ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಆಯೋಜಿಸಿದ್ದ ಗೃಹಲಕ್ಷ್ಮಿಯರ ಸಮಾವೇಶದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಪಾಲ್ಗೊಂಡಿದ್ದರು. ಈ ವೇಳೆ ಗೃಹಲಕ್ಷ್ಮಿ ಹಣದಲ್ಲಿ ಕಲಬುರಗಿಯ ಸುವರ್ಣಾ ಅವರು ತಯಾರಿಸಿದ ಮುತ್ತಿನ ದೀಪ ವನ್ನು ಪ್ರದರ್ಶಿಸಿದರು.  
ಬೆಂಗಳೂರು

ಜಿಲ್ಲಾವಾರು ಗೃಹಲಕ್ಷ್ಮಿಯರ ಸಮಾವೇಶ

ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಪ್ರಸ್ತುತ 86,000 ಕೋಟಿ ರೂ. ವೆಚ್ಚ ಮಾಡುತ್ತಿದೆ. ಇದು 1 ಲಕ್ಷ ಕೋಟಿ ಮೊತ್ತಕ್ಕೆ ತಲುಪಿದಾಗ ಜಿಲ್ಲಾವಾರು ಸಮಾವೇಶಗಳಿಗೆ ಚಾಲನೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ತಿಳಿಸಿದರು.

ಬೆಂಗಳೂರು:ಗೃಹಲಕ್ಷ್ಮಿಯರ ಜತೆ ಮುಕ್ತವಾಗಿ ಸಂವಾದಿಸಲು ಹಾಗೂ ಖಾತೆಗೆ ಸರ್ಕಾರ ಹಾಕುತ್ತಿರುವ 2000 ರೂ.ವಿನಿಯೋಗದ ಬಗ್ಗೆ ತಿಳಿಯಲು ಜಿಲ್ಲಾವಾರು ಸಮಾವೇಶ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ 33 ಜಿಲ್ಲೆಗಳ ಗೃಹಲಕ್ಷ್ಮಿಲಾನುಭವಿಗಳ ಜತೆ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಅವರ ಅಭಿಪ್ರಾಯ ಆಲಿಸಿದ ಬಳಿಕ ಮಾತನಾಡಿದರು.

ಗೃಹಲಕ್ಷ್ಮಿಗೆ ಸರ್ಕಾರ ಪ್ರಸ್ತುತ 86,000 ಕೋಟಿ ರೂ. ವೆಚ್ಚ ಮಾಡುತ್ತಿದೆ. ಇದು 1 ಲಕ್ಷ ಕೋಟಿ ಮೊತ್ತಕ್ಕೆ ತಲುಪಿದಾಗ ಜಿಲ್ಲಾವಾರು ಸಮಾವೇಶಗಳಿಗೆ ಚಾಲನೆ ನೀಡುತ್ತೇನೆ. ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿ ಮಡಿಲಿಗೆ ನಾನು, ಮಾಜಿ ಸಿಎಂ ಸಿದ್ದರಾಮಯ್ಯ ಅವರು 2000 ರೂ.ಗಳನ್ನು ಇಟ್ಟು ಗೃಹಲಕ್ಷ್ಮಿ ಯೋಜನೆ ಜಾರಿಗೆ ಮಾಡುವ ಶಕ್ತಿ ಕೊಡಮ್ಮ ಎಂದು ಪ್ರಾರ್ಥಿಸಿದ್ದೆವು. ಜನ ನಮಗೆ 136 ಸೀಟು ಕೊಟ್ಟು ಆಶೀರ್ವದಿಸಿದರು.

1.24 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ತಲುಪುತ್ತಿದೆ. ಮಹಿಳೆಯರು ಸರ್ಕಾರಕ್ಕೆ ಆಶೀರ್ವಾದ ಮಾಡಬೇಕು. ನೀವು ಉಪಕಾರ ಸ್ಮರಣೆ ಮರೆಯುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ಸಿಎಂ ತಿಳಿಸಿದರು.

ಹಾಡು ಕೇಳಿ ಯೋಜನೆ ಜಾರಿ

ತಾಯಿ ಸತ್ತ ಮೇಲೆ ತವರಿಗೆ ಎಂದೂ ಹೋಗಬಾರದವ್ವ, ನಾಯಿಗಿಂತ ಕಡೆಯಾಗಿ ಹೋಯಿತು ನನ ಬಾಳು ಕೇಳವ್ವ ಎಂಬ ಜನಪದ ಗೀತೆಯೇ ಗೃಹಲಕ್ಷ್ಮಿಯೋಜನೆಗೆ ಪ್ರೇರಣೆ ನೀಡಿತು ಎಂದು ಸಿಎಂ ತಿಳಿಸಿದರು.

ಈ ಹಾಡು ಕೇಳಿ ನನ್ನ ಮನ ಕಲಕಿತು. ಅವರ ಕಷ್ಟ ಕಣ್ಣಿನ ಮುಂದೆ ಹಾದು ಹೋಯಿತು. ಆ ಕ್ಷಣವೇ ಈ ಯೋಜನೆಗೆ ನಿರ್ಧರಿಸಿದೆ ಎಂದರು. ತಮ್ಮ ಸಂಬಂಧಿ ಒಬ್ಬರು ಹಾಡಿದ ಈ ಹಾಡನ್ನು ಮೊಬೈಲ್‌ನಲ್ಲಿ ಎಲ್ಲರಿಗೂ ಕೇಳಿಸಿದರು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇಲ್ಲ. ನಾವು ಪಕ್ಷಾತೀತವಾಗಿ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ್ದೇವೆ. ಈ ಬಗ್ಗೆ ಸ್ಥಳೀಯ ಮಹಿಳೆಯರ ಅಭಿಪ್ರಾಯ ಆಲಿಸಿ ಅವರಿಗೆ ಅರಿವು ಮೂಡಿಸಲು ಸಿಎಂ ಉಡುಪಿ ಕಾಂಗ್ರೆಸ್ ನಾಯಕಿಗೆ ತಿಳಿಸಿದರು.

ಬೇಡ ಬಡ್ಡಿ- ಚೀಟಿ ವ್ಯವಹಾರ

ಗೃಹಲಕ್ಷ್ಮಿ ಹಣದಿಂದ ಯಾರೂ ಬಡ್ಡಿ ಅಥವಾ ಚೀಟಿ ವ್ಯವಹಾರ ಮಾಡಬೇಡಿ. ನಿಮ್ಮ ಕಷ್ಟ-ನಷ್ಟಕ್ಕೆ, ನಿಮ್ಮ ಸ್ವಂತ ದುಡಿಮೆಗೆ, ಮಕ್ಕಳ ಶಿಕ್ಷಣಕ್ಕೆ ,ಔಷಧೋಪಚಾರಕ್ಕೆ ಮಾತ್ರ ಬಳಸುವಂತೆ ಸಿಎಂ ಮನವಿ ಮಾಡಿದರು.

ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ದುರುಪಯೋಗದ ಪ್ರಕರಣಗಳು ನನ್ನ ಗಮನಕ್ಕೆ ಬಂದಿದೆ. 1 ಲಕ್ಷಕ್ಕೂ ಹೆಚ್ಚು ಮೃತರ ಖಾತೆಗೆ ಹಣ ಹೋಗಿತ್ತು. ಕೆಲವರ ಸಾಲದ ಖಾತೆಗೆ ಜಮೆ ಆಗುತ್ತಿದೆ. ಹೀಗಾಗಬಾರದು ಎಂದರು.

ಬೆಳಗ್ಗೆ ಮಾರುಕಟ್ಟೆಗೆ ಹೋಗುವಾಗ 2 ಸಾವಿರ ರೂ. ಸಾಲ ಪಡೆದು ಸಂಜೆ ಹಣ ಹಿಂದಿರುಗಿಸುವಾಗ ಶೇ.10 ಹೆಚ್ಚುವರಿ ಪಾವತಿಸುವುದನ್ನು ಕೆಲವರು ರೂಢಿಸಿಕೊಂಡಿದ್ದಾರೆ. ಈ ವ್ಯವಹಾರಗಳಿಂದ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಅಪರಾಧ ಪ್ರಕರಣಗಳೂ ಹೆಚ್ಚುತ್ತವೆ ಎಂದು ಸಿಎಂ ಎಚ್ಚರಿಸಿದರು.

ಆಶೀರ್ವಾದ ಬೇಡಿದ ಸಿಎಂ

ಗೃಹಲಕ್ಷ್ಮಿಯರಿಗೆ ಬಾಗಿನ ನೀಡಿ, ಊಟ ಹಾಕಿಸಿದ ಸಿಎಂ, ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಕೋರಿದರು

ಹೆಣ್ಣು ಸಮಾಜದ ಕಣ್ಣು. ನಿಮ್ಮ ಪರವಾದ ಕಾರ್ಯಕ್ರಮಗಳನ್ನೇ ಜಾರಿಗೆ ತಂದಿದ್ದೇವೆ. ಹೆಣ್ಣುಮಕ್ಕಳು ಉಪಕಾರ ಸ್ಮರಣೆ ಮರೆಯುವುದಿಲ್ಲ ಂದು ನನಗೆ ಗೊತ್ತಿದೆ. ನಿಮ್ಮ ಸಹಕಾರ ಇರಲಿ. 2028ಕ್ಕೂ ಆಶೀರ್ವಾದ ಮಾಡಿ ಎಂದು ವಿನಂತಿಸಿದರು.

ಮೊಮ್ಮಗಳಿಗೆ ತೊಟ್ಟಿಲು ಖರೀದಿ

ಸಿಎಂ ತಮ್ಮ ಮೊಮ್ಮಗಳಿಗೆ ಮುತ್ತುಗಳಿಂದ ತಯಾರಿಸಿದ ಆಟಿಕೆ ತೊಟ್ಟಿಲು ಹಾಗೂ ಜೋಡಿ ದೀಪಗಳನ್ನು ಖರೀದಿಸಿದರು. ಕಲುಬುರಗಿ ಶಿವನಗರದ ಎಂ.ಎಸ್.ಸುವರ್ಣ ಗೃಹಲಕ್ಷ್ಮಿ ಹಣದಲ್ಲಿ ಉಳಿಸಿ ಕರಕುಶಲ ವಸ್ತು ತಯಾರಿಸಿ ಮುಂಬೈ, ಪುಣೆ, ಹೈದರಾಬಾದ್‌ಗೆ ಕಳುಹಿಸುವುದಾಗಿ ಹೇಳಿಕೊಂಡದರು. ಮುತ್ತುಗಳಿಂದ ತಯಾರಿಸಿದ ಗುಲಾಬಿ ಬಣ್ಣದ ಆಟಿಕೆ ತೊಟ್ಟಿಲು ಪ್ರದರ್ಶಿಸಿದರು. ಸಿಎಂಗೆ ತೊಟ್ಟಿಲು ಇಷ್ಟವಾಯ್ತು. ಎಷ್ಟಮ್ಮ ಇದರ ಬೆಲೆ ಅಂದ್ರು.

ಇದನ್ನು ಮಾಡಲು 125 ರೂ. ಖರ್ಚಾಗುತ್ತೆ, 250, 300 ರೂ. ಗೆ ಮಾರಾಟ ಮಾಡ್ತೀನಿ, ಸಾಕಷ್ಟು ಲಾಭ ಬರ್ತಿದೆ ಅಂದ್ರು ಸುವರ್ಣ. ಆ ತೊಟ್ಟಿಲು ಕೊಡಮ್ಮ, ಬಹಳ ಚನ್ನಾಗಿದೆ, ಮೊಮ್ಮಗಳಿಗೆ ಕೊಡ್ತೀನಿ ಅಂತ ಇಸ್ಕೊಂಡ್ರು. ಬೇಡ, ಬೇಡ ಅಂದ್ರೂ 500 ರೂ. ಕೊಟ್ರು. ತೊಟ್ಟಿಲನ್ನು ಕಣ್ತುಂಬಿಕೊಂಡು ಮನೆಗೆ ಕೊಟ್ಟು ಕಳುಹಿಸಿದ್ರು.

ಸಿಎಂಗೆ ಬಹುಪರಾಕ್

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದ ಸರ್ಕಾರಕ್ಕೆ ಅಭಿನಂದನೆ ಹೇಳಿದರು. ಮುಂದೆಯೂ ನೀವೇ ಅಧಿಕಾರಕ್ಕೆ ಬನ್ನಿ ಎಂದು ಹಾರೈಸಿದರು. ನಿಮ್ನನ್ನು ಹತ್ತಿರದಿಂದ ಭೇಟಿ ಯಾಗಿದ್ದೇ ಸುದೈವ ಎಂದರು. ಕೊಡಗಿನ ಗೃಹಲಕ್ಷ್ಮಿಯರು ಹಣ ಸಂಗ್ರಹಿಸಿ ಅಂಗನವಾಡಿ ಮಕ್ಕಳಿಗೆ ಸಮವಸ ಪುಸ್ತಕ ಕೊಡಿಸಿದ್ದೇವೆ ಎಂದು ಹೇಳಿದರು. .