ಬೆಂಗಳೂರು: ಸ್ಟಿಂಗ್ ಆಪರೇಷನ್ ಹೆಸರಲ್ಲಿ ಜನಪ್ರತಿನಿಧಿಗಳ ಘನತೆಗೆ ಧಕ್ಕೆ ತಂದ ಖಾಸಗಿ ನ್ಯೂಸ್ ಚಾನಲ್ ಮುಖ್ಯಸ್ಥ ಹಾಗೂ ಅವರ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಒಳಾಡಳಿತ ಇಲಾಖೆ ಪತ್ರ ಬರೆದಿದೆ.
ಪತ್ರದಲ್ಲಿ, ಸ್ಟಿಂಗ್ ಆಪರೇಷನ್ ಹೆಸರಲ್ಲಿ ಆಡಳಿತ ಪಕ್ಷದ ಸಚಿವರು ಹಾಗೂ ಶಾಸಕರು, ವಿರೋಧ ಪಕ್ಷದ ಶಾಸಕರಿಗೆ ಹಣದ ಆಮೀಷವೊಡ್ಡಿ ಅಪರಾಧ ಮಾಡಲು ಪ್ರಚೋದಿಸಿ ಜನಪ್ರತಿನಿಧಿಗಳಿಗೆ ತೇಜೋವಧೆ ಮಾಡುವ ಜತೆಗೆ ಅವರ ಗೌರವಕ್ಕೆ ಧಕ್ಕೆ ಬರುವಂತೆ ಬ್ಲಾಕ್ಮೇಲ್ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸ್ಟಿಂಗ್ ಪ್ರಕರಣದಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಘನತೆಗೂ ಧಕ್ಕೆ ತಂದಿರುವ ಖಾಸಗಿ ನ್ಯೂಸ್ ಚಾನಲ್ ಮುಖ್ಯಸ್ಥ ಹಾಗೂ ನೌಕರರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಒಳಾಡಳಿತ ಇಲಾಖೆ ಸೂಚನೆ ನೀಡಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ ಸುರೇಶ್ ಬಾಬು ನೇತೃತ್ವದ ಜೆಡಿಎಸ್ ಶಾಸಕರ ನಿಯೋಗ ನ.3ರಂದು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿ, ಕಾನೂನು ಕ್ರಮಕ್ಕೆ ಒತ್ತಾಯಿಸಿತ್ತು. ಈ ದೂರಿನ ಹಿನ್ನೆಲೆ ಇದೀಗ ಒಳಾಡಳಿತ ಇಲಾಖೆ ಡಿಜಿ-ಐಜಿಪಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಬಂಧನ ಭೀತಿ: ಸ್ಟಿಂಗ್ ಪ್ರಕರಣದ ಆರೋಪಿಗಳಾದ ಕಾಂಗ್ರೆಸ್ ಪಕ್ಷದ ನಾಯಕಿ ಕೃಪಾ ಆಳ್ವ, ಖಾಸಗಿ ನ್ಯೂಸ್ ಚಾನಲ್ ಮುಖ್ಯಸ್ಥ ರಾಕೇಶ್ ಶೆಟ್ಟಿ, ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪ್ರಜ್ವಲ್ ಪ್ರಸಾದ್, ಎಚ್.ಎಸ್. ಚಂದನ್, ಕೆ.ವಿ. ಪ್ರಶಾಂತ್ ಕುಮಾರ್ ಹಾಗೂ ವಿನೋದ್ ಕುಮಾರ್ ಎಲ್ಲರಿಗೂ ಬಂಧನ ಭೀತಿ ಎದುರಾಗಿದೆ. ಏಕೆಂದರೆ ಶುಕ್ರವಾರ ಎಲ್ಲರ ನಿರೀಕ್ಷಣಾ ಜಾಮೀನು ವಜಾಗೊಂಡಿದ್ದು, ಸಿಸಿಬಿ ಪೊಲೀಸರು ಯಾವ ಕ್ಷಣದಲ್ಲಾದರೂ ಇವರನ್ನು ಬಂಧಿಸುವ ಸಾಧ್ಯತೆಯಿದೆ.