ಬೆಂಗಳೂರು

ಕೋಟ್ಯಂತರ ಮೌಲ್ಯದ ಡ್ರಗ್ಸ್, ಚಿನ್ನಾಭರಣ ಜಪ್ತಿ

ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಕಸ್ಟಮ್ಸ್, 2 ಚಿನ್ನದುಂಗುರ, 37 ಚಿನ್ನದ ಬಳೆ, 2.4 ಕೆ.ಜಿ ಡ್ರಗ್ಸ್ ವಶ

ಬೆಂಗಳೂರು: ವಿದೇಶಗಳಿಂದ ಬೆಂಗಳೂರಿಗೆ ಅಕ್ರಮವಾಗಿ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಹಾಗೂ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರಿಂದ 2.61 ಕೋಟಿ ರೂ. ಮೌಲ್ಯದ 2.4 ಕೆಜಿ ಹೈಡೋ್ರೆೆನಿಕ್ ಗಾಂಜಾ ಮತ್ತು 79 ಲಕ್ಷ ರೂ. ಮೌಲ್ಯದ 401.430 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದ್ದು, ಇಬ್ಬರ ವಿರುದ್ಧವು ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ವಿದೇಶಿ ಪೆಡ್ಲರ್ ಒಬ್ಬ ಥೈಲ್ಯಾಂಡ್‌ನ ಬ್ಯಾಂಕಾಕ್‌ನಿಂದ ಕೋಟ್ಯಂತರ ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತಂದಿದ್ದ. ಆತನನ್ನು ಕಸ್ಟಮ್ಸ್ ಅಧಿಕಾರಿಗಳು ತೀವ್ರ ತಪಾಸಣೆಗೆ ಒಳಪಡಿಸಿದಾಗ, ನಿಷೇಧಿತ ಹೈಡ್ರೋಫೋನಿಕ್ ಗಾಂಜಾವನ್ನು ಅತ್ಯಂತ ಚಾಣಾಕ್ಷತನದಿಂದ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಅಧಿಕಾರಿಗಳು ಅದನ್ನು ವಶಕ್ಕೆ ಪಡೆದು, ಎನ್‌ಡಿಪಿಎಸ್ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.

ಚಿನ್ನದ ಕಾಲುಂಗುರ, ಬಳೆ ಜಪ್ತಿ:

ಮತ್ತೊಂದು ಕಾರ್ಯಾಚರಣೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅಬುದಾಬಿಯಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

50 ಗ್ರಾಂ ತೂಕದ 2 ಚಿನ್ನದ ಕಾಲುಂಗುರ ಮತ್ತು 99.5 ಗ್ರಾಂ ತೂಕದ 37 ಚಿನ್ನದ ಬಳೆಗಳನ್ನು ಜಪ್ತಿ ಮಾಡಲಾಗಿದೆ.

ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ವಿವಿಧ ವಸ್ತುಗಳಲ್ಲಿ ಚಿನ್ನವನ್ನು ಮರೆಮಾಚಿ ತಂದಿದ್ದರು. ಅಧಿಕಾರಿಗಳು ನಡೆಸಿದ ಕೂಲಂಕಷ ತಪಾಸಣೆಯಲ್ಲಿ ಈ ಕಳ್ಳಸಾಗಣೆ ಜಾಲ ಬಯಲಾಗಿದ್ದು, ಅಕ್ರಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.