Shooting: ಚಿನ್ನ, ಕಂಚಿನ ಪದಕಕ್ಕೆ ಗುರಿಯಿಟ್ಟ 8 ತಿಂಗಳ ಗರ್ಭಿಣಿ ಮೇಘನಾ!  
ಬೆಂಗಳೂರು

Shooting: ಚಿನ್ನ, ಕಂಚಿನ ಪದಕಕ್ಕೆ ಗುರಿಯಿಟ್ಟ 8 ತಿಂಗಳ ಗರ್ಭಿಣಿ ಮೇಘನಾ!

ನವದೆಹಲಿ: ಎಂಟು ತಿಂಗಳ ಗರ್ಭಿಣಿಯಾಗಿರುವ ಕರ್ನಾಟಕದ ಶೂಟರ್​ ಮೇಘನಾ ಸಜ್ಜನರ್ (Meghana Sajjanar)​ ಏಷ್ಯನ್​ ಶೂಟಿಂಗ್​ ಚಾಂಪಿಯನ್​ಷಿಪ್​ನಲ್ಲಿ (Asian Championships) ಶನಿವಾರ ಚಿನ್ನ ಮತ್ತು ಕಂಚಿನ ಪದಕಕ್ಕೆ ಗುರಿಯಿಡುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ತುಂಬು ಗರ್ಭಿಣಿಯಾಗಿರುವ (pregnant) ನಡುವೆಯೂ ಶೂಟಿಂಗ್​ ರೇಂಜ್​ಗೆ ಕಾಲಿಟ್ಟು ದಿಟ್ಟತನ ಮೆರೆದಿದ್ದಲ್ಲದೆ, ಪದಕವನ್ನೂ ಬೇಟೆಯಾಡಿರುವ ಮೇಘನಾಗೆ ಅವರ ಗೆಳತಿ ಹಾಗೂ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ಮೆಚ್ಚುಗೆ ಸೂಚಿಸಿದ್ದಾರೆ.
ಕರ್ಣಿ ಸಿಂಗ್​ ರೇಂಜ್​ನಲ್ಲಿ ನಡೆದ ಮಹಿಳೆಯರ 10 ಮೀ. ಏರ್​ ರೈಫಲ್​ ಸ್ಪರ್ಧೆಯ ತಂಡ ವಿಭಾಗದಲ್ಲಿ ಒಲಿಂಪಿಯನ್​ ಇಲವೆನಿಲ್​ ವಲರಿವನ್​ ಮತ್ತು ಆರ್ಯ ಬೋಸ್​ ಜತೆಗೂಡಿ ಚಿನ್ನ ಜಯಿಸಿದ 32 ವರ್ಷದ ಮೇಘನಾ, ವೈಯಕ್ತಿಕ ವಿಭಾಗದಲ್ಲಿ ಕಂಚಿನ ಸಾಧನೆ ಮೆರೆದರು. ಬೆಂಗಳೂರಿನ ಮೇನಾ ಅವರು ಕಳೆದ ವರ್ಷವಷ್ಟೇ ಮೋಹನ್​ ಕುಮಾರ್​ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಇನ್ನೊಂದು ತಿಂಗಳೊಳಗೆ ತಾಯಿಯಾಗಲಿರುವ ಮೇಘನಾ, "ಇದೊಂದು ವಿಭಿನ್ನವಾದ ಅನುಭವ. ಈ ಸಮಯದಲ್ಲಿ ಶೂಟಿಂಗ್​ನಲ್ಲಿ ಸ್ಪರ್ಧಿಸುವುದು ಕಠಿಣ. ಆದರೆ ನಾನು ಇದನ್ನು ನಿಭಾಯಿಸುತ್ತಿದ್ದೇನೆ' ಎಂದಿದ್ದಾರೆ.
ಈ ಹಿಂದೆ 2002ರ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಮಹಿಳಾ ಶೂಟರ್​ ಒಬ್ಬರು ಗರ್ಭಿಣಿಯಾಗಿದ್ದರೂ ಶೂಟಿಂಗ್​ ಸ್ಪರ್ಧೆಯಲ್ಲಿ ಭಾಗವಹಿಸಿದ ಬಗ್ಗೆ ಕೇಳಿದ್ದೆ. ಆಕೆಗೆ ತರಬೇತಿ ನೀಡಿದ್ದ ಲಾಜ್ಲೋ ಸುಚಕ್​ ನನಗೂ ಹಿಂದೆ ಕೋಚ್​ ಆಗಿದ್ದರು. ಅದರನ್ವಯ ಅವರಿಂದ ಸಲಹೆಗಳನ್ನು ಪಡೆದು ಮೇಘನಾಗೆ ನೆರವಾದೆ ಎಂದು ಮೇಘನಾರ ಕೋಚ್​ ರಾಕೇಶ್​ ಮನ್​ಪತ್​ ತಿಳಿಸಿದ್ದಾರೆ.