ejipuraflyoverwork 
ಬೆಂಗಳೂರು

ಈಜೀಪುರ ಮೇಲ್ಸೇತುವೆ ಕಾಮಗಾರಿ ವಿಘ್ನ ನಿವಾರಣೆ

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ಸೇಂಟ್ ಜಾನ್ಸ್ ಜಾಗದಲ್ಲಿ ಪೋರ್ಟಲ್ ಪಿಯರ್ ನಿರ್ಮಿಸಲು ಒಪ್ಪಿಗೆ
  • ತಕ್ಷಣ ಕೆಲಸ ಆರಂಭಿಸಲು ಕಂಟ್ರ್ಯಾಕ್ಟರ್‌ಗೆ ಮಹೇಶ್ವರ್ ರಾವ್ ಸೂಚನೆ
ಬೆಂಗಳೂರು: ಹಲವು ವರ್ಷಗಳಿಂದ ಕುಂಟುತ್ತಾ ಸಾಗಿರುವ ಈಜೀಪುರ ಮೇಲ್ಸೇತುವೆಗೆ ಕೋರಮಂಗಲದ ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಗೆ ಸೇರಿದ ಜಾಗವನ್ನು ಬಳಸಿಕೊಳ್ಳಲು ಜಿಬಿಎ ಕೊನೆಗೂ ಯಶಸ್ವಿಯಾಗಿದೆ.
ರಜಾದಿನವಾದ ಸೋಮವಾರ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಹಾಗೂ ಸಂಸ್ಥೆಯ ಪ್ರಮುಖರ ಜತೆ ಸಭೆ ನಡೆಸಿದ ವೇಳೆ ಕಾಮಗಾರಿಗೆ ಅಗತ್ಯವಿರುವ ಜಾಗವನ್ನು ಬಿಟ್ಟುಕೊಡಲು ಒಪ್ಪಿಗೆ ಪಡೆಯಲಾಯಿತು. ಇದರಿಂದಾಗಿ 3-4 ವರ್ಷದಿಂದ ಭೂಸ್ವಾಧೀನವಾಗದೆ ನೆನೆಗುದಿಗೆ ಅಕಾಡೆಮಿಯ ಜಾಗದಲ್ಲಿ 5 ಪೋರ್ಟಲ್ ಪಿಯರ್‌ಗಳನ್ನು ಅಳವಡಿಸಿ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತರು ಹಿರಿಯ ಇಂಜಿನಿಯರ್‌ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ಈ ವೇಳೆ ಮಾತನಾಡಿದ ಎಂ.ಮಹೇಶ್ವರ್ ರಾವ್, ಈಜೀಪುರ ಮೇಲ್ಸೇತುವೆ ಕಾಮಗಾರಿ ಸದ್ಯ ವೇಗವಾಗಿ ನಡೆಯುತ್ತಿದ್ದು, ಕೇಂದ್ರೀಯ ಸದನ ಕಡೆಯಿಂದ ಈಜೀಪುರ ಕಡೆಗೆ ಸಾಗುವ ಎಡ ಭಾಗದಲ್ಲಿ ಸೇಂಟ್ ಜಾನ್ಸ್ ಬಳಿ 5 ಪೋರ್ಟಲ್ ಪಿಯರ್ ಅಳವಡಿಸಲು ಜಾಗದ ಬಳಕೆ ಅಗತ್ಯವಿದೆ. ಪಾದಚಾರಿ ಮಾರ್ಗ ಹಾಗೂ ಸೇಂಟ್ ಜಾನ್ಸ್ ಕಾಂಪೌಂಡ್ ಗೋಡೆಯ ಭಾಗದಲ್ಲಿ ಪೋರ್ಟಲ್ ಪಿಯರ್ ಹೊಂದಿಕೊಂಡಂತೆ ನಿರ್ಮಿಸಬೇಕಿದೆ. ಈ ಸಂಬಂಧ ಪೋರ್ಟಲ್ ಪಿಯರ್ ಅಳವಡಿಸಲು ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ್ದು, ಜಾಗದ ಬಳಕೆಗೆ ಒಪ್ಪಿಗೆ ಪಡೆಯಲಾಗಿದೆ ಎಂದು ತಿಳಿಸಿದರು.

ಟಿಡಿಆರ್ ಪ್ರಕ್ರಿಯೆ ಪೂರ್ಣಗೊಳಿಸಿ:

ಸೇಂಟ್ ಜಾನ್ಸ್ ಭಾಗದಲ್ಲಿ ರಾಂಪ್ ನಿರ್ಮಿಸಲು ಭೂಸ್ವಾಧೀನ ಪಡಿಸಿಕೊಳ್ಳುವ ಜಾಗಕ್ಕೆ ಟಿಡಿಆರ್ ನೀಡುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಆ ಜಾಗವನ್ನು ಹಸ್ತಾಂತರ ಮಾಡಿಕೊಂಡ ತಕ್ಷಣ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ವೇಳೆ ಸಂಚಾರಿ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಕಾರ್ತೀಕ್ ರೆಡ್ಡಿ, ದಕ್ಷಿಣ ವಿಭಾಗದ ಡಿಸಿಪಿ ಗೋಪಾಲ್ ಎಂ., ಸೇಂಟ್ ಜಾನ್ಸ್ ಸಂಸ್ಥೆಯ ನಿರ್ದೇಶಕ ರೆವರೆಂಡ್ ಫಾದರ್ ಜೇಸುದಾಸ್, ಹಣಕಾಸು ಸಹ ನಿರ್ದೇಶಕ ರೆವರೆಂಡ್ ಫಾದರ್ ಟೋನಿ ಸೇರಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
"

ಈಜೀಪುರ ಮುಖ್ಯರಸ್ತೆಯಲ್ಲಿ 2.38 ಕಿ.ಮೀ. ಉದ್ದದ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ಮೇಲ್ಸೇತುವೆಗೆ ಒಟ್ಟು 762 ಸೆಗ್ಮೆಂಟ್‌ಗಳನ್ನು ಕಾಸ್ಟಿಂಗ್ ಮಾಡಬೇಕಿದ್ದು, ಈಗಾಗಲೇ 645 ಸೆಗ್ಮೆಂಟ್‌ಗಳನ್ನು ಕಾಸ್ಟಿಂಗ್ ಮಾಡಲಾಗಿದೆ. ಇನ್ನು 117 ಸೆಗ್ಮೆಂಟ್‌ಗಳನ್ನು ಕಾಸ್ಟಿಂಗ್ ಮಾಡಬೇಕಿದೆ. ಸದ್ಯ 490 ಸೆಗ್ಮೆಂಟ್‌ಗಳನ್ನು ಜೋಡಣೆ ಮಾಡಲಾಗಿದೆ.

- ಡಾ. ರಾಘವೇಂದ್ರ ಪ್ರಸಾದ್, ಬಿ-ಸ್ಮೈಲ್ ಮುಖ್ಯ ಅಭಿಯಂತರ