freedom-habba 
ಬೆಂಗಳೂರು

‘ಫ್ರೀಡಂ ಹಬ್ಬ’ಕ್ಕೆ ನೋಂದಣಿ ಮಾಡಿಸಿದ್ದರಷ್ಟೇ ಎಂಟ್ರಿ

ಪ್ರಮುಖ ಮುಖ್ಯಾಂಶಗಳು

  • 12 ವರ್ಷದೊಳಗಿನ ಮಕ್ಕಳಿಗೆ ನೇರ ಪ್ರವೇಶದ ಅವಕಾಶ
  • ವಿಧಾನಸೌಧ ಮುಂಭಾಗ ಮ.12ರಿಂದ ರಾತ್ರಿ 10ರ ವರೆಗೆ ಕಾರ್ಯಕ್ರಮ

ಬೆಂಗಳೂರು: ರಾಜ್ಯದ ಆಡಳಿತ ಶಕ್ತಿಕೇಂದ್ರ ವಿಧಾನಸೌಧದ ಮುಂಭಾಗ ಸ್ವಾತಂತ್ರೋತ್ಸವ ದಿನ (ಆ.15) ಭಾರತದ ಭಾವೈಕ್ಯತೆ, ಭ್ರಾತೃತ್ವ, ಕಲೆ-ಸಂಗೀತ, ಸಂಸ್ಕೃತಿ, ಸ್ವಾತಂತ್ಯಕ್ಕಾಗಿ ಹೋರಾಟ ನಡೆಸಿರುವ ಧೀಮಂತರ ಸ್ಮರಣೆ, ನಾಗರಿಕರನ್ನು ಒಳಗೊಂಡ ಪರೇಡ್ ಇತ್ಯಾದಿ ಕಾರ್ಯಕ್ರಮಗಳು ಕಳೆಗಟ್ಟಲಿದೆ.

ಇದೇ ಮೊದಲ ಬಾರಿಗೆ ‘ಫ್ರೀಡಂ ಹಬ್ಬ’ ಹೆಸರಿನಲ್ಲಿ ನಡೆಯುತ್ತಿರುವ ವಿಶಿಷ್ಟ ಸಮಾರಂಭದಲ್ಲಿ ಪಾಲ್ಗೊಳ್ಳಲು ಉಚಿತ ಪ್ರವೇಶ ಕಲ್ಪಿಸಿದ್ದು, ಹೆಸರು ನೋಂದಣಿ ಮಾಡಿದವರಿಗಷ್ಟೇ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ (12 ವರ್ಷದೊಳಗಿನ ಮಕ್ಕಳಿಗೆ ಅನ್ವಯಿಸದು). ಅಂದು ಮ.12ರಿಂದ ಆರಂಭವಾಗಲಿರುವ ಕಾರ್ಯಕ್ರಮವನ್ನು 3 ವಿಭಾಗಗಳಲ್ಲಿ ನಡೆಯಲಿದ್ದು, ಹೆಚ್ಚಿನ ಜನಸಂದಣಿ ತಡೆಯಲು ಸಾರ್ವಜನಿಕರಿಗೆ ಇಂತಿಷ್ಟು ಸಮಯ ನಿಗದಿ ಮಾಡಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಹಾಗೂ ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

3 ಸಾವಿರ ಪೊಲೀಸರ ನಿಯೋಜನೆ:

ವಿಧಾನಸೌಧದ ಎದಿರು ಯಾವುದೇ ಗದ್ದಲ, ಗೊಂದಲಕ್ಕೆ ಅವಕಾಶ ಆಗದಿರಲು ವೀಕ್ಷಣೆಗೆ ಬರಲಿರುವ ಜನರಿಗೆ ಸಂಘಟಕರು ಹಾಗೂ ಪೊಲೀಸರು ಮಾಹಿತಿ ನೀಡಲಿದ್ದಾರೆ. ನೂಕುನುಗ್ಗಲು ಉಂಟಾಗದಿರಲು ಜನಸಂಣಿ ನಿರ್ವಹಣಾ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು. ಅಂದು ಬೆ.11ರಿಂದ ರಾತ್ರಿ 11ರ ವರೆಗೆ ಅಂಬೇಡ್ಕರ್ ವೀಧಿಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಿ ಜನರು ನಡೆದು ಬಂದುಹೋಗಲು ಅವಕಾಶ ಕಲ್ಪಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಧಾನಸೌಧ ಬಳಿ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರೋ ನಿಲ್ದಾಣದಲ್ಲಿ ರೈಲು ನಿಲುಗಡೆ ನಿಬಂಧಿಸಿದ್ದು, ಅದರ ಹಿಂದಿನ/ಮುಂದಿನ ನಿಲ್ದಾಣವನ್ನು ಜನರು ಬಳಕೆ ಮಾಡಿಕೊಳ್ಳಬೇಕು. ಭದ್ರತೆಗೆ ಒಟ್ಟು 3 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ಸೀಮಂತ್‌ಕುಮಾರ್ ಸಿಂಗ್ ಮಾಹಿತಿ ನೀಡಿದರು.
ಫ್ರೀಡಂ ಹಬ್ಬಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ ಸೇರಿ ಇತರ ನಾಗರಿಕ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಸ್ವಾತಂತ್ರ್ಯ ನಡಿಗೆಯಲ್ಲಿ 25 ತಂಡ ಭಾಗಿ:

ವಿಧಾನಸೌಧದ ಎದಿರು ‘ಸ್ವಾತಂತ್ರ್ಯ ನಡಿಗೆ’ ಹೆಸರಿನಲ್ಲಿ ಕಲಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾರತ ಹಾಗೂ ಕರ್ನಾಟಕವನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಸಂಸ್ಕತಿ ಅನಾವರಣಗೊಳಿಸುವ 15 ಹಾಗೂ ಕನ್ನಡ-ಸಂಸ್ಕೃತಿ ಇಲಾಖೆಯ 10 ಕಲಾ ತಂಡಗಳು ಸೇರಿ 25 ತುಕಡಿಗಳು ಪರೇಡ್‌ನಲ್ಲಿ ಭಾಗಿಯಾಗಲಿವೆ.

ಮಕ್ಕಳ ಮೇಳ:

ದೇಶದ ಸ್ವಾತಂತ್ರ್ಯದ ಬಗ್ಗೆ ಮಾಹಿತಿ ಪಡೆಯಲು ಮಕ್ಕಳಿಗೆ ಪ್ರತ್ಯೇಕ ಪೆವಿಲಿಯನ್ ಇರಲಿದೆ. ಇದರಲ್ಲಿ ಚಿಣ್ಣರಿಗೆ ವಿವಿಧ ಆಟೋಟಗಳು, ಸಂವಾದ, ಕಥೆ ಹೇಳುವಿಕೆ, ಕಲೆ, ಕರಕುಶಲ ವಸ್ತು ಸಹಿತ ಸೃಜನಶೀಲತೆಗೆ ಅವಕಾಶ ಕಲ್ಪಿಸಲಾಗುತ್ತದೆ. ವಿಧಾನಸೌಧ-ವಿಕಾಸಸೌಧ ಮಧ್ಯೆಯಿರುವ ಗಾಂಧೀಜಿ ಪ್ರತಿಮೆ ಬಳಿ ಸಂವಿಧಾನ ಕಟ್ಟೆ, ವಾಕಿಂಗ್ ಮ್ಯೂಸಿಯಂ ಹೆಸರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಯಶೋಗಾಥೆಯನ್ನು ಪರಿಚಯಿಸಲಾಗುತ್ತದೆ.

ಸಂಗೀತ ರಸ ಸಂಜೆ:

ನಾಡಿನ ಪ್ರಮುಖ ಕಲಾವಿದರು ಸಾಯಂಕಾಲ 6.30ಕ್ಕೆ ಸಂಗೀತ ರಸ ಸಂಜೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್, ಎಂ.ಡಿ. ಪಲ್ಲವಿ, ಸಂಜಿತ್ ಹೆಗ್ಡೆ, ನಕುಲ್ ಅಭ್ಯಂಕರ್, ವಾರಿಜಾಶ್ರೀ ವೇಣುಗೋಪಾಲ್ ಹಾಗೂ ಇತರರು ವೀಕ್ಷಕರನ್ನು ರಂಜಿಸಲಿದ್ದಾರೆ.