- ಶಿಖರ ಏರಿದ ಸಂತೋಷ್, ಡಾ. ಚಿನ್ಮಯಿಗೆ ಸನ್ಮಾನ
ಬೆಂಗಳೂರು: ಪರ್ವತಾರೋಹಣದಂತಹ ಸಾಹಸ ಸಾಧನೆ ಮಾಡಲು ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ದೃಢತೆಯೂ ಅಗತ್ಯ. ಇದರ ಮೂಲಕ ಗಟ್ಟಿ ಮನಸ್ಸು ಮಾಡಿದರೆ ಯಾವುದೇ ಸಾಧನೆಯನ್ನಾದರೂ ಮಾಡಲು ಸಾಧ್ಯ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು.
ಸಹಕಾರನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಮೌಂಟ್ ಎವರೆಸ್ಟ್ ಶಿಖರದ ಯಶಸ್ವಿ ಆರೋಹಣ ಮಾಡಿ ವಾಪಸಾಗಿರುವ ಸಂತೋಷ್ ದೇವರಾಜಪ್ಪ ಹಾಗೂ ಡಾ. ಚಿನ್ಮಯಿ ಜೆ. ತ್ರಿಶೂಲಮೂರ್ತಿ ಅವರನ್ನು ಸನ್ಮಾನ ಮಾತನಾಡಿದರು.
ಜೀವನದಲ್ಲಿ ಸವಾಲುಗಳನ್ನು ಗೆದ್ದು, ಏನಾದರೂ ವಿಶಿಷ್ಟ ಸಾಧನೆ ಮಾಡುವ ತೃಪ್ತಿಪಡಬೇಕಿದ್ದರೆ ಎವರೆಸ್ಟ್ ಶಿಖರ ಆರೋಹಣದಂತಹ ಗುರಿ ಸಾಧಿಸಬೇಕು. ಈ ಇಬ್ಬರೂ ಸಾಹಸಿಗಳು ಕನಸಿಗೂ ಮೀರಿದ ಸಾಧನೆಯನ್ನು ಮಾಡಿ ಎಲ್ಲರನ್ನು ಅಚ್ಚರಿಗೆ ದೂಡಿದ್ದಾರೆ. ಇವರ ಸಾಧನೆ ಇತರರಿಗೂ ಮಾದರಿಯಾಗಿದ್ದು, ಯುವಜನತೆಗೆ ಸದಾ ಪ್ರೇರಣೆಯಾಗಲಿದೆ ಎಂದು ಆಶಿಸಿದರು.
ನಗರ ಜೀವನಕ್ಕೆ ಹೊಂದಿಕೊಂಡಿರುವ ಜನರು ಪರಿಸರದಿಂದ ದೂರವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಪರಿಸರದೊಂದಿಗೆ ಬೆರೆತು ಬದುಕುವುದು ಇಂದಿನ ಅಗತ್ಯವಾಗಿದೆ. ಸಂಸ್ಕೃತಿ, ಕ್ರೀಡೆ, ಪರಿಸರ ಮತ್ತು ಜಗತ್ತನ್ನು ಸುತ್ತಿನೋಡುವ ಆಸಕ್ತಿ ಬೆಳೆಸಿಕೊಂಡಲ್ಲಿ ಜೀವನ ಮತ್ತಷ್ಟು ಸಮೃದ್ಧವಾಗಲು ಸಾಧ್ಯ ಎಂದು ಸಚಿವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿ ತುಳಸಿ ಮುದ್ದಿನೇನಿ, ಮಾಜಿ ಉಪ ಮೇಯರ್ ಎನ್.ಇಂದಿರಾ, ಕುವೆಂಪುನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಎನ್. ಶ್ರೀನಿವಾಸಯ್ಯ, ಕಾವೇರಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಬಿ.ಎಂ. ದೇವರಾಜಪ್ಪ ಹಾಗೂ ಇತರರಿದ್ದರು.