ಡಿ.ವಿ.ಸದಾನಂದಗೌಡ 
ಬೆಂಗಳೂರು

ಸಜ್ಜೆಪಾಳ್ಯ ಜಮೀನು ಉಳಿಸಲು ಎಲ್ಲರೂ ಕೈಜೋಡಿಸಿ-land

ಬೆಂಗಳೂರು: ಯಶವಂತಪುರ ಹೋಬಳಿಯ ಸಜ್ಜೆಪಾಳ್ಯ ಗ್ರಾಮದಲ್ಲಿ ಶಿಕ್ಷಣಕ್ಕಾಗಿ ರಾಜ್ಯ ಒಕ್ಕಲಿಗ ಸಂಘಕ್ಕೆ ದಾನವಾಗಿ ಕೊಟ್ಟಿರುವ 96 ಎಕರೆ ಜಮೀನು  ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಕರೆ ನೀಡಿದ್ದಾರೆ.
ಕೃಷ್ಣಪ್ಪ ರಂಗಮ್ಮ ಸಮಾಜ ಸೇವಾ ಪ್ರತಿಷ್ಠಾನ ಭಾನುವಾರ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ಕೃಷ್ಣಪ್ಪ ರಂಗಮ್ಮ ಶಿಕ್ಷಣ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. 
ವಿದ್ಯಾರ್ಥಿಗಳ ವಸತಿ ಸೌಕರ್ಯಕ್ಕಾಗಿ ಹಾಸ್ಟೆಲ್ ನಿರ್ಮಿಸಲು ‘ಕೃಷ್ಣಪ್ಪ ರಂಗಮ್ಮ ಎಂಬುವರು 1978ರಲ್ಲಿ 96 ಎಕರೆಯನ್ನು  ಸಂಘಕ್ಕೆ ದಾನ ಕೊಟ್ಟಿದ್ದರು. ಆದರೆ, ಈ ಜಾಗವನ್ನು ಕೆಲವು ಪ್ರಭಾವಿಗಳು ಹಂತ ಹಂತವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಜಮೀನು ಕಬಳಿಕೆಯಲ್ಲಿ ಯಾವ ಪಕ್ಷದ ಮುಖಂಡರು ಇದ್ದರೂ ಅದನ್ನು ವಾಪಸ್ ನೀಡುವ ಕೆಲಸವಾಗಬೇಕು. ಸಜ್ಜೆಪಾಳ್ಯ ಜಮೀನು ಉಳಿವಿಗಾಗಿ ನಡೆಸುವ ಹೋರಾಟಕ್ಕೆ ನನ್ನ ಬೆಂಬಲ ಇರುತ್ತದೆ ಎಂದು ಹೇಳಿದರು. 
ಶಾಸಕ ಎ.ಮಂಜು ಮಾತನಾಡಿ, ಕೋಟ್ಯಂತರ ರೂ.ಮೌಲ್ಯದ ಜಮೀನು ಉಳಿಯುವಂತಾಗಬೇಕು. ಹಿಂದಿನಿಂದಲೂ  ಜಮೀನು ಉಳಿವಿಗಾಗಿ ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್ ಹೋರಾಟ ನಡೆಸುತ್ತಿದೆ.  ಒತ್ತುವರಿದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಈಗಿನ ಸರ್ಕಾರ ವಿಲವಾಗಿದೆ. ಟ್ರಸ್ಟ್‌ನವರು ಡಿಸಿಎಂ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣಭೈರೇಗೌಡ ಸೇರಿ ಸಂಬಂಧಿಸಿದವರಿಗೆ ಪತ್ರ ಬರೆದಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ರಂಗಮ್ಮ ಆಶಯದಂತೆ ಜಾಗವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕೆ ಬಳಸಬೇಕು ಎಂದರು.  
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮತ್ತು ಅದರ್ಶ ದಂಪತಿಗಳಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ‘ಒಕ್ಕಲಿಗರಿಗಾಗಿ ರಂಗಮ್ಮನವರ ಭೂಮಿ ಕೊಡುಗೆ’ ಪುಸ್ತಕ ಬಿಡುಗಡೆ ಮಾಡಲಾಯಿತು. ನೂತನ ಕ್ಯಾಲೆಂಡರ್ ಅನಾವರಣ ಮಾಡಲಾಯಿತು. 
ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಕುಣಿಗಲ್‌ನ ಅರೇಶಂಕರ ಮಠದ ಪೀಠಾಧ್ಯಕ್ಷ ಶ್ರೀ ಸಿದ್ಧರಾಮ ಚೈತನ್ಯ ಸ್ವಾಮೀಜಿ, ಪ್ರತಿಷ್ಠಾನ ಅಧ್ಯಕ್ಷ ಡಾ.ವಿ.ಆಂಜನಪ್ಪ, ರಾಜ್ಯ ಒಕ್ಕಲಿಗರ ಸಂಘದ ಕೋನಪ್ಪರೆಡ್ಡಿ ಮತ್ತಿತರರಿದ್ದರು.