- ಜಿಕೆವಿಕೆಗೆ ಸಾವಿರಾರು ಮಂದಿ ಭೇಟಿ, ಖರೀದಿಗೆ ಮುಗಿಬಿದ್ದ ಜನ
- 200ಕ್ಕೂ ಅಧಿಕ ರೈತರಿಂದ ಕೃಷಿ ಉತ್ಪನ್ನಗಳ ಮಾರಾಟ
ಬೆಂಗಳೂರು: ಮಣ್ಣಿನಿಂದ ತಯಾರಿಸಿರುವ ಕುಡಿಯುವ ನೀರಿನ ಫಿಲ್ಡರ್ ಮಡಿಕೆ, ಕಾಫಿ ಹೀರುವ ಕಪ್, ಹೂದಾನಿ, ಗೋಡೆಗೆ ನೇತುಹಾಕುವ ಚಿತ್ರಪಟ - ಹೀಗೆ ಸಂಪೂರ್ಣ ಮಣ್ಣಿನಿಂದಲೇ ತಯಾರಿಸಿರುವ ಹತ್ತಾರು ಬಗೆಯ ಪರಿಕರಗಳು ಬಿಸಿದೋಸೆಯಂತೆ ರೈತಸಂತೆಯಲ್ಲಿ ಮಾರಾಟವಾದವು.
ಬೆಂಗಳೂರು ಕೃಷಿ ವಿವಿಯ ಕ್ಯಾಂಪಸ್ ಜಿಕೆವಿಕೆಯಲ್ಲಿ ಶನಿವಾರ ನಡೆದ ರೈತ ಸಂತೆಯಲ್ಲಿ ಅಕ್ಷರಶಃ ಗಿಜಿಗಿಜಿಗುಡುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಕೃಷ್ಯುತ್ಪನ್ನಗಳ ಜತೆಗೆ ಪಾರಂಪರಿಕ ಕಲೆಯಿಂದ ತಯಾರಿಸಿರುವ ಮಣ್ಣಿನ ಹಣತೆ ಹಾಗೂ ಪರಿಸರಸ್ನೇಹಿತ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು. ಜತೆಗೆ ವಿವಿಧ ಬಗೆಯ ಕೇಕ್, ಸಾವಯವ/ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಪೌಷ್ಟಿಕ ಆಹಾರ ಹಾಗೂ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿರುವ ವಸ್ತುಗಳು ಹೆಚ್ಚು ಬಿಕರಿಯಾದವು.
ಹಣ್ಣು, ತರಕಾರಿ ಮಾರಾಟ ಭರಾಟೆ:
ಸಂತೆಯಲ್ಲಿ ವಿವಿಧ ಬಗೆಯ ಹಣ್ಣು ತರಕಾರಿಗಳನ್ನು ಜನರು ಮುಗಿಬಿದ್ದು ಖರೀದಿಸಿದರು. ಡ್ರ್ಯಾಗನ್ ಫ್ರೂಟ್, ಬಟರ್ ಫ್ರೂಟ್, ಚಕ್ಕೋತ, ವಿವಿಧ ಬಗೆಯ ಸೊಪ್ಪುಗಳು ಹೆಚ್ಚು ಬಿಕರಿಯಾದವು. ಗ್ರಾಮೀಣ ಭಾಗದ ಸಾಂಪ್ರದಾಯಿಕ ಸಿಹಿ ತಿನಿಸುಗಳು, ರಾಗಿ ಹಂಬಲಿ, ನವಣೆ ಅಂಬಲಿ, ಗಿರ್ ತಳಿಯ ಗಿಣ್ಣು ಬಗ್ಗೆ ಮಾಹಿತಿ ಪಡೆದು ಜನರು ಖರೀದಿಸಿದರು.
ಇದಲ್ಲದೆ ಜೇನು ಉತ್ಪನ್ನ, ರೇಷ್ಮೆಯಿಂದ ತಯಾರಿಸಿರುವ ಪರಿಕರ, ಅಲಂಕಾರಿಕ ಗಿಡಗಳು, ತಾರಸಿ ತೋಟದಲ್ಲಿ ಬಳಸುವ ಕಿರು ಸಾಧನಗಳನ್ನು ಹೆಚ್ಚು ಮಾರಾಟವಾದವು. ಈ ಬಾರಿ ವಿಶೇಷ ಆಕರ್ಷಣೆಯಾಗಿ ಹಸಿ ಹಾಗೂ ಒಣಗಿದ ನೆಲಗಡಲೆ ಸಿಪ್ಪೆ ತೆಗೆಯುವ ಯಂತ್ರವನ್ನು ವಿವಿ ವತಿಯಿಂದ ಪ್ರದರ್ಶನ ಮಾಡಲಾಗಿತ್ತು. ಇದರ ಬಗ್ಗೆ ಜನರು ಪ್ರಾತ್ಯಕ್ಷಿಕೆ ವೀಕ್ಷಿಸಿದರು.
ಈ ವೇಳೆ ಕೃಷಿ ವಿವಿ ಕುಲಪತಿ ಡಾ. ಎಸ್.ವಿ. ಸುರೇಶ್, ವಿಸ್ತರಣಾ ನಿರ್ದೇಶಕ ವೈ.ಎನ್. ಶಿವಲಿಂಗಯ್ಯ, ಕುಲಸಚಿವ ಡಾ. ಕೆ. ಮಧುಸೂದನ್, ಡಾ. ಮೂಡಲಗಿರಿಯಪ್ಪ, ಡಾ. ಕೆ.ಪಿ. ರಘುಪ್ರಸಾದ್ ಹಾಜರಿದ್ದರು.