- ಜಿಬಿಎ ವ್ಯಾಪ್ತಿಯಲ್ಲಿ ಶೇ. 76.32 ಮ್ಯಾಪಿಂಗ್ ಕಾರ್ಯ ಪೂರ್ಣ
- ನಗರದಾದ್ಯಂತ 2,855 ಮತದಾರರ ಸಹಾಯ ಕೇಂದ್ರಗಳ ಸ್ಥಾಪನೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಮಂಗಳವಾರದಿಂದ (ಜೂ.30) ಆರಂಭವಾಗಲಿದ್ದು, 8972 ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸಲಿದ್ದಾರೆ. ಈ ಪ್ರಕ್ರಿಯೆಗೆ ನಾಗರಿಕರು ಸಹಕರಿಸುವಂತೆ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಮನವಿ ಮಾಡಿದರು.
ಜಿಬಿಎ ಕೇಂದ್ರ ಕಚೇರಿಯಲ್ಲಿ ಎಸ್‌ಐಆರ್ ಕುರಿತು ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ-ಮನೆ ಭೇಟಿ ವೇಳೆ ನಿವಾಸಿಗಳು ಲಭ್ಯವಿಲ್ಲದಿದ್ದರೆ ಬಿಎಲ್‌ಒಗಳು ಇನ್ನೆರಡು ಬಾರಿ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ. ಯಾವುದೇ ಮನೆ ಸಮೀಕ್ಷೆಯಿಂದ ಹೊರಗುಳಿಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎಸ್‌ಐಆರ್ ಹೊರತಾಗಿಯೂ ಅರ್ಹ ಮತದಾರರು ಮತಪಟ್ಟಿಗೆ ಸೇರಲು ಅವಕಾಶವಿದೆ ಎಂದು ತಿಳಿಸಿದರು.
ಸಂಗ್ರಹಿಸಿದ ನಮೂನೆ ಡಿಜಿಲೀಕರಣ:
ಬಿಎಲ್‌ಒಗಳು ಬೆಳಿಗ್ಗೆ ಮನೆಗಳಿಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲಿದ್ದು, ಸಂಜೆ ವೇಳೆಗೆ ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮತದಾರರು ಭರ್ತಿ ಮಾಡಿದ ನಮೂನೆಗಳೊಂದಿಗೆ ಭಾವಚಿತ್ರ ಬದಲಿಸುವ ಅಗತ್ಯವಿದ್ದಲ್ಲಿ ತಮ್ಮ ಇತ್ತೀಚಿನ ಛಾಯಾಚಿತ್ರವನ್ನು ಸಲ್ಲಿಸಬಹುದು. ಅಲ್ಲದೆ, ಗಣತಿ ನಮೂನೆಗಳನ್ನು ವೋಟರ್ ಫೇಷಿಲಿಟೇಷನ್ ಸೆಂಟರ್‌ಗಳಲ್ಲಿ (ವಿಎಫ್ಸಿ) ಹಾಗೂ ರಜಾದಿನಗಳಲ್ಲಿ ಮತಗಟ್ಟೆಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಜಿಬಿಎ ವಿಶೇಷ ಆಯುಕ್ತೆ ಸುಷಮಾ ಗೋಡಬೋಲೆ, ಪಾಲಿಕೆ ಆಯುಕ್ತರಾದ ಪಿ.ಸುನೀಲ್ ಕುಮಾರ್, ಜಿ. ಜಗದೀಶ್, ಕೆ.ಎನ್. ರಮೇಶ್, ಡಾ. ಕೆ.ವಿ. ರಾಜೆಂದ್ರ, ಬೆಂಗಳೂರು ನಗರ ಜಿಲ್ಲಾಧಿಕಾರಿ ಪಿ.ಎಸ್. ಕಾಂತರಾಜು ಹಾಜರಿದ್ದರು.
ಶೇ.76 ಮ್ಯಾಪಿಂಗ್ ಕಾರ್ಯ ಪೂರ್ಣ:
ಎಸ್‌ಎಆರ್ ಪೂರ್ವಭಾವಿ ಚಟುವಟಿಕೆಯಾಗಿ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡುವ ಕಾರ್ಯದಲ್ಲಿ ಈವರೆಗೆ ಶೇ. 76.32 ಪ್ರಗತಿ ಸಾಧಿಸಲಾಗಿದೆ. ಒಟ್ಟು 1.03 ಕೋಟಿ ಮತದಾರರಲ್ಲಿ 79.27 ಲಕ್ಷ ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಇನ್ನೂ 24.60 ಲಕ್ಷ ಬಾಕಿಯಿದೆ. ಉಳಿದ ಮತದಾರರ ಮ್ಯಾಪಿಂಗ್ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು.
2,855 ವಿಎಫ್ಸಿಗಳ ಸ್ಥಾಪನೆ:
ಗಣತಿ ನಮೂನೆ ಭರ್ತಿ ಮಾಡುವ ವೇಳೆ ಅಥವಾ ಮತದಾರರ ನೋಂದಣಿಗೆ ಸಂಬಂಧಿಸಿದ ಯಾವುದೇ ಗೊಂದಲಗಳಿದ್ದಲ್ಲಿ ಮಾರ್ಗದರ್ಶನಕ್ಕಾಗಿ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ 2,855 ಮತದಾರರ ಸಹಾಯ ಕೇಂದ್ರಗಳನ್ನು (ವಿಎಫ್ಸಿ) ಸ್ಥಾಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಇದರ ಜತೆಗೆ ವಾರ್ಡ್ ಕಚೇರಿಗಳಲ್ಲಿ ಬಿಎಲ್‌ಒಗಳಿಗೆ ನೆರವಾಗುವ ಉದ್ದೇಶದಿಂದ 902 ಫೆಸಿಲಿಟೇಷನ್ ಸೆಂಟರ್ ಸ್ಥಾಪಿಸಲಾಗಿದೆ.
ಮಾನವ ಸಂಪನ್ಮೂಲ ಬಳಕೆ ವಿವರ:
ಸಹಾಯಕ ಮತದಾರರ ನೋಂದಣಾಧಿಕಾರಿ -75
ಬಿಎಲ್‌ಒ ಮೇಲ್ವಿಚಾರಕರು -905
ಬಿಎಲ್‌ಒ (ಮನೆ ಮನೆ ಸಮೀಕ್ಷೆಗೆ) -8,972
ಬಿಎಲ್‌ಎ (ರಾಜಕೀಯ ಪಕ್ಷದ ಪ್ರತಿನಿಧಿ) -16,505