ಬೆಂಗಳೂರು: ಭಾರತದಲ್ಲಿ ಬುದ್ಧಿಮಾಂದ್ಯತೆ (ಡಿಮೆನ್ಶಿಯಾ) ಮತ್ತು ಆಲ್ಝೈಮರ್ ಕಾಯಿಲೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಹಾಗೂ ಸಕಾಲಿಕ ರೋಗನಿರ್ಣಯ ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಗತ್ಯ ಎಂದು ನರವಿಜ್ಞಾನ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ಇತ್ತೀಚೆಗೆ ನಡೆದ ಮೂರು ದಿನಗಳ ನರವಿಜ್ಞಾನ ಸಂಘದ ಎರಡನೇ ವಾರ್ಷಿಕ ಶೃಂಗಸಭೆಯ ಸಂದರ್ಭದಲ್ಲಿ ನಿಮ್ಹಾನ್ಸ್ನ ನರವಿಜ್ಞಾನ ಪ್ರಾಧ್ಯಾಪಕಿ ಹಾಗೂ ಕರ್ನಾಟಕ ಬ್ರೈನ್ ಹೆಲ್ತ್ನ ಅಧ್ಯಕ್ಷೆ ಡಾ. ಸುವರ್ಣ ಅಲ್ಲಾಡಿ ಮತ್ತು ಕೋಲ್ಕತ್ತಾದ ಅಪೋಲೋ ಆಸ್ಪತ್ರೆಗಳ ನರವಿಜ್ಞಾನ ವಿಭಾಗದ ನಿರ್ದೇಶಕ ಹಾಗೂ ಮುಖ್ಯಸ್ಥ ಡಾ. ಅಮಿತಾಭ ಘೋಷ್ ಅವರು ಆಲ್ಝೈಮರ್ ಕಾಯಿಲೆಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯತೆಯನ್ನು ವಿವರಿಸಿದರು.
ನಿರಂತರ ಸ್ಮರಣಶಕ್ತಿ ನಷ್ಟ, ಗೊಂದಲ, ಪರಿಚಿತ ಕೆಲಸಗಳನ್ನು ನಿರ್ವಹಿಸಲು ತೊಂದರೆ, ನಡವಳಿಕೆಯಲ್ಲಿ ಬದಲಾವಣೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕುಂಠಿತಗೊಳ್ಳುವುದು ಮುಂತಾದ ಲಕ್ಷಣಗಳನ್ನು ವಯಸ್ಸಾಗುವಿಕೆಯ ಸಹಜ ಪ್ರಕ್ರಿಯೆ ಎಂದು ನಿರ್ಲಕ್ಷಿಸಬಾರದು. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಹೇಳಿದರು.
ವರದಿಯೊಂದರ ಪ್ರಕಾರ ಕರ್ನಾಟಕದಲ್ಲಿ 60 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಶೇ.7.61 ಬುದ್ಧಿಮಾಂದ್ಯತೆಯ ಹರಡುವಿಕೆ ಕಂಡುಬಂದಿದ್ದು, ಇದು ರಾಷ್ಟ್ರೀಯ ಸರಾಸರಿ ಶೇ.7.43ಕ್ಕಿಂತ ಹೆಚ್ಚಾಗಿದೆ. ಅರಿವಿನ ಅಸ್ವಸ್ಥತೆಗಳ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಆರಂಭಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿ ಚಿಕಿತ್ಸೆ ನೀಡಲು ವಿವಿಧ ಜಿಲ್ಲೆಗಳಲ್ಲಿ ಅರ್ಹ ವೈದ್ಯಕೀಯ ತಂಡಗಳ ಮೂಲಕ ವಿಶೇಷ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಡಾ. ಸುವರ್ಣ ಅಲ್ಲಾಡಿ ತಿಳಿಸಿದರು.
ಆಲ್ಝೈಮರ್ ಕಾಯಿಲೆಯ ಆರಂಭಿಕ ಲಕ್ಷಣಗಳು ಬಹಳ ಸೂಕ್ಷ್ಮವಾಗಿದ್ದು, ಕ್ರಮೇಣ ಬೆಳವಣಿಗೆಯಾಗುತ್ತವೆ. ಇತ್ತೀಚಿನ ಘಟನೆಗಳು ಅಥವಾ ಸಂಭಾಷಣೆಗಳನ್ನು ಪದೇಪದೇ ಮರೆತುಬಿಡುವುದು, ಪರಿಚಿತ ಪದಗಳನ್ನು ನೆನಪಿಸಿಕೊಳ್ಳಲು ಕಷ್ಟವಾಗುವುದು, ಪರಿಚಿತ ಸ್ಥಳಗಳಲ್ಲಿಯೇ ಗೊಂದಲಕ್ಕೊಳಗಾಗುವುದು ಹಾಗೂ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ತೊಂದರೆಯಾಗುವುದು ಪ್ರಮುಖ ಎಚ್ಚರಿಕೆಯ ಸಂಕೇತಗಳಾಗಿವೆ ಎಂದು ಡಾ. ಅಮಿತಾಭ ಘೋಷ್ ವಿವರಿಸಿದರು.
ಭಾರತದಲ್ಲಿ ಪ್ರಸ್ತುತ ಸುಮಾರು 88 ಲಕ್ಷ ಜನರು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾರೆ. ಈ ಪೈಕಿ ಹೆಚ್ಚಿನ ಪ್ರಕರಣಗಳಿಗೆ ಆಲ್ಝೈಮರ್ ಕಾಯಿಲೆಯೇ ಪ್ರಮುಖ ಕಾರಣವಾಗಿದೆ. 2036ರ ವೇಳೆಗೆ ಈ ಸಂಖ್ಯೆ ಸುಮಾರು 1.69 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಜನಸಂಖ್ಯೆಯ ವಯಸ್ಸಾಗುವಿಕೆ, ಕಾಯಿಲೆಯ ಬಗ್ಗೆ ಕಡಿಮೆ ಅರಿವು ಮತ್ತು ವಿಳಂಬಿತ ರೋಗನಿರ್ಣಯವು ಈ ಸಮಸ್ಯೆ ಮತ್ತಷ್ಟು ಹೆಚ್ಚಲು ಕಾರಣವಾಗುತ್ತಿದೆ ಎಂದು ಹೇಳಿದರು.