ವಿಕಾಸಸೌಧದಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲರಿಗೆ ಉಬರ್ ಏಷ್ಯಾ ಪೆಸಿಫಿಕ್‌ನ ಸಾರ್ವಜನಿಕ ನೀತಿ ಮುಖ್ಯಸ್ಥ ಮೈಕ್ ಆರ್ಗಿಲ್ ಮಂಗಳವಾರ ಭೇಟಿಯಾದರು 
ಬೆಂಗಳೂರು

ಮಾರ್ಗದರ್ಶಿ ಕಮ್ ಚಾಲನಾ ತರಬೇತಿಗೆ ಪ್ರಸ್ತಾವನೆ

ಮೃತ್ಯುಂಜಯ ಕಪಗಲ್

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಶರಣಪ್ರಕಾಶ್ ಪಾಟೀಲ ಜತೆಗೆ ಉಬರ್ ಸಂಸ್ಥೆಯ ಆರ್ಗಿಲ್ ಚರ್ಚೆ
  • ಕರ್ನಾಟಕದಲ್ಲಿನ ವಿಪುಲ ಪ್ರವಾಸಿಗಳ ತಾಣಗಳ ಸಮರ್ಪಕ ಬಳಕೆಗೆ ಯೋಜನೆ
  • ತಳಸಮುದಾಯದ ಯುವಕರಿಗೆ ಜೀವನೋಪಾಯದ ಅವಕಾಶ ಸೃಷ್ಟಿಗೆ ಆದ್ಯತೆ
ಬೆಂಗಳೂರು: ಕರ್ನಾಟಕದ ಯುವಕರಿಗೆ ಜೀವನೋಪಾಯದ ಅವಕಾಶಗಳನ್ನು ಒದಗಿಸಲು ಉಬರ್ ಇಂಡಿಯಾ ಮುಂದೆ ಬಂದಿದ್ದು, ಈ ಕುರಿತು ಯೋಜನಾ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. Uber proposal
ರಾಜ್ಯದ ಪ್ರವಾಸಿ ತಾಣಗಳಲ್ಲಿ ಚಾಲನಾ ತರಬೇತಿ ಜತೆಗೆ ಪ್ರಮಾಣೀಕೃತ ಪ್ರವಾಸಿ ಮಾರ್ಗದರ್ಶಿ ಕೌಶಲ ತರಬೇತಿ ನೀಡಿ, ಜೀವನೋಪಾಯಕ್ಕೆ ಅವಕಾಶ ಕಲ್ಪಿಸುವುದು ಯೋಜನೆ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲರಿಗೆ ಸಂಸ್ಥೆಯು ಪ್ರಸ್ತಾವನೆ ಸಲ್ಲಿಸಿ, ಯೋಜನೆ ಬಗ್ಗೆ ವಿವರಿಸಿದೆ.
ವಿಕಾಸಸೌಧದಲ್ಲಿ ಸಚಿವರನ್ನು ಉಬರ್‌ನ ಏಷ್ಯಾ ಪೆಸಿಫಿಕ್‌ನ ಸಾರ್ವಜನಿಕ ನೀತಿ ಮುಖ್ಯಸ್ಥ ಮೈಕ್ ಆರ್ಗಿಲ್ ಮಂಗಳವಾರ ಭೇಟಿಯಾಗಿ ಯೋಜನಾ ಪ್ರಸ್ತಾವನೆ ಬಗ್ಗೆ ಚರ್ಚಿಸಿದರು.
ವಿಶೇಷವಾಗಿ ತಳಸಮುದಾಯದ ಯುವಕರ ಸಬಲೀಕರಣಕ್ಕೆ ಯೋಜನೆಯಡಿ ಆದ್ಯತೆ. ವಿಪುಲ ಪ್ರವಾಸಿ ತಾಣಗಳು ಪರಿಣಾಮಕಾರಿ ಬಳಕೆ ಸಾಧ್ಯವಿದೆ ಎಂದರು.

ನಿಗಮದಿಂದ ತರಬೇತಿ

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆಎಸ್‌ಡಿಸಿ) ಪ್ರಸ್ತುತ ಅಭ್ಯರ್ಥಿಗಳಿಗೆ ಲಘು ಮತ್ತು ಭಾರೀ ವಾಹನ ಚಾಲನೆ ತರಬೇತಿ ನೀಡುತ್ತದೆ. ಈಗಾಗಲೇ 100 ಕ್ಕೂ ಹೆಚ್ಚು ತರಬೇತಿ ಪಡೆದ ಚಾಲಕರು ಭಾರತ ಮತ್ತು ವಿದೇಶಗಳಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.
ಪೂರಕವಾಗಿ ಗಳಿಕೆ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಚಾಲಕ-ಕಮ್-ಪ್ರವಾಸಿ ಮಾರ್ಗದರ್ಶಿ ಮಾದರಿಯನ್ನು ಉಬರ್ ಸಂಸ್ಥೆ ಪ್ರಸ್ತಾಪಿಸಿದೆ.
ಕರ್ನಾಟಕದಲ್ಲಿ ಪ್ರವಾಸೋದ್ಯಮ ತಾಣಗಳು ವಿಪುಲವಾಗಿದ್ದು, ತರಬೇತಿ ಪಡೆದವರು ಚಾಲಕ ಕಮ್ ಮಾರ್ಗದರ್ಶಿಯಾಗಿ ಕೆಲಸ ಮಾಡಲು ಸಾಧ್ಯವಿದೆ ಎಂದು ಆರ್ಗಿಲ್ ಹೇಳಿದರು.
ನಂತರ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಮಾತನಾಡಿ, ಚಾಲಕ ತರಬೇತಿಯಲ್ಲಿ ವಿಶೇಷ ಕೌಶಲ್ಯಗಳನ್ನು ಸಂಯೋಜಿಸುವುದು ಪ್ರಯೋಜನಕಾರಿ. ಇದೊಂದು ಉತ್ತಮ ಯೋಜನೆ ಎಂದು ಸ್ವಾಗತಿಸಿ, ಮಂಡಳಿಯ ಮುಂದಿನ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಲಾಗುವುದು ಎಂದು ಭರವಸೆ ನೀಡಿದರು.