- ನಮೂನೆ ವಾಪಸ್ ಮಾಡಿದರಷ್ಟೇ ಕರಡು ಪಟ್ಟಿಯಲ್ಲಿ ಹೆಸರು
- ದಕ್ಷಿಣ ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್.ರಮೇಶ್ ಮಾಹಿತಿ
ಬೆಂಗಳೂರು: ಮಹಾನಗರದ ದಕ್ಷಿಣ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಈ ತಿಂಗಳ 30ರಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಪಾಲಿಕೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹಿಸಲಿದ್ದಾರೆ.
ಇದಕ್ಕಾಗಿ ಜೂ.20ರಿಂದ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ತರಬೇತಿ ನೀಡಲಾಗುತ್ತಿದೆ. ಆ ಬಳಿಕ ಬಿಎಲ್‌ಒಗಳು ಎಲ್ಲ ಮತದಾರರಿಗೂ ಹೆಸರು ದೃಢಪಡಿಸಿಕೊಳ್ಳುವ ಸಂಬಂಧ ನಮೂನೆ ವಿತರಿಸಲಿದ್ದಾರೆ. ಅವುಗಳನ್ನು ಭರ್ತಿ ಮಾಡಿ ನಾಗರಿಕರು ವಾಪಸ್ ಮಾಡಬೇಕಿದೆ. ಭರ್ತಿ ಮಾಡಿದ ನಮೂನೆ ವಾಪಸ್ ಮಾಡಿದರಷ್ಟೇ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಉಲ್ಲೇಖಿಸಲಾಗುತ್ತದೆ ಎಂದು ದಕ್ಷಿಣ ಜಿಲ್ಲಾ ಚುನಾವಣಾಧಿಕಾರಿ ಹಾಗೂ ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಎಸ್‌ಐಆರ್ ವೇಳೆ ಅರ್ಹ ಮತದಾರರ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ ಅನರ್ಹರು ಮತಪಟ್ಟಿಗೆ ಸೇರದಂತೆಯೂ ನಿಗಾ ವಹಿಸಲಾಗುವುದು. ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಅಂತಹವರು ಅಗತ್ಯ ದಾಖಲೆಗಳೊಂದಿಗೆ ನಮೂನೆ - 6 ಅನ್ನು ನೀಡಿದರೆ ಪರಾಮರ್ಶೆ ಬಳಿಕ ಮತಪಟ್ಟಿಗೆ ಹೆಸರು ಸೇರಿಸಲಾಗುವುದು. ಆನ್‌ಲೈನ್ ಮೂಲಕವೂ ಹೆಸರು ದೃಢೀಕರಣ ಹಾಗೂ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗುವದು ಎಂದು ಅವರು ಸ್ಪಷ್ಟಪಡಿಸಿದರು.
21.43 ಲಕ್ಷ ಮತದಾರರು:
ದಕ್ಷಿಣ ಜಿಲ್ಲಾ ಚುನಾವಣಾಧಿಕಾರಿ ಕಚೇರಿ ವ್ಯಪ್ತಿಗೆ ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳು ಸೇರಲಿವೆ. ಇವುಗಳಲ್ಲಿ ಸದ್ಯ 21.43 ಲಕ್ಷ ಮತದಾರರಿದ್ದು, ಈವರೆಗೆ ಶೇ.60 ಹೆಸರುಗಳನ್ನು ಹೊಂದಾಣಿಕೆ ಪ್ರಕ್ರಿಯೆಯಲ್ಲಿ (ಮ್ಯಾಪಿಂಗ್) ಗುರುತಿಸಲಾಗಿದೆ. ಉಳಿದವರ ಹೆಸರನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಪಕ್ಷಗಳ ಸಕ್ರಿಯ ಭಾಗಿತ್ವಕ್ಕೆ ಅವಕಾಶ:
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಕಾಯ್ದುಕೊಳ್ಳಲು ರಾಜಕೀಯ ಪಕ್ಷಗಳು ತಮ್ಮ ಬೂತ್ ಮಟ್ಟದ ಏಜೆಂಟ್ (ಬಿಎಲ್‌ಎ) ನೇಮಕ ಮಾಡುವ ಮೂಲಕ ಅಧಿಕಾರಿಗಳೊಂದಿಗೆ ಸಮೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಿ ತ್ವರಿತವಾಗಿ ಮಾಹಿತಿ ಪಡೆಯಲು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಎನ್‌ಜಿಒಗಳ ಸಹಕಾರ ಪಡೆಯಲಾಗುವುದು ಎಂದು ಅವರು ವಿವರಿಸಿದರು.
ಪಾಲಿಕೆ ಚುನಾವಣೆಗೆ 2025ರ ಪಟ್ಟಿ:
ಮುಂಬರುವ ಪಂಚ ಪಾಲಿಕೆಗಳ ಎಲೆಕ್ಷನ್‌ಗೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಚುನಾವಣಾ ಸಂಬಂಧ 2025ರಲ್ಲಿ ಪರಿಷ್ಕರಿಸಿ ಇತ್ತೀಚಿಗೆ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿರುವ ಮತದಾರರ ಪಟ್ಟಿಯನ್ನೇ ಬಳಸಲಿದೆ. ಹಾಗಾಗಿ ಎಸ್‌ಐಆರ್‌ನಲ್ಲಿ ನಡೆಸುವ ಪರಿಷ್ಕರಣೆಯ ಮತಪಟ್ಟಿ ಬಳಕೆಯಾಗದು ಎಂದು ಕೆ.ಎನ್.ರಮೇಶ್ ತಿಳಿಸಿದರು.