instructions-to-5-corporations 
ಬೆಂಗಳೂರು

ವಿಪತ್ತು ನಿರ್ವಹಣೆಗೆ: 5 ಪಾಲಿಕೆಗಳಿಗೆ ಜಿಬಿಎ ಮುಖ್ಯ ಆಯುಕ್ತರ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಬೊಮ್ಮನಹಳ್ಳಿಯಲ್ಲಿ ಸ್ಥಳಪರಿಶೀಲಿಸಿದ ಮಹೇಶ್ವರ್ ರಾವ್
  • ಜಯನಗರದ ಶಾಲಿನಿ ಮೈದಾನದಲ್ಲಿ ಪರೇಡ್ ವೀಕ್ಷಣೆ
ಬೆಂಗಳೂರು: ಮಹಾನಗರದಲ್ಲಿ ವಿಪತ್ತು ನಿರ್ವಹಣೆಗಾಗಿ ಸದಾ ಸನ್ನದ್ಧರಾಗಿರಲು ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದಕ್ಷಿಣ ಪಾಲಿಕೆ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆ ಹಾಗೂ ಜಯನಗರದ ಶಾಲಿನಿ ಮೈದಾನದಲ್ಲಿ ಏರ್ಪಡಿಸಿದ್ದ ಪರೇಡ್ ಸ್ಥಳಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಮುಂಗಾರು ಮಳೆ ಪ್ರಾರಂಭವಾಗುವ ಹಿನ್ನೆಲೆ ಎಲ್ಲ ಪಾಲಿಕೆಗಳಲ್ಲಿ ವಿಭಾಗವಾರು ಸಿದ್ಧತೆ ಮಾಡಿಕೊಂಡಿರುವ ಕುರಿತು ಪರೇಡ್ ನಡೆಸಲು ಅಧಿಕಾರಿಗಳಿಗೆ ಸಮನ್ವಯ ಸಭೆಯಲ್ಲಿ ಸೂಚನೆ ನೀಡಲಾಗಿತ್ತು ಎಂದು ಹೇಳಿದರು.
ಮಳೆಗಾಲ ಪ್ರಾರಂಭವಾಗುವುದಕ್ಕೂ ಮುನ್ನ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಎಲ್ಲಿಯೂ ಯಾವುದೇ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಳೆಗಾಲದ ವೇಳೆ ವಿಪತ್ತು ನಿರ್ವಹಣೆಗೆ ಕಾರ್ಯನಿರ್ವಹಿಸುವ ಎಲ್ಲ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು, ಮಳೆಗಾಲದಲ್ಲಿ ಎಲ್ಲಿಯೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಒಂದು ತಂಡವಾಗಿ ಕೆಲಸ ಮಾಡುವಂತೆ ಸೂಚಿಸಿದರು.

ಪರೇಡ್ ಮೂಲಕ ಪರಿಶೀಲನೆ:

ಮಳೆಗಾಲದ ವೇಳೆ ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವ ಎಎಂಸಿ ತಂಡ, ವಿಪತ್ತು ನಿರ್ವಹಣೆ ತಂಡ, ಮರ ಕಟಾವು ತಂಡ, ಸಿಲ್ಟ್ ಆ್ಯಂಡ್ ಟ್ರ್ಯಾಕ್ಟರ್ ತಂಡ, ಪ್ರಹಾರಿ ವಾಹನಗಳು, ಯಂತ್ರೋಪಕರಣ, ಗ್ಯಾಂಗ್‌ಮನ್‌ಗಳು ಸೇರಿ ಮುನ್ನೆಚ್ಚರಿಕಾ ಕಾರ್ಯಗಳಿಗೆ ಬಳಸುವ ಸಂಪನ್ಮೂಲಗಳ ಪ್ರದರ್ಶನ ಮತ್ತು ಸನ್ನದ್ಧತಾ ಪರಿಶೀಲನೆ ನಡೆಸಲಾಯಿತು. ಈ ವೇಳೆ ಮಳೆಗಾಲದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳೊಂದಿಗೆ ಸಂವಹನ ನಡೆಸಿ ಯಂತ್ರೋಪಕರಣಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು.
ಸ್ಥಳಪರಿಶೀಲನೆ ವೇಳೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಅಪರ ಆಯುಕ್ತ ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರಾದ ರವಿ, ಬವರಾಜ್ ಕಬಾಡೆ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ಬನ್ನೇರುಘಟ್ಟ ರಸ್ತೆ ದುರಸ್ತಿ ತ್ವರಿತಕ್ಕೆ ಸೂಚನೆ:

ಬನ್ನೇರುಘಟ್ಟ ರಸ್ತೆ ಐಐಎಂ ಬಳಿ ಜಲಮಂಡಳಿ ಕೈಗೊಂಡಿರುವ ಕೊಳವೆ ಮಾರ್ಗದ ಕಾಮಗಾರಿ ವಿಳಂಬವಾಗಿದ್ದು, ಅಲ್ಲಿ ಕೆಲಸ ಪೂರ್ಣಗೊಂಡ ಭಾಗಗಳಲ್ಲಿ ರಸ್ತೆ ಪುನರ್‌ನಿರ್ಮಾಣ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳದಿರುವುದರಿಂದ ರಸ್ತೆಯ ಕೆಲವು ಭಾಗಗಳು ಕುಸಿದಿದೆ. ಹಾಗಾಗಿ ಜಲಮಂಡಳಿಯು ದುರಸ್ತಿಪಡಿಸಿದ ಭಾಗಗಳಲ್ಲಿ ಗುಣಮಟ್ಟ ಕಾಪಾಡಿಕೊಂಡು ಪುನರ್‌ನಿರ್ಮಾಣ ಕಾರ್ಯವನ್ನು 10 ದಿನಗಳೊಳಗೆ ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತರು ಸೂಚಿಸಿದರು.