿಯೋ ಕ್ರಿಯೇಟ್ ಮಾಡಿ, ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಬಿಹಾರ ಮೂಲದ ಯುವಕನನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಅರಾರಿಯಾ ಜಿಲ್ಲೆಯ ಹಜರತ್ ಅಲಿ (25) ಬಂಧಿತ ಆರೋಪಿ. ಬೆಂಗಳೂರಿನಲ್ಲಿ ದಿನಗೂಲಿ ಪೈಪ್ಫಿಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನುವುದನ್ನು ಪೊಲೀಸರು ತಿಳಿಸಿದ್ದಾರೆ.
ಹಜರತ್ ಅಲಿ ಕೆಲವು ದಿನದ ಹಿಂದೆ jnx_king_h_g ಇನ್ಸ್ಟಾಗ್ರಾಮ್ ಖಾತೆಯಿಂದ ವಿಡಿಯೋ ಹಂಚಿಕೊಂಡಿದ್ದ. ಅದೇ ವಿಡಿಯೋ ಈಗ ಜೈಲು ಮೆಟ್ಟಲೇರಲು ಕಾರಣವಾಗಿದೆ. ವಿಧಾನಸೌಧ ಮಂಭಾಗ ಬಂದಾಗ ಶಕ್ತಿಸೌಧವನ್ನು ಸ್ಫೋಟಿಸಿದಂತೆ ರೀಲ್ಸ್ ಮಾಡಿ, 'ಉಡಾ ದಿಯಾ ಬಾಂಬ್ ಸೆ' (ಬಾಂಬ್ನಿಂದ ಸ್ಫೋಟಿಸಿಬಿಟ್ಟೆ) ಎಂಬುದಾಗಿ ಬರೆದು ಪೋಸ್ ನೀಡಿದ್ದ.
ವಿಧಾನಸೌಧ ಠಾಣೆ ಇನ್ಸ್ಪೆಕ್ಟರ್ ಎಸ್.ಪಿ. ಕುಮಾರ್ ದಿನನಿತ್ಯ ಡಿಜಿಟಲ್ ಕಣ್ಗಾವಲು ನಡೆಸುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 353(1)(B) ಮತ್ತು 353(2)ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ವಿಡಿಯೋ ಹಂಚಿಕೊಳ್ಳಲಾದ ಅಕೌಂಟ್ ಆಧರಿಸಿ ಹಜರತ್ ಅಲಿ ಹುಡುಕಾಟ ಶುರು ಮಾಡಿದ ಪೊಲೀಸರು, ಬೆಂಗಳೂರಿನಲ್ಲಿ ಆತನನ್ನು ಬಂಧಿಸಿದರು. ಕೃತ್ಯದ ಹಿಂದೆ ಹಜರತ್ ಅಲಿಗೆ ಇರುವ ಉದ್ದೇಶವೇನು? ವಿಡಿಯೋ ಹಂಚಿಕೊಳ್ಳುವ ವಿರುದ್ಧ ಯಾರದ್ದಾದ್ರೂ ಪಾತ್ರವಿದೆಯಾ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
@KeypadGuerilla ಎಂಬುವವರು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಬೆಂಗಳೂರಿನ ವಿಧಾನಸೌಧದಲ್ಲಿ ಬಾಂಬ್ ಸ್ಫೋಟಿಸುವ ಬಗ್ಗೆ ಎಐ ವಿಡಿಯೋ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.. 'ಜೆಎನ್ಎಕ್ಸ್ ಕಿಂಗ್ ಹೆಚ್ಜಿ' ಹೆಸರಿನ ಖಾತೆಯಿಂದ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ಕಟ್ಟಡವನ್ನು ಸ್ಫೋಟಿಸಲಾಗಿದೆ ಎಂದು ಹೇಳುವ ಶೀರ್ಷಿಕೆಯನ್ನು ಹೊಂದಿತ್ತು. ದಸರಾ ಹಬ್ಬದ ನಡುವೆ ಈ ಘಟನೆ ನಡೆದಿದೆ ಎಂದು ಅವರು ಬರೆದುಕೊಂಡಿದ್ದಾರೆ
ಇದಕ್ಕೆ ನಗರ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, 'ವೀಡಿಯೊವನ್ನು ಇನ್ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲಾಗಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 118/2026 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಇದು ಕನ್ನಡಿಗರ ಭಾವನೆಗಳ ಜೊತೆ ಆಡುತ್ತಿರುವ ಆಟ, ಇಂತಹ ಮೂರ್ಖರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಕ್ಸ್ ಬಳಕೆದಾರರೊಬ್ಬರು ಬೇಡಿಕೆಯಿಟ್ಟಿದ್ದಾರೆ. ಕನ್ನಡದಲ್ಲಿ ಒಂದು ಗಾದೆಯಿದೆ ಮಂಗನ ಕೈಲಿ ಮಾಣಿಕ್ಯ (ಮಂಗನ ಕೈಲಿ ಮಾಣಿಕ್ಯ), ಎಐಯನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ಏನೆಲ್ಲ ಆಗ್ತಿದೆ ನೋಡಿ ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್).