- ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿಕೆ
- ಕಂದಾಯ ಅಥವಾ ಇತರೆ ಕಚೇರಿಗಳಿಗೆ ಭೇಟಿ ಅಗತ್ಯವಿಲ್ಲ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಇ-&ಖಾತಾ ವಿತರಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಸರಳವಾದ ಆನ್ಲೈನ್ ಪ್ರಕ್ರಿಯೆಯ ಮೂಲಕ ಇ-&ಖಾತಾ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರಿಂದ ನಾಗರಿಕರು ಯಾವುದೇ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ನಗರದ ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ಥಳಿಯ ಖಾಸಗಿ ಉದ್ಯಮಿಗಳ ಮೂಲಕ ಇ-ಖಾತಾ ಸೇವೆಗಳ ಕುರಿತ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇ-&ಖಾತಾ ಅರ್ಜಿಗಳನ್ನು ಆನ್ಲೈನ್ ಮೂಲಕ ತಪ್ಪಿಲ್ಲದಂತೆ ಸಲ್ಲಿಸಲು ಹಾಗೂ ನಾಗರಿಕರಿಗೆ ಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುವಂತೆ ಉದ್ಯಮಿಗಳಿಗೆ ಸೂಚಿಸಿದರು. ನಾಗರಿಕರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರ ಅರ್ಜಿಗಳು ನಿಖರವಾಗಿ ಸಲ್ಲಿಕೆಯಾಗುವಂತೆ ಸಹಕರಿಸುವುದು ನಿಮ್ಮ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಮನವರಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾಹಿತಿ ತಂತಜ್ಞಾನ(ಇ-&ಆಸ್ತಿ)ದ ಉಪ ಆಯುಕ್ತ ಸಿ.ಮದನ್ ಮೋಹನ್, ಕಂದಾಯ ವಿಭಾಗದ ಜಂಟಿ ಆಯುಕ್ತೆ ಲಕ್ಷ್ಮೀದೇವಿ ಇತರರಿದ್ದರು.
ಕಚೇರಿಗಳಿಗೆ ಭೇಟಿ, ಮಧ್ಯವರ್ತಿಗಳ ಅವಶ್ಯಕತೆ ಇಲ್ಲ
ಇ-&ಖಾತಾ ಸಂಬಂಧಿತ ವಿಷಯಗಳಿಗೆ ನಾಗರಿಕರು ಅಥವಾ ಎಲ್ಪಿಇಗಳು ಯಾವುದೇ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಅಥವಾ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುವ ಅಗತ್ಯವಿಲ್ಲ. ಇ-&ಖಾತಾ ವಿತರಣೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯುವುದರಿಂದ ಮಧ್ಯವರ್ತಿಗಳೊಂದಿಗೆ ಸಂಪರ್ಕ ಸಾಧಿಸುವುದನ್ನು ತಪ್ಪಿಸಿಕೊಳ್ಳುವಂತೆ ಸೂಚಿಸಲಾಯಿತು. ಸರಾಸರಿಯಾಗಿ 3 ರಿಂದ 4 ದಿನಗಳೊಳಗೆ ನಾಗರಿಕರ ಇ-ಖಾತಾ ಅರ್ಜಿಗಳನ್ನು ಅನುಮೋದಿಸಲಾಗುತ್ತಿದೆ ಎಂದು ಮೌದ್ಗಿಲ್ ತಿಳಿಸಿದರು.
ಕಾಲಮಿತಿಯಲ್ಲಿ ಪರಿಶೀಲನೆ, ಸ್ವಯಂ ಅನುಮೋದನೆ
ಸುಮಾರು ಶೇ.99 ಇ-&ಖಾತಾ ಅರ್ಜಿಗಳನ್ನು ಪರಿಶೀಲಿಸಿ ಕಾಲಮಿತಿಯೊಳಗಾಗಿ ಅನುಮೋದಿಸಲಾಗುತ್ತಿದೆ. ಅಂತಿಮ ಇ-ಖಾತಾ ಅರ್ಜಿಯನ್ನು 5 ಕೆಲಸದ ದಿನಗಳೊಳಗೆ ಪರಿಶೀಲಿಸದಿದ್ದರೆ, ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಅನುಮೋದನೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ನಾಗರಿಕರ ಅರ್ಜಿಗಳನ್ನು ಯಾರೂ ತಡೆಹಿಡಿಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.