- ಅಕ್ಟೋಬರ್ಗೆ ಈಜೀಪುರ ಮೇಲ್ಸೇತುವೆ ಸಿದ್ಧ!
- ಗುತ್ತಿಗೆ ವೈಫಲ್ಯ, ಭೂಸ್ವಾಧಿನ, ಆಸ್ಪತ್ರೆ ಅಡ್ಡಿ ದಾಟಿದ ಯೋಜನೆಗೆ ಹೊಸ ವೇಗ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದ ಸಂಚಾರ ದಟ್ಟಣೆಗೆ ಪರಿಹಾರ ನೀಡಬೇಕಿದ್ದ ಈಜೀಪುರ&ಕೇಂದ್ರೀಯ ಸದನ ಮೇಲ್ಸೇತುವೆ ಯೋಜನೆ ವರ್ಷಗಳ ಕಾಲ ವಿಳಂಬವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸುಮಾರು ಎಂಟು ವರ್ಷಗಳ ಬಳಿಕ ಈ ಯೋಜನೆ ಅಂತಿಮ ಹಂತ ತಲುಪಿದ್ದು, ಅಕ್ಟೋಬರ್ ಅಂತ್ಯದೊಳಗೆ ಮುಖ್ಯ ಕಾಮಗಾರಿ ಪೂರ್ಣಗೊಳಿಸಿ ಇದೇವರ್ಷ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ.
2017ರಲ್ಲಿ 203.20 ಕೋಟಿ ರೂ. ವೆಚ್ಚದಲ್ಲಿ ಆರಂಭವಾದ 2.38 ಕಿ.ಮೀ. ಉದ್ದದ ಈ ಮೇಲ್ಸೇತುವೆ ಯೋಜನೆ ಆರಂಭದಲ್ಲೇ ಹಲವು ಅಡ್ಡಿ-&ಆತಂಕಗಳನ್ನು ಎದುರಿಸಿತು. ಮೊದಲ ಗುತ್ತಿಗೆದಾರ ಸಂಸ್ಥೆಯ ರ್ನಿಲಕ್ಷ್ಯ, ಉಪಗುತ್ತಿಗೆದಾರರಿಗೆ ಹಣ ಪಾವತಿ ಸಮಸ್ಯೆ, ಯಂತ್ರೋಪಕರಣಗಳ ಕೊರತೆ, ಭೂಸ್ವಾಧಿನ ಗೊಂದಲಗಳಿಂದ ಕಾಮಗಾರಿ ವರ್ಷಗಳ ಕಾಲ ಕುಂಠಿತಗೊಂಡಿತ್ತು. ಪರಿಣಾಮ ಕೊರಮಂಗಲ, ಈಜೀಪುರ, ಆನೆಪಾಳ್ಯ, ಕೇಂದ್ರೀಯ ಸದನ ಭಾಗಗಳಲ್ಲಿ ಪ್ರತಿದಿನ ಸಾವಿರಾರು ವಾಹನ ಸವಾರರು ಸಂಚಾರ ಸಿಕ್ಕಿನ ನರಕ ಅನುಭವಿಸುತ್ತಿದ್ದರು.
ಯೋಜನೆಯ ಅತ್ಯಂತ ದೊಡ್ಡ ತಾಂತ್ರಿಕ ಅಡ್ಡಿಯಾಗಿದ್ದ ಸೆಂಟ್ ಜಾನ್ಸ್ ಆಸ್ಪತ್ರೆ ಸಮೀಪದ ಪೋರ್ಟಲ್ ಫ್ರೇಮ್ ನಿಮಾರ್ಣ ಕೊನೆಗೂ ಈ ವರ್ಷದ ಫೆಬ್ರವರಿಯಲ್ಲಿ ಅನುಮತಿ ಪಡೆದು ಆರಂಭಗೊಂಡಿದೆ. ಇದರಿಂದ ಕಾಮಗಾರಿಗೆ ಹೊಸ ವೇಗ ಸಿಕ್ಕಿದೆ. ಪ್ರಸ್ತುತ ಪೈಲ್ಸ್, ಪೈಲ್ ಕ್ಯಾಪ್, ಪಿಯರ್ಸ್ ನಿಮಾರ್ಣ ಪೂರ್ಣಗೊಂಡಿದ್ದು, ಉಳಿದಿರುವ ಅಂತಿಮ ಸೆಗ್ಮೆಂಟ್ ಅಳವಡಿಕೆ ಕಾರ್ಯ ಭರದಿಂದ ಸಾಗುತ್ತಿದೆ.
ಮೇಲ್ಸೇತುವೆ ಪೂರ್ಣಗೊಂಡರೆ ನಗರದ ದಕ್ಷಿಣ ಮತ್ತು ಕೇಂದ್ರ ಭಾಗಗಳ ನಡುವಿನ ವಾಹನ ಸಂಚಾರ ಸಮಯ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ. ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪ್ರತಿದಿನ ಈ ಮಾರ್ಗ ಬಳಸುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ.
* ಒಟ್ಟು ವೆಚ್ಚ& 203.20 ಕೋಟಿ ರೂ.
* ಮೇಲ್ಸೇತುವೆ ಉದ್ದ& 2.38 ಕಿ.ಮೀ.
* ಪೂರ್ಣಗೊಳಿಸುವ ಗುರಿ& ಅಕ್ಟೋಬರ್ 2026ಕ್ಕೆ
* ವರ್ಷಾಂತ್ಯದೊಳಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ
* 762 ಸೆಗ್ಮೆಂಟ್ಗಳಲ್ಲಿ 728 ಪೂರ್ಣ
* 15 ಸ್ಪಾನ್ ಅಳವಡಿಕೆ ಬಾಕಿ
* ಅಡಿಪಾಯ, ಪೈಲ್ಸ್, ಪಿಯರ್ಸ್ ನಿಮಾರ್ಣ ಪೂರ್ಣ
* ಸೆಂಟ್ ಜಾನ್ಸ್ ಭಾಗದ ಭೂ ಸಮಸ್ಯೆಗೆ ಪರಿಹಾರ
* ರಸ್ತೆ ಅಗಲೀಕರಣ, ಪಾದಚಾರಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿ