ಅ.20ರವರೆಗೆ ಇಕೆವೈಸಿ ಅವಧಿ ವಿಸ್ತರಣೆ
ಬೆಂಗಳೂರು: ರಾಜ್ಯದಲ್ಲಿ ಸರ್ವರ್ ಸಮಸ್ಯೆಯಿಂದ ರೇಷನ್ ಕಾರ್ಡ್‌ಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಲು ಪರದಾಡುತ್ತಿರುವ ಕಾರ್ಡ್‌ದಾರರಿಗೆ ರಿಲೀಫ್ ಸಿಕ್ಕಿದ್ದು, ಇಕೆವೈಸಿ ಅವಧಿಯನ್ನು ಅ.20ರವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ.
ತಾಂತ್ರಿಕದೋಷ, ಸರ್ವರ್ ಸಮಸ್ಯೆ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇಕೆವೈಸಿ ಮಾಡಿಸಲು ಜನರು ಸಂಕಷ್ಟ ಅನುಭವಿಸುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ತಕ್ಷಣ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಕರ್ತವ್ಯ. ಹಾಗಾಗಿ, ಇಕೆವೈಸಿ ಪೂರ್ಣಗೊಳಿಸಲು ಅ.20ವರೆಗೆ ಅಂತಿಮ ಗಡುವು ವಿಸ್ತರಿಸಲು ಆದೇಶಿಸಿದ್ದೇನೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಸರ್ವರ್ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಯಾವುದೇ ಗೊಂದಲವಿಲ್ಲದೆ ಫಲಾನುಭವಿಗಳು ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇಕೆವೈಸಿ ಪೂರ್ಣಗೊಳಿಸಿ ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು. ಅಲ್ಲದೆ, ಸಾರ್ವಜನಿಕರ ಪಡಿತರ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿ, ಪಾರದರ್ಶಕಗೊಳಿಸಲು ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಅ.1ರಿಂದ ರಾಜ್ಯದ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೆ, ಸಂಜೆ 4 ರಿಂದ ರಾತ್ರಿ 8 ಗಂಟೆವರೆಗೆ ತೆರೆಯಬೇಕು. ಕೆಲಸಕ್ಕೆ ತೆರಳುವ ಮುನ್ನ ಅಥವಾ ಸಂಜೆ ಕೆಲಸ ಮುಗಿಸಿ ಮನೆಗೆ ವಾಪಸ್ ಬರುವಾಗ ಅನುಕೂಲಕರ ಸಮಯದಲ್ಲಿ ಪಡಿತರ ಪಡೆದುಕೊಳ್ಳುವಂತೆ ಸಚಿವರು ಸಲಹೆ ನೀಡಿದ್ದಾರೆ.
ಬೋಗಸ್ ಕಾರ್ಡ್ ಪತ್ತೆ ಮತ್ತು ಪಡಿತರ ಸೋರಿಕೆ ತಡೆಗೆ ಆಹಾರ ಇಲಾಖೆಯಿಂದ ರಾಜ್ಯಾದ್ಯಂತ ಇ-ಕೆವೈಸಿ ಪ್ರಕ್ರಿಯೆ ಕೈಗೆತ್ತಿಗೊಂಡಿದೆ. 2.65 ಕೋಟಿ ಸದಸ್ಯರು ಸೆ.30ರೊಳಗೆ ಇಕೆವೈಸಿ ಮಾಡಿಸಬೇಕೆಂದು ಇಲಾಖೆ, ಮೊದಲು ಗಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ಇಕೆವೈಸಿ ಮಾಡಿಸಿಕೊಳ್ಳಲು ಕಾರ್ಡ್‌ದಾರರು, ದೈನಂದಿನ ಕಾರ್ಯಗಳನ್ನು ಬಿಟ್ಟು ನ್ಯಾಯಬೆಲೆ ಅಂಗಡಿಗಳ ಮುಂಭಾಗ ದಿನಗಟ್ಟಲೆ ಕಾಯಬೇಕಿತ್ತು.
ರೇಷನ್ ಕಾರ್ಡ್‌ನಲ್ಲಿರುವ ಪ್ರತಿ ಸದಸ್ಯರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ವರ್ತಕರಿಗೆ ಇಲಾಖೆ ನೀಡಿರುವ ಲಾಗಿನ್ ಐಡಿಯಲ್ಲೇ ಇಕೆವೈಸಿ ಮಾಡಿಸತಕ್ಕದು. ಕಾರ್ಡ್ ಸಂಖ್ಯೆ ನಮೂದಿಸಿದರೆ ಎಷ್ಟು ಸದಸ್ಯರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ. ಬಳಿಕ, ಎಲ್ಲರೂ ಆಧಾರ್ ದೃಢೀಕರಣ ಮಾಡಿಸಬೇಕು. ಫಲಾನುಭವಿ ಮೃತಪಟ್ಟಿರುವ ಮತ್ತು ಬೇರೆ ಸ್ಥಳದಲ್ಲಿ ವಾಸಿಸುತ್ತಿರುವ ಬಗ್ಗೆ ದೃಢೀಕರಣ ವೇಳೆ ಲೆಕ್ಕ ಸಿಗಲಿದೆ. ಇದೇ ವೇಳೆ ಜಾತಿ ಮತ್ತು ಆದಾಯ ದೃಢೀಕರಣ ಪ್ರಮಾಣ ಪತ್ರ ನೀಡಬೇಕು. ಫಲಾನುಭವಿಗಳು ಗ್ಯಾಸ್ ಸಂಪರ್ಕದ ಮಾಹಿತಿ ನೀಡಬೇಕು. ಈ ಕ್ರಮದಿಂದ ಫಲಾನುಭವಿಯ ಉಜ್ವಲ, ಅನಿಲ ಭಾಗ್ಯ ಮತ್ತು ಖಾಸಗಿ ಗ್ಯಾಸ್ ಏಜೆನ್ಸಿಗಳಿಂದ ಅನಿಲ ಸಂಪರ್ಕ ಪಡೆದಿರುವ ಮಾಹಿತಿ ಸಿಗಲಿದೆ.