ನಗರದ ಕೊಂಡಜ್ಜಿ ಬಸಪ್ಪ ಸಭಾಗಂಣದಲ್ಲಿ ಕೃಷ್ಣಯ್ಯ ಚೆಟ್ಟಿ ಜುವೆಲ್ಲರ್ಸ್ ಸಂಸ್ಥೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ರಾಮಲಿಂಗಾರೆಡ್ಡಿ, ಪಿ.ಜಿ.ಆರ್. ಸಿಂಧ್ಯಾ, ತ್ರೀವೇಣಿ ವಿನೋದ್, ಡಾ.ಆರ್. ಚನ್ನರಾಜ್ ಜೈನ್ ಇದ್ದರು.
ಬೆಂಗಳೂರು: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದರಿಂದ ಶಿಸ್ತು, ದೈಹಿಕ ಶಕ್ತಿ, ಉತ್ತಮ ಮನಸ್ಥಿತಿ ಬೆಳೆಯಲು ಸಹಕಾರಿಯಾಗುತ್ತದೆ, ಇದರಿಂದ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದ ಕೊಂಡಜ್ಜಿ ಬಸಪ್ಪ ಸಭಾಗಂಣದಲ್ಲಿ ಕೃಷ್ಣಯ್ಯ ಚೆಟ್ಟಿ ಜುವೆಲ್ಲರ್ಸ್ ಸಂಸ್ಥೆಯ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ 650 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೆ ಶಾಲಾ, ಕಾಲೇಜು ಹಂತಗಳಲ್ಲಿ ಎನ್ಸಿಸಿ, ಸ್ಕೌಟ್ಸ್-ಗೈಡ್ಸ್ ಹಾಗೂ ಕ್ರೀಡೆ ಕಡ್ಡಾಯವಾಗಿತ್ತು ಎಂದರು.
ಹಿಂದೆಲ್ಲ ಎನ್ಸಿಸಿಯಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗವಹಿಸುವ ವಾತಾವರಣವಿತ್ತು. ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದ ಈ ರೀತಿಯ ಚಟುವಟಿಕೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಿಕ್ಷಣವೆಂದರೆ ಬರಿ ಓದಿಗೆ ಸಿಮೀತವಲ್ಲ. ಜತೆಗೆ ಕ್ರೀಡೆ, ಸಾಂಸತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ತಿಳಿಸಿದರು.
ಸ್ಕೌಟ್ಸ್&ಗೈಡ್ಸ್ ಸಂಸ್ಥೆಯು ಪ್ರತಿಯೊಬ್ಬ ವಿದ್ಯಾರ್ಥಿಗೂ ಸೂಕ್ತ ವೇದಿಕೆಯಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಇಂತಹ ಸಂಸ್ಥೆಗಳಿಗೆ ಸೇರಿಸಬೇಕು ಎಂದು ಕಿವಿಮಾತು ಹೇಳಿದರು.
ಸಿ.ಕೃಷ್ಣಯ್ಯ ಶೆಟ್ಟಿ ಫೌಂಡೇಶನ್ನ ಟ್ರಸ್ಟಿ ಡಾ.ವಿನೋದ್ ಹಯಗ್ರೀವ ಮಾತನಾಡಿ, ತಂತ್ರಜ್ಞಾನ ಬೆಳೆದಂತೆ ನಗರಗಳು, ಉದ್ಯೋಗದ ಮಾರ್ಗಗಳು ಬದಲಾಗಬಹುದು. ಆದರೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮೂಲ ಸಿದ್ಧಾಂತಗಳು ಮಾತ್ರ ಎಂದಿಗೂ ಬದಲಾಗುವುದಿಲ್ಲ. ಇದರಿಂದ ನಾಯಕರಾಗಿರುವವರು ಸಾಕಷ್ಟು ಮಂದಿ ಇದ್ದಾರೆ ಎಂದರು.
ಕೃಷ್ಣಯ್ಯ ಶೆಟ್ಟಿ ಫೌಂಡೇಶನ್ನ ಟ್ರಸ್ಟಿ ತ್ರೀವೇಣಿ ವಿನೋದ್, ಜೈನ್ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಚನ್ನರಾಜ್ ಜೈನ್, ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಕೊಂಡಜ್ಜಿ ಬಿ. ಷಣ್ಮುಖಪ್ಪ, ಎ.ಎನ್. ಮಹೇಶ್, ಪದಾಧಿಕಾರಿಗಳಾದ ಎಂ.ಎಂ. ಖಾಲೀದ್, ಚಿನ್ನಸ್ವಾಮಿ ರೆಡ್ಡಿ, ಗಂಗಪ್ಪ ಗೌಡ ಉಪಸ್ಥಿತರಿದ್ದರು.
ಮಕ್ಕಳಲ್ಲಿ ಸೇವಾ ಮನೋಭಾವ ಮೂಡಿಸುವುದು, ಭವಿಷ್ಯ ನಾಯಕರನ್ನು ಸೃಷ್ಟಿಸುವುದು ಸಂಸ್ಥೆಯ ಮೂಲ ಉದ್ದೇಶ. ವಿವಿಧ ಸಂಸ್ಥೆಗಳವರು, ಉದ್ಯಮಿಗಳು ಸಂಸ್ಥೆಯ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿರುವುದು ಶ್ಲಾನೀಯ.
- ಪಿ.ಜಿ.ಆರ್. ಸಿಂಧ್ಯಾ, ಸ್ಕೌಟ್ಸ್-ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ