- ಬೆಂಗಳೂರು ಕೃಷಿ ವಿವಿಯ ಪ್ರಾಧ್ಯಾಪಕನಿಗೆ ಸಂದ ರಾಷ್ಟ್ರೀಯ ಗರಿ
ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಡೀನ್ (ಕೃಷಿ) ಡಾ. ಎನ್.ಬಿ. ಪ್ರಕಾಶ್ ಅವರಿಗೆ ನವದೆಹಲಿಯ ರಾಷ್ಟ್ರಿಯ ಕೃಷಿ ವಿಜ್ಞಾನ ಅಕಾಡೆಮಿಯ (ನಾಸ್) ಪ್ರತಿಷ್ಠಿತ ಫೆಲೋಶಿಫ್ ನೀಡಿ ಗೌರವಿಸಲಾಗಿದೆ.
ನವದೆಹಲಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ಐಸಿಎಆರ್) ಮಹಾ ನಿದೇರ್ಶಕ ಡಾ. ಮಂಗೀಲಾಲ್ ಜಾಟ್ ಅವರು ಡಾ. ಪ್ರಕಾಶ್‌ಗೆ ಫೆಲೋ ಪ್ರದಾನ ಮಾಡಿದರು. ಫೆಲೋ ಗೌರವ ಈ ವರ್ಷದ ಜ.1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.
21 ವರ್ಷದ ಹಿಂದೆ ವಿವಿಯ ಡಾ. ಶೈಲಜಾ ಹಿತ್ತಲಮನಿ ಅವರು ಫೆಲೋ ಪಡೆದಿದ್ದರು. ಆ ಬಳಿಕ ಡಾ. ಪ್ರಕಾಶ್ ಅವರು ನಾಸ್‌ನಿಂದ ಫೆಲೋ ಪಡೆಯುತ್ತಿರುವ ಬೆಂಗಳೂರು ಕೃಷಿ ವಿವಿಯ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ. ಪ್ರಕಾಶ್ ಅವರು 31 ವರ್ಷಗಳ ಸುದೀರ್ಘ ಅವಧಿಯಲ್ಲಿ ಕೃಷಿ ಸಂಶೋಧನೆ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಮಣ್ಣಿನ ಫಲವತ್ತತೆಯ ನಿರ್ವಹಣೆ ಹಾಗೂ ಸುಸ್ಥಿರ ಕೃಷಿ ಕ್ಷೇತ್ರಗಳಲ್ಲಿನ ಅನನ್ಯ ಸೇವೆಗೆ ಈ ಮನ್ನಣೆ ನೀಡಲಾಗಿದೆ. ಬೆಳೆಗಳಲ್ಲಿ ಸಿಲಿಕಾನ್ ಅಂಶದ ಪೋಷಣೆ, ಪೋಷಕಾಂಶ ಮರುಬಳಕೆ, ಕೃಗಾರಿಕೆ ಹಾಗೂ ಕೃಷಿ ತ್ಯಾಜ್ಯಗಳ ಮರುಬಳಕೆ ಮತ್ತು ಜಲಾನಯನ ನಿರ್ವಹಣೆಯ ವಿಷಯಗಳನ್ನಾಧರಿಸಿ ಅವರ ಸಂಶೋಧನಾ ಕಾರ್ಯವು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು, ಹವಾಮಾನ ಸ್ಥಿತಿಸ್ಥಾಪಕ ಕೃಷಿ ಪದ್ಧತಿಯನ್ನು ಉತ್ತೇಜಿಸಲು ಕೊಡುಗೆ ನೀಡಿದೆ.