- ಡಾ.ಸಿ.ಎನ್.ಆರ್. ರಾವ್ ಅವರಿಗೆ ‘ಶಿವಶ್ರೀ ಪ್ರಶಸ್ತಿ’ ಪ್ರದಾನ
- ಜಸ್ಟೀಸ್ ಶಿವರಾಜ್ ವಿ.ಪಾಟೀಲ್ ಪ್ರತಿಷ್ಠಾನದಿಂದ ಗೌರವ
- ಸುಪ್ರೀಂಕೋರ್ಟ್‌ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಭಾಗಿ
ಬೆಂಗಳೂರು: ಸಂಶೋಧನೆಗಳ ಮೂಲಕ ವಿಜ್ಞಾನಿಗಳು ತಮ್ಮ ಜ್ಞಾನವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಾರೆ. ಆ ಜ್ಞಾನದ ಆಧಾರದಲ್ಲಿ ದೇಶದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಲಿವೆ ಎಂದು ಸುಪ್ರೀಂಕೋರ್ಟ್‌ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಹೇಳಿದ್ದಾರೆ.
ಜಸ್ಟೀಸ್ ಶಿವರಾಜ್ ವಿ.ಪಾಟೀಲ್ ಪ್ರತಿಷ್ಠಾನ, ಅರಮನೆ ರಸ್ತೆಯ ಕಿಂಗ್ಸ್‌ಕೋರ್ಟ್ ಮಿನಿ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಹಿರಿಯ ವಿಜ್ಞಾನಿ ಡಾ.ಸಿ.ಎನ್.ಆರ್. ರಾವ್ ಅವರಿಗೆ ‘ಶಿವಶ್ರೀ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜ,ಮಾನವ ಕುಲಕ್ಕೆ ಒಳಿತು ಮಾಡುವವರು ವಿಶೇಷ ವ್ಯಕ್ತಿ ಎನಿಸಿಕೊಳ್ಳುತ್ತಾರೆ. ಅಪರೂಪದ ಕೆಲಸ ಮಾಡಿದವರಲ್ಲಿ ‘ಭಾರತರತ್ನ’ ಡಾ.ಸಿ.ಎನ್.ಆರ್.ರಾವ್ ಮುಂಚೂಣಿಯಲ್ಲಿದ್ದಾರೆ. ಅಮೆರಿಕದ ಪರ್ಡ್ಯೂ ವಿವಿಯಿಂದ ಪಿಎಚ್.ಡಿ. ಪಡೆಯುವುದು ಕಷ್ಟಕರ. ಆದರೆ ಡಾ.ರಾವ್ ಪಿಎಚ್‌ಡಿ ಪಡೆದಿದ್ದಾರೆ. 24ನೇ ವಯಸ್ಸಿನಿಂದ 92ನೇ ವರ್ಷದವರೆಗೂ ಅವರು ಸಂಶೋಧನೆ, ಅಭಿವೃದ್ಧಿ ಮತ್ತು ಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಂಡು ಹೊಸ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಮಾತನಾಡಿ, ಪಡೆದ ಜ್ಞಾನವನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ಅದು ದೀವಿಗೆಯಾಗುತ್ತದೆ. ‘ಕೊಟ್ಟು ಹೋಗಿ ಇಲ್ಲವೆ ಬಿಟ್ಟು ಹೋಗಿ. ಸಂಗಡ ತೆಗೆದುಕೊಂಡು ಹೋಗಲು ಆಗುವುದಿಲ್ಲ’ ಎನ್ನುವ ವಾಣಿಗಳನ್ನು ಜ್ಞಾನಿಗಳು ಪಾಲಿಸಬೇಕು. ಡಾ. ರಾವ್ ತಮ್ಮ ಜ್ಞಾನಧಾರೆಯನ್ನು ಮುಂದಿನ ತಲೆಮಾರಿಗೆ ಹರಿಸುತ್ತಿದ್ದಾರೆ. ಶಿವನ ಹೆಸರಿನಲ್ಲಿ ಶಿವಶ್ರೀ ಪ್ರಶಸ್ತಿ ನೀಡಲಾಗುತ್ತದೆ. ‘ಭಾರತ ರತ್ನ’ ಗೌರವಕ್ಕೆ ಪಾತ್ರರಾದವರಿಗೆ ಈ ಪ್ರಶಸ್ತಿ ಏನೂ ಅಲ್ಲ. ಆದರೆ, ಅವರು ನಮ್ಮ ಪ್ರತಿಷ್ಠಾನದ ಪ್ರಶಸ್ತಿ ಸ್ವೀಕರಿಸುವ ಮೂಲಕ ಈ ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.
ಹಿರಿಯ ವಕೀಲ ಉದಯ್ ಹೊಳ್ಳ, ಡಾ. ರಾವ್ ಪತ್ನಿ ಇಂದುಮತಿ ರಾವ್ ಇತರರಿದ್ದರು.