- ಖರೀದಿಗೆ ಬಿಎಂಟಿಸಿ ಮೀನಮೇಷ
- ಕಚ್ಚಾ ತೈಲ ಕೊರತೆ ಆತಂಕ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ "ಶಕ್ತಿ' ಯೋಜನೆ ಲಕ್ಷಾಂತರ ಜನರಿಗೆ ನೆರವಾಗಿದೆ. ಈ ಯೋಜನೆಯ ಹಣಕಾಸಿನ ಹೊಣೆಗಾರಿಕೆಯನ್ನು ಸರ್ಕಾರವೇ ಹೊತ್ತಿದ್ದು, ಸಾರಿಗೆ ನಿಗಮಗಳಿಗೆ ಉಚಿತ ಪ್ರಯಾಣದ ಹಣ ಬಿಡುಗಡೆ ಮಾಡುತ್ತಿದೆ. ಇಂಧನ ಬೆಲೆಗಳು ಏರಿಕೆಯಾಗುವ ಪರಿಸ್ಥಿತಿಯಲ್ಲಿ ಈ ವೆಚ್ಚವು ಸರ್ಕಾರಕ್ಕೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇವಿ ಬಸ್ಗಳನ್ನು ಹೆಚ್ಚಿಸುವುದು ಮಾತ್ರ ಪರ್ಯಾಯ ಮಾರ್ಗವಾಗಿದೆ.
ಇವಿ ಬಸ್ಗಳು ಡೀಸೆಲ್ ಅವಲಂಬನೆ ಕಡಿಮೆ ಮಾಡುವುದರ ಜತೆಗೆ ಕಾರ್ಯಾಚರಣೆ ವೆಚ್ಚವನ್ನು ದೀರ್ಘಾವಧಿಯಲ್ಲಿ ಕಡಿಮೆ ಮಾಡುತ್ತವೆ. ಇವು ಪರಿಸರಸ್ನೇಹಿಯಾಗಿದ್ದು, ನಗರಗಳಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಕೇಂದ್ರ ಸರ್ಕಾರವೂ ಇವಿ ಬಸ್ಗಳ ಖರೀದಿಗೆ ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದ್ದು, ರಾಜ್ಯಗಳು ಇದರ ಪ್ರಯೋಜನ ಪಡೆಯುವ ಅವಕಾಶವಿದೆ. ಹಂತಹಂತವಾಗಿ ಇವಿ ಬಸ್ಗಳನ್ನು ಸಾರಿಗೆ ನಿಗಮಗಳಲ್ಲಿ ಅಳವಡಿಸಿದರೆ, ಶಕ್ತಿ ಯೋಜನೆಯ ಸ್ಥಿರತೆ ಕಾಪಾಡಬಹುದು. ಜತೆಗೆ ಇಂಧನ ಬೆಲೆ ಏರಿಕೆಯಿಂದ ಉಂಟಾಗುವ ಆರ್ಥಿಕ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಹೀಗಾಗಿ ತೈಲ ಸಂಕಷ್ಟದ ನಡುವೆಯೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಲು ಇವಿ ಬಸ್ಗಳತ್ತ ಮುಖ ಮಾಡುವುದು ಇಂದಿನ ಅನಿವಾರ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಇವಿ ಬಸ್ ಖರೀದಿಗೆ ಹಿಂದೇಟು?
ಈಗಾಗಲೇ ರಾಜ್ಯ ಸರ್ಕಾರವು ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿಯಲ್ಲಿ ಇವಿ ಬಸ್ಗಳ ಸೇವೆ ಆರಂಭಿಸಿ ವರ್ಷಗಳೇ ಕಳೆದಿವೆ. ಆದರೆ, ಬಿಎಂಟಿಸಿಯಲ್ಲಿ ಪ್ರಸ್ತುತ ಅಳವಡಿಸಲಾಗಿರುವ ಇವಿ ಬಸ್ಗಳ ಬಗ್ಗೆ ಸಾಕಷ್ಟು ದೂರು- ಬರುತ್ತಿವೆ. ಬ್ರೇಕ್ಡೌನ್, ಅಪಘಾತ ಹೀಗೆ ಹಲವು ಕಾರಣಗಳಿಂದ ಕುಖ್ಯಾತಿ ಪಡೆದಿವೆ. ಇದರಿಂದ ಬೇಸತ್ತಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಎಂಟಿಸಿಗೆ ಸೇವೆ ನೀಡುತ್ತಿರುವ ಇವಿ ಬಸ್ ಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರಕ್ಕೆ ಲಿಖಿತ ದೂರು ನೀಡಿದ್ದಾರೆ. ಕೇಂದ್ರ ಸರ್ಕಾರದ ಸಬ್ಸಿಡಿ ದೊರಕುತ್ತಿದ್ದರೂ ಮತ್ತು ರಾಜ್ಯದವರೇ ಆದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಇನ್ನಷ್ಟು ಇವಿ ಬಸ್ಗಳ ಖರೀದಿಗೆ ಅನುಮತಿ ನೀಡಿದ್ದರೂ ಸಾರಿಗೆ ಇಲಾಖೆ ಹಿಂದೇಟು ಹಾಕುತ್ತಿದೆ.
ಕೇಂದ್ರ ಸರ್ಕಾರದ 'ಪಿಎಂ- ಇ ಡ್ರೈವ್' ಯೋಜನೆಯಡಿ 4,500 ಬಸ್ಗಳನ್ನು ಮಂಜೂರು ಮಾಡಲಾಗಿದೆ. ದೊಡ್ಡಮಟ್ಟದ ಇವಿ ಬಸ್ಗಳನ್ನು ರಸ್ತೆಗಿಳಿಸುವ ಮೂಲಕ ಸಾರಿಗೆ ಇಲಾಖೆ ಇವಿ ಕ್ರಾಂತಿಗೆ ಮುಂದಾಗಿದೆ. ಈ 4,500 ಬಸ್ಗಳನ್ನು ಜಿಸಿಸಿ (ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್) ಅಡಿಯಲ್ಲಿ ರಸ್ತೆಗಿಳಿಸುವ ಸಂಬಂಧ ಬಿಎಂಟಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಈ ಪೈಕಿ ಸಾಮಾನ್ಯ, ಹವಾನಿಯಂತ್ರಿತ ಮತ್ತು 12 ಮೀಟರ್ ಬಸ್ಗಳಿವೆ. ಆದರೆ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಾರಿಗೆ ಇಲಾಖೆ ವಿಳಂಬ ಧೋರಣೆ ತಳೆದಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಈ ಹಿಂದೆ ಬಿಎಂಟಿಸಿ ಇವಿ ಬಸ್ಗಳ ಖರೀದಿ ವೇಳೆ ಬಸ್ಗಳ ಗುಣಮಟ್ಟ, ತಯಾರಿಕಾ ಸಂಸ್ಥೆಯ ಮೂಲಸೌಕರ್ಯ, ಸಂಸ್ಥೆಗೆ ಇರುವ ಅನುಭವ ಮತ್ತು ಬಳಕೆ ಮಾಡಿರುವ ತಂತ್ರಜ್ಞಾನಕ್ಕೆ ಒತ್ತು ನೀಡದೆ ಕಡಿಮೆ ಬೆಲೆ ಕೋಟ್ ಮಾಡಿದ್ದನ್ನು ಮಾತ್ರ ಪರಿಗಣಿಸಿ ಒಪ್ಪಂದ ಮಾಡಿಕೊಂಡಿದ್ದರ ಪರಿಣಾಮ ಇಂದು ಬಿಎಂಟಿಸಿ ಇವಿ ಬಸ್ಗಳು ರ್ನಿಲಕ್ಷ್ಯ ಚಾಲನೆ, ಬ್ರೇಕ್ಡೌನ್, ಉದ್ದೇಶಿತ ಮೈಲೇಜ್ನಲ್ಲಿ ಭಾರೀ ಇಳಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ.