- ಕೇಂದ್ರ. ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 18 ಕಿ.ಮೀ. ಫುಟ್‌ಪಾತ್ ಒತ್ತುವರಿಮುಕ್ತ
- ಛಲವಾದಿಪಾಳ್ಯದ ಮುಖ್ಯರಸ್ತೆಯಲ್ಲಿ 10 ಟನ್ ಕಟ್ಟಡ ತ್ಯಾಜ್ಯ ವಿಲೇವಾರಿ
ಬೆಂಗಳೂರು: ರಾಜಧಾನಿಯಲ್ಲಿ ಸುರಕ್ಷಿತ ಪಾದಚಾರಿ ಮಾರ್ಗಗಳ ನಿರ್ಮಾಣ ಹಿನ್ನೆಲೆಯಲ್ಲಿ ಪಂಚ ನಗರ ಪಾಲಿಕೆಗಳು ಕೈಗೆತ್ತಿಕೊಂಡಿರುವ ಆಪರೇಷನ್ ಫುಟ್‌ಪಾತ್ ಕಾರ್ಯಾಚರಣೆಯಲ್ಲಿ ಬುಧವಾರ ಆಡಳಿತ ಶಕ್ತಿಕೇಂದ್ರವಾದ ವಿಧಾನಸೌಧ ಸುತ್ತಮುತ್ತ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲಾಯಿತು.
ಸತತ ಮೂರನೇ ದಿನವೂ ಶಿವಾಜಿನಗರ ವಿಭಾಗದಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಯಿತು. ಅಂಬೇಡ್ಕರ್ ವೀಧಿ (ವಿಧಾನಸೌಧ ಮುಂಭಾಗ), ನೃಪತುಂಗ ರಸ್ತೆ (ಕೆ.ಆರ್. ವೃತ್ತದಿಂದ ಹಡ್ಸನ್ ವೃತ್ತದವರೆಗೆ), ಶೇಷಾದ್ರಿ ರಸ್ತೆ (ಮೌರ್ಯ ವೃತ್ತದಿಂದ ಕೆ.ಆರ್. ವೃತ್ತದವರೆಗೆ), ಪ್ಯಾಲೇಸ್ ರಸ್ತೆ (ಮಹಾರಾಣಿ ಕಾಲೇಜಿನಿಂದ ಮೈಸೂರು ಬ್ಯಾಂಕ್‌ವರೆಗೆ) ಹಾಗೂ ಸ್ಯಾಂಕಿ ರಸ್ತೆ (ಬಿಡಿಎ ಜಂಕ್ಷನ್‌ನಿಂದ ಹೈಗ್ರೌಂಡ್ಸ್‌ನ ಸೋಫಿಯಾ ಶಾಲೆಯವರೆಗೆ) ಸೇರಿ 6.30 ಕಿ.ಮೀ. ಉದ್ದ ಪಾದಚಾರಿ ಮಾರ್ಗಗನ್ನು ಒತ್ತುವರಿಮುಕ್ತಗೊಳಿಸಲಾಯಿತು.
ಕೇಂದ್ರ ಪಾಲಿಕೆಯ ವಿವಿಧ ವಿಭಾಗಗಳ 14 ಪ್ರಮುಖ ರಸ್ತೆಗಳ ಒಟ್ಟು 14.50 ಕಿ.ಮೀ. ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲಾಯಿತು. ಕಾರ್ಯಾಚರಣೆಯಲ್ಲಿ 20 ಪೆಟ್ಟಿ ಅಂಗಡಿಗಳು, 27 ತಳ್ಳುವ ಗಾಡಿ, 2 ತಾತ್ಕಾಲಿಕ ಶೆಡ್, 6 ಮೆಟ್ಟಿಲು, 2 ಜಾಹೀರಾತು ಫಲಕ, 2 ಕ್ಯಾನೋಪಿಗಳು ಹಾಗೂ 50 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಇದಕ್ಕಾಗಿ 60 ಕಾರ್ಮಿಕರು, 4 ಜೆಸಿಬಿ, 6 ಟ್ರ್ಯಾಕ್ಟರ್ ಹಾಗೂ 6 ಟಿಪ್ಪರ್‌ಗಳನ್ನು ಬಳಸಿಕೊಳ್ಳಲಾಯಿತು ಎಂದು ಆಯುಕ್ತ ಜಿ.ಜಗದೀಶ್ ತಿಳಿಸಿದ್ದಾರೆ.
ಚಲವಾದಿಪಾಳ್ಯದಲ್ಲಿ 10 ಟನ್ ತ್ಯಾಜ್ಯ ವಿಲೇ:
ಚಾಮರಾಜಪೇಟೆ ವಿಭಾಗದ ಚಲವಾದಿಪಾಳ್ಯ ಸುತ್ತಮುತ್ತ ಕಾರ್ಯಾಚರಣೆ ನಡೆಸಿದ ಪಾಲಿಕೆ ಸಿಬ್ಬಂದಿ ಹಲವು ಸಂಖ್ಯೆಯ ಅನಧಿಕೃತ ಭಾಗಗಳನ್ನು ತೆಗೆದುಹಾಕಿದರು. ಜತೆಗೆ ಪ್ರಮುಖ ರಸ್ತೆಗಳ ಬದಿ ಸುರಿದಿದ್ದ 10 ಟನ್ ಕಟ್ಟಡದ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಇದಲ್ಲದೆ ಗಾಂಧಿನಗರ, ಸರ್ ಸಿ.ವಿ. ರಾಮನ್‌ನಗರ, ಶಾಂತಿನಗರ ಹಾಗೂ ಚಿಕ್ಕಪೇಟೆ ವಿಭಾಗಗಳಲ್ಲೂ ತೆರವು ಕಾರ್ಯ ಕೈಗೊಳ್ಳಲಾಯಿತು.
ಉತ್ತರ ಪಾಲಿಕೆ ವ್ಯಾಪ್ತಿಯಲ್ಲೂ ಕಾರ್ಯಾಚರಣೆ:
ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲೂ ಕಾರ್ಯಾಚರಣೆ ನಡೆಸಿ ಒಟ್ಟು 3.50 ಕಿ.ಮೀ. ಉದ್ದದ ಫುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸಲಾಯಿತು. ಬ್ಯಾಟರಾಯನಪುರ ವಿಭಾಗದ ಸೇಂಟ್ ಫಿಲೋಮಿನಾ ಆಸ್ಪತ್ರೆ ರಸ್ತೆ (ನಾಗವಾರ ರಿಂಗ್ ರಸ್ತೆಯಿಂದ ಥಣಿಸಂದ್ರ ಸರ್ವಿಸ್ ರಸ್ತೆಯವರೆಗೆ) 0.20 ಕಿ.ಮೀ., ಯಲಹಂಕ ವಿಭಾಗದಲ್ಲಿ ಬಿ.ಬಿ. ರಸ್ತೆ, ಹೆಬ್ಬಾಳ ಕೆಂಪಾಪುರದಿಂದ ಆಂಧ್ರಜ್ಯೋತಿ ಬಸ್ ನಿಲ್ದಾಣದವರೆಗೆ 1.50 ಕಿ.ಮೀ., ಹೆಬ್ಬಾಳ ವಿಭಾಗದಲ್ಲಿ ಸಂಜಯನಗರ ಮುಖ್ಯರಸ್ತೆಯಲ್ಲಿ 1.80 ಕಿ.ಮೀ. ಉದ್ದದ ಫುಟ್‌ಪಾತ್‌ಗಳ ಒತ್ತುವರಿ ಮುಕ್ತಗೊಳಿಸಲಾಗಿದೆ. ಇದಕ್ಕಾಗಿ 3 ಜೆಸಿಬಿ, 10 ಟ್ರ್ಯಾಕ್ಟರ್,1 ಇತರೆ ಯಂತ್ರ ಹಾಗೂ 40 ಸಿಬ್ಬಂದಿಯನ್ನು ಬಳಸಿಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.