ಬೆಂಗಳೂರು:ಪ್ರಧಾನಮಂತ್ರಿ ಅವರಿಗೆ ಒಂದು ರಾಜ್ಯದ ಮುಖ್ಯಮಂತ್ರಿ ಆಗಿ ನಾನು ಎಷ್ಟು ಗೌರವ ಕೊಡಬೇಕೋ ಕೊಟ್ಟಿದ್ದೇನೆ. ಒಬ್ಬ ಮುಖ್ಯಮಂತ್ರಿಗೆ ಎಷ್ಟು ಗೌರವ ಕೊಡಬೇಕೋ ಅವರು ಕೊಟ್ಟಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ವಿಶ್ಲೇಷಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ನಾವು ಸ್ಪರ್ಧೆ ಮಾಡೋಣ, ಅಭಿವೃದ್ಧಿ ವಿಷಯದಲ್ಲಿ ಒಟ್ಟಾಗಿ ಕೆಲಸ ಮಾಡೊಣ ಎಂದು ಪ್ರಧಾನಿ ಅವರಿಗೆ ತಿಳಿಸಿದ್ದೇನೆ ಎಂದು ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಪ್ರಧಾನಿ ಜತೆಗಿನ ನಿಮ್ಮ ಒಡನಾಟ ಬಿಜೆಪಿ ನಾಯಕರಿಗೆ ಬಿಸಿ ತುಪ್ಪ ಆಗಿದೆಯಲ್ಲಾ ಎಂಬ ಪ್ರಶ್ನೆಗೆ, ಪ್ರಧಾನಿ ಸ್ಥಾನಕ್ಕೆ ಗೌರವ ಕೊಡುವ ವಿಷಯವನ್ನು ಹಾಗೆ ಭಾವಿಸಬೇಕಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಪರಸ್ಪರ ಸಹಕಾರ ಅಗತ್ಯ ಎಂದರು.
ಬೆಂಗಳೂರು ನಗರದಲ್ಲಿ ರೌಡಿಗಳ ಅಟ್ಟಹಾಸ ತಡೆಗೆ ಪ್ರತ್ಯೇಕ ‘ರೌಡಿನಿಗ್ರಹ ಪಡೆ’ ರಚಿಸಲಾಗಿದೆ. ರೌಡಿಗಳ ಮೇಲೆ ಸ್ಥಳೀಯ ಪೊಲೀಸ್ ಠಾಣೆಯ ನಿಯಂತ್ರಣ ತಪ್ಪಿಸಿ ಕಮೀಷನರೇಟ್ ಅವರ ವ್ಯಾಪ್ತಿಗೆ ತರಲಾಗಿದೆ ಎಂದು ಸಿಎಂ ತಿಳಿಸಿದರು.
ರೌಡಿಗಳು ಸ್ಥಳೀಯ ಪೊಲೀಸರ ಸಂಪರ್ಕದಲ್ಲಿ ಇರುತ್ತಾರೆಂಬ ಆರೋಪಗಳಿವೆ. ಇದಕ್ಕೆ ಅವಕಾಶ ಕೊಡದಂತೆ ರೌಡಿ ನಿಗ್ರಹ ಪಡೆ ರಚಿಸಲಾಗಿದೆ. ಭಯಮುಕ್ತ ಬೆಂಗಳೂರು ನಿರ್ಮಾಣ ನಮ್ಮ ಗುರಿ. ಇದೇ ವೇಳೆ ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಸರ್ಕಾರ ಮುಂದಾಗಿದೆ. ದೊಡ್ಡ ಮಟ್ಟದ ಶೋಧ ಕಾರ್ಯಾಚರಣೆ ನಡೆದಿವೆ ಎಂದರು.