- ಪೆಟ್ರೋಲ್ಗೆ ಶೇ.20 ಮಿಶ್ರಣ ಗುರಿ
- ಕೃಷಿ ಆಧಾರಿತ ಆರ್ಥಿಕತೆಗೆ ಬಲ
- ಬೆಂಗಳೂರು ತಲುಪಿದ ನವ ಇಂಧನ ಕ್ರಾಂತಿ
ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ಕಬ್ಬಿನಿಂದ ಉತ್ಪತ್ತಿಯಾಗುವ ಉತ್ಪನ್ನ ಹಾಗೂ ತ್ಯಾಜ್ಯವಿಗ ಕಾರುಗಳ ಚಕ್ರಗಳಿಗೆ ಚೈತನ್ಯ ತುಂಬುವ ಇಂಧನವಾಗಿ ರೂಪಾಂತರಗೊಳ್ಳುತ್ತಿದೆ. ಪೆಟ್ರೋಲ್ ಮೇಲಿನ ಅವಲಂಬನೆ ಕಡಿಮೆ ಮಾಡುವುದರ ಜತೆಗೆ ರೈತರ ಆದಾಯ ಹೆಚ್ಚಿಸುವ ಗುರಿ ಹೊಂದಿರುವ ಎಥೆನಾಲ್ ಇಂಧನ ಬಳಕೆಯ ಅಭಿಯಾನ ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ.
ಮಾರುತಿ ಸುಜುಕಿ ಅಭಿವೃದ್ಧಿಪಡಿಸಿರುವ ವ್ಯಾಗನ್ಆರ್ ಫ್ಲೆಕ್ಸ್ ಫ್ಯುಯೆಲ್ ವಾಹನದ ಮೂಲಕ ಎಥೆನಾಲ್ ಬಳಕೆಯ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಜೂ.14ರಂದು ಬೆಂಗಳೂರಿನಲ್ಲಿ ಚಾಲನೆ ದೊರೆತಿದೆ. ಪರಿಸರಸ್ನೇಹಿ ಇಂಧನ ಬಳಕೆ, ವಿದೇಶಿ ಕಚ್ಚಾತೈಲ ಆಮದು ವೆಚ್ಚ ಕಡಿತ ಮತ್ತು ಕೃಷಿ ಆಧಾರಿತ ಆರ್ಥಿಕತೆಗೆ ಬಲ ತುಂಬುವ ಉದ್ದೇಶದಿಂದ ಈ ಅಭಿಯಾನ ರೂಪುಗೊಂಡಿದೆ.
ಎಥೆನಾಲ್ ಎಂದರೆ ಕೇವಲ ಕಬ್ಬಿನ ರಸದಿಂದ ತಯಾರಾಗುವ ಇಂಧನವಲ್ಲ. ಸಕ್ಕರೆ ಉತ್ಪಾದನೆಯ ಉಪ ಉತ್ಪನ್ನವಾದ ಮೊಲಾಸಿಸ್, ಕಬ್ಬಿನ ಅವಶೇಷಗಳು ಸೇರಿ ವಿವಿಧ ಕೃಷಿ ತ್ಯಾಜ್ಯಗಳಿಂದಲೂ ಇದನ್ನು ಉತ್ಪಾದಿಸಬಹುದಾಗಿದೆ. ಈ ಉಪಕ್ರಮದಿಂದ ಕೃಷಿ ತ್ಯಾಜ್ಯಕ್ಕೆ ಮೌಲ್ಯ ಸಿಗುವುದರ ಜತೆಗೆ ರೈತರಿಗೆ ಹೆಚ್ಚುವರಿ ಆದಾಯದ ಮಾರ್ಗವೂ ತೆರೆಯಲಿದೆ.
ಫ್ಲೆಕ್ಸ್ ಫ್ಯುಯೆಲ್ ತಂತ್ರಜ್ಞಾನಕ್ಕೆ ಉತ್ತೇಜನೆ:
ಪ್ರಸ್ತುತ ದೇಶದಲ್ಲಿ ಪೆಟ್ರೋಲ್ಗೆ ಶೇ.20 ಎಥೆನಾಲ್ ಮಿಶ್ರಣ ಮಾಡುವ ಗುರಿಯತ್ತ ಕೇಂದ್ರ ಸರ್ಕಾರ ಸಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಫ್ಲೆಕ್ಸ್ ಫ್ಯುಯೆಲ್ ತಂತ್ರಜ್ಞಾನ ಹೊಂದಿರುವ ವಾಹನಗಳನ್ನು ಉತ್ತೇಜಿಸಲಾಗುತ್ತಿದೆ. ವ್ಯಾಗನ್ಆರ್ ಫ್ಲೆಕ್ಸ್ ಫ್ಯುಯೆಲ್ ಕಾರು ಇ&20ಯಿಂದ ಇ&85ವರೆಗೆ ಎಥೆನಾಲ್ಮಿಶ್ರಿತ ಇಂಧನದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಇಂಧನದಲ್ಲಿನ ಎಥೆನಾಲ್ ಪ್ರಮಾಣಕ್ಕೆ ಅನುಗುಣವಾಗಿ ಇಂಜಿನ್ ಕಾರ್ಯವೈಖರಿಯನ್ನು ಸ್ವಯಂಚಾಲಿತವಾಗಿ ಹೊಂದಿಸಿಕೊಳ್ಳುತ್ತದೆ.
ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಪರಿಸರ ಮಾಲಿನ್ಯ ಗಂಭೀರ ಸವಾಲಾಗಿ ಪರಿಣಮಿಸಿರುವ ಸಂದರ್ಭದಲ್ಲಿ ಎಥೆನಾಲ್ ಬಳಕೆ ಕಾರ್ಬನ್ ಹೊರಸೂಸುವಿಕೆಯನ್ನು ತಗ್ಗಿಸುವ ಪರ್ಯಾಯ ಪರಿಹಾರವಾಗಿ ಪರಿಣಮಿಸಬಹುದೆಂಬ ನಿರೀಕ್ಷೆ ಮೂಡಿದೆ. ಮತ್ತೊಂದೆಡೆ, ಕಬ್ಬು ಬೆಳೆಗಾರರ ಉತ್ಪನ್ನಗಳಿಗೆ ಸ್ಥಿರ ಬೇಡಿಕೆ ಸೃಷ್ಟಿಯಾಗುವುದರಿಂದ ಗ್ರಾಮೀಣ ಆರ್ಥಿಕತೆಗೂ ಇದು ಬಲ ತುಂಬಲಿದೆ. ಎಥೆನಾಲ್ ಪೂರೈಕೆಗೆ ಅಗತ್ಯ ಮೂಲಸೌಕರ್ಯ ಮತ್ತು ಇಂಧನ ಕೇಂದ್ರಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಬೇಕಿದೆ. ಗ್ರಾಹಕರಲ್ಲಿ ಜಾಗೃತಿ ಮೂಡಿಸಿ, ಸುಲಭ ಲಭ್ಯತೆ ಕಲ್ಪಿಸುವುದು ದೊಡ್ಡ ಸವಾಲಾಗಿದೆ.
* ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಆದಾಯದ ಮೂಲ
* ಕೃಷಿ ತ್ಯಾಜ್ಯಕ್ಕೆ ಮೌಲ್ಯವರ್ಧನೆ
* ಪೆಟ್ರೋಲ್ ಆಮದು ವೆಚ್ಚದಲ್ಲಿ ಉಳಿತಾಯ
* ವಾಯುಮಾಲಿನ್ಯ ಮತ್ತು ಕಾರ್ಬನ್ ಹೊರಸೂಸುವಿಕೆ ಕಡಿತ
* ಇಂಧನ ಸ್ವಾವಲಂಬನೆಯತ್ತ ಭಾರತದ ಹೆಜ್ಜೆ
* ರಾಜ್ಯದಲ್ಲಿ ಎಥೆನಾಲ್ಮಿಶ್ರಿತ ಇಂಧನ ಲಭ್ಯವಿರುವ ಪೆಟ್ರೋಲ್ ಬಂಕ್ಗಳ ಸಂಖ್ಯೆ ಸೀಮಿತ
* ಫ್ಲೆಕ್ಸ್ ಫ್ಯುಯೆಲ್ ವಾಹನಗಳ ಮಾರಾಟ ಮತ್ತು ಉತ್ಪಾದನೆ ಆರಂಭಿಕ ಹಂತದಲ್ಲಿದೆ
* ಗ್ರಾಹಕರಲ್ಲಿ ಎಥೆನಾಲ್ ಇಂಧನದ ಬಗ್ಗೆ ಸಾಕಷ್ಟು ಅರಿವು ಇಲ್ಲ
* ಕಬ್ಬು ಉತ್ಪಾದನೆ, ಎಥೆನಾಲ್ ತಯಾರಿಕೆ ಮತ್ತು ಪೂರೈಕೆ ಸರಪಳಿಯನ್ನು ನಿರಂತರವಾಗಿ ನಿರ್ವಹಿಸುವುದು ಸವಾಲಾಗಿದೆ
* ವಾಹನದ ಎಕ್ಸ್ ಶೋರೂಂ ಬೆಲೆ 7,23,900 ರೂಪಾಯಿ
* ಲೀಟರ್ಗೆ 23.56 ಕಿ.ಮೀ. ಮೈಲೇಜ್
* ಐದು ವಿವಿಧ ಬಣ್ಣಗಳಲ್ಲಿ ಲಭ್ಯ