- ಬಿಡಿಎಯಿಂದ ನಿರಂತರ ನಿಗಾ ವ್ಯವಸ್ಥೆಗೆ ಕ್ರಮ
- ಎನ್‌ಜಿಒಗಳಿಂದ ಗಿಡಗಳ ಆರೈಕೆಗೆ ವಿಶೇಷ ಪ್ರಯತ್ನ
- 3 ತಿಂಗಳ ಬಳಿಕ ಸಮಗ್ರ ಪರಿಶೋಧನೆಗೆ ನಿರ್ಧಾರ
ಬೆಂಗಳೂರು: ಇತ್ತೀಚಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೆಟ್ಟಿರುವ 15 ಲಕ್ಷ ಗಿಡಗಳನ್ನು ಉಳಿಸಿ ಬೆಳೆಸುವ ಸಂಬಂಧ ಸಸಿಗಳ ಬೆಳವಣಿಗೆಗೆ ಶಾಶ್ವತ ನೀರುಣಿಸುವ ವ್ಯವಸ್ಥೆಯನ್ನು ಕೈಗೊಂಡಿದೆ. ಇದಕ್ಕಾಗಿ ವಿವಿಧ ಹಂತಗಳಲ್ಲಿ ಕ್ರಮ ಕೈಗೊಂಡಿದ್ದು, ಹೊಸದಾಗಿ ಬೋರ್‌ವೆಲ್ ಕೊರೆಯಿಸುವ ಜತೆಗೆ ಡ್ರಿಪ್ ಸೌಲಭ್ಯವನ್ನು ಕಲ್ಪಿಸಿದೆ.
ಕಳೆದ ಜೂ.27ರ ನಾಡಪ್ರಭು ಕೆಂಪೇಗೌಡರ ಜಯಂತಿಯಂದು ಬಿಡಿಎ 15 ಲಕ್ಷ ಸಸಿಗಳನ್ನು ನೆಟ್ಟು ಗಿನ್ನೆಸ್ ದಾಖಲೆ ನಿರ್ಮಿಸಿತ್ತು. ಬನಶಂಕರಿ 6ನೇ ಹಂತ, ಶಿವರಾಮ ಕಾರಂತ ಹಾಗೂ ಕೆಂಪೇಗೌಡ ಲೇಔಟ್‌ಗಳಲ್ಲಿನ 279 ಸ್ಥಳಗಳಲ್ಲಿ 198.31 ಎಕರೆ ವಿಸ್ತೀರ್ಣದಲ್ಲಿ ಗಿಡಗಳನ್ನು ನೆಡಲಾಗಿತ್ತು. ಇವುಗಳಲ್ಲಿ ಕೆಲ ಸಾವಿರ ಸಸಿಗಳಿಗೆ ನೀರುಣಿಸಲು ಸಾಧ್ಯವಾಗಿರಲಿಲ್ಲ. ಇದನ್ನು ಗಮನಿಸಿರುವ ಪ್ರಾಧಿಕಾರವು ಮೇಲ್ವಿಚಾರಣೆ ವಹಿಸಿರುವ ಅಧಿಕಾರಿಗಳ ಮೂಲಕ ಅಂತಹ ಗಿಡಗಳಿಗೆ ಕಾಲಕಾಲಕ್ಕೆ ನೀರುಣಿಸಿ ಬೆಳವಣಿಗೆಗೆ ಅಗತ್ಯ ಕ್ರಮ ಕೈಗೊಳ್ಳುವ ಹೊಣೆಯನ್ನು ವಹಿಸಿದೆ.
ಕೆಂಪೇಗೌಡ ಬಡಾವಣೆಯ ಕೆಲ ಪ್ರದೇಶಗಳಲ್ಲಿ ನೆಟ್ಟಿರುವ ಗಿಡಗಳಿಗೆ ನೀರು ಹಾಯಿಸಲು ಹೊಸದಾಗಿ ಡ್ರಿಪ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಕೊಳವೆಬಾವಿಯಿಂದ ನೀರಿನ ಸಂಪರ್ಕ ಪಡೆಯಲಾಗಿದೆ. ತೀವ್ರ ನೀರಿನ ಸಮಸ್ಯೆ ಎದುರಾಗುವ ಪ್ರದೇಶಗಳಿಗೆ ಹೊಸದಾಗಿ ಬೋರ್‌ವೆಲ್ ಕೊರೆಯಿಸಿ ನೀರು ಹಾಯಿಸಲು ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಕೆಲ ಎನ್‌ಜಿಒಗಳಿಗೆ ಗಿಡಗಳ ಆರೈಕೆಯ ಜವಾಬ್ದಾರಿಯನ್ನು ವಹಿಸಲು ಬಿಡಿಎ ಆಯುಕ್ತರು ಸೂಚನೆ ನೀಡಿದ್ದಾರೆ.
ಬಿಡಿಎ ಕೈಗೊಂಡಿರುವ ಉಪಕ್ರಮಗಳ ಹೊರತಾಗಿಯೂ ಕೆಲವೆಡೆ ಗಿಡಗಳು ಒಣಗುತ್ತಿವೆ. ಮಳೆ ಬಾರದ ಕಾರಣ ಸಸಿಗಳಿಗೆ ನೀರುಣಿಸುವುದು ಕಷ್ಟವಾಗಿದೆ. ಆದರೆ, ಬಿಡಿಎ ಈ ಆರೋಪವನ್ನು ತಳ್ಳಿಹಾಕಿದ್ದು, ನೆಟ್ಟಿರುವ ಸಸಿಗಳು ಆರಂಭದಲ್ಲಿ ಒಣಗಿದರೂ, ನಂತರದಲ್ಲಿ ಚೇತರಿಸಿಕೊಳ್ಳುತ್ತವೆ. ನಿರಂತರವಾಗಿ ನಿಗಾ ವಹಿಸುವ ಮೂಲಕ ಹೆಚ್ಚಿನ ಗಿಡಗಳನ್ನು ಉಳಿಸಿಕೊಳ್ಳಲಾಗುವುದು. ಒಂದು ವೇಳೆ ಸಸಿಗಳು ಪೂರ್ಣವಾಗಿ ಒಣಗಿಹೋದಲ್ಲಿ ಮತ್ತೆ ಅದೇ ಸ್ಥಳದಲ್ಲಿ ಹೊಸದಾಗಿ ಗಿಡಗಳನ್ನು ನೆಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಗಿಡಗಳಿಗೆ ನೀರುಣಿಸಲು ಕೈಗೊಂಡಿರುವ ಕ್ರಮಗಳು:
* ಹೊಸದಾಗಿ 40 ಬೋರ್‌ವೆಲ್ ಕೊರೆಯಿಸಲಾಗುತ್ತಿದೆ
* 15 ದಿನಗಳಿಗೊಮ್ಮೆ ನೀರು ಹಾಯಿಸುವಿಕೆಗೆ ಕ್ರಮ
* ಜಲಮಂಡಳಿಯಿಂದ ಶುದ್ಧೀಕರಿಸಿದ ನೀರು ಬಳಸಲು ಚಿಂತನೆ
* ಒಣಗಿರುವ ಸಸಿಗಳ ಬದಲಿ ಹೊಸದಾಗಿ ಗಿಡ ನೆಡುವಿಕೆ
* ಶಾಲಾ-ಕಾಲೇಜು, ಸಾರ್ವಜನಿಕರಿಂದ ಗಿಡಗಳ ದತ್ತು
* ಎತ್ತರದ ಸಸಿಗಳಿಗೆ ಆಧಾರ ಕಂಬಗಳ ಅಳವಡಿಸುವುದು
* ಗಿಡ ನೆಟ್ಟ ಪ್ರದೇಶವನ್ನು ಪೀಪಲ್ಸ್ ಪ್ಲಾನೆಟ್ ವೇದಿಕೆಯಲ್ಲಿ ಜಿಯೋ ಫೆನ್ಸಿಂಗ್ ವ್ಯವಸ್ಥೆ.