- ಎನ್‌ಎಇಆರ್‌ಎ ಅಧ್ಯಕ್ಷ ಡಾ. ಪಿ.ಕೆ. ಜೋಶಿ ಅಭಿಮತ
- ಜಿಕೆವಿಕೆಯಲ್ಲಿ ಡಿಜಿಟಲ್ ಕೃಷಿ-ಸುಸ್ಥಿರ ಹಾಗೂ ಸಮಗ್ರ ಆಹಾರ ವ್ಯವಸ್ಥೆ ಸಮ್ಮೇಳನ
ಬೆಂಗಳೂರು: ಡಿಜಿಟಲ್ ತಂತ್ರಜ್ಞಾನಗಳ ನೆರವಿನಿಂದ ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಾಧ್ಯವಿದ್ದು, ಇದರಿಂದ ರೈತರಿಗೆ ಹೆಚ್ಚಿನ ಅನುಕೂಲ ಉಂಟಾಗಲಿದೆ ಎಂದು ರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರ ಸಂಶೋಧನಾ ಸಂಘದ (ಎನ್‌ಎಇಆರ್‌ಎ) ಅಧ್ಯಕ್ಷ ಡಾ. ಪಿ.ಕೆ. ಜೋಶಿ ಅಭಿಪ್ರಾಯಪಟ್ಟರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಯುಎಎಸ್-ಬಿ) ಹಾಗೂ ರಾಷ್ಟ್ರೀಯ ಕೃಷಿ ಅರ್ಥಶಾಸ ಸಂಶೋಧನಾ ಸಂಘದ ಜಂಟಿ ಆಶ್ರಯದಲ್ಲಿ ಜಿಕೆವಿಕೆಯಲ್ಲಿ ಬುಧವಾರ ಆರಂಭವಾದ ‘ಡಿಜಿಟಲ್ ಕೃಷಿ - ಸುಸ್ಥಿರ ಹಾಗೂ ಸಮಗ್ರ ಆಹಾರ ವ್ಯವಸ್ಥೆ’ ಕುರಿತಾದ ಎರಡು ದಿನಗಳ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ರೈತರಿಗೆ ಮಾರುಕಟ್ಟೆ ಬೆಲೆ, ಹವಾಮಾನ ಮಾಹಿತಿ, ಬೆಳೆ ನಿರ್ವಹಣೆ ಹಾಗೂ ಮೌಲ್ಯವರ್ಧನೆ ಕುರಿತು ಮಾಹಿತಿಯನ್ನು ತ್ವರಿತವಾಗಿ ಒದಗಿಸಿ ಕೃಷಿಯನ್ನು ಸ್ಪರ್ಧಾತ್ಮಕವಾಗಿಸಬೇಕಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚಿಸಲು ಸಹಕಾರಿಯಾಗಲಿದೆ. ಭವಿಷ್ಯದಲ್ಲಿ ವರ್ಚುವಲ್ ಕೆವಿಕೆ ಹಾಗೂ ಡಿಜಿಟಲ್ ವಿಲೇಜ್ ಹೆಚ್ಚಿನ ಪಾತ್ರ ವಹಿಸಲಿದೆ ಎಂದರು.
ತಂತ್ರಜ್ಞಾನಗಳ ಬಳಕೆ ಹೆಚ್ಚಳ:
ಯುಎಎಸ್-ಬಿ ಕುಲಪತಿ ಡಾ. ಎಸ್.ವಿ. ಸುರೇಶ್ ಮಾತನಾಡಿ, ವ್ಯವಸಾಯ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೃಷಿಯನ್ನು ಹೆಚ್ಚು ಲಾಭದಾಯಕ, ಪರಿಣಾಮಕಾರಿ ಹಾಗೂ ಪರಸರಸ್ನೇಹಿ ಆಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕೃತಕ ಬುದ್ಧಿಮತ್ತೆ, ಡ್ರೋನ್ ಹಾಗೂ ನಿಖರ ಕೃಷಿ ತಂತ್ರಜ್ಞಾನಗಳ ಬಳಕೆಯಿಂದ ರೈತರಿಗೆ ಸೂಕ್ತ ಸಮಯದಲ್ಲಿ ಮಾಹಿತಿ ದೊರೆಯುತ್ತಿದ್ದು, ಉತ್ಪಾದಕತೆ ಮತ್ತು ಆದಾಯ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ವಿವಿಯ ಕುಲಪತಿ ಪ್ರೊ. ಡಿ.ಸಿ. ರೈ, ಯುಎಎಸ್-ಬಿ ಡೀನ್ (ಕೃಷಿ) ಡಾ. ಎಂ.ಬಿ. ಪ್ರಕಾಶ್, ಸಮ್ಮೇಳನದ ಸಂಯೋಜಕ ಡಾ. ಸಿದ್ದಯ್ಯ ಹಾಗೂ ಇತರರು ಹಾಜರಿದ್ದರು.
"
ಆಹಾರ ಭದ್ರತೆ, ಪೌಷ್ಟಿಕ ಭದ್ರತೆ ಹಾಗೂ ಹವಾಮಾನ ಬದಲಾವಣೆಯ ಸವಾಲು ಎದುರಿಸಲು ಡಿಜಿಟಲ್ ಕೃಷಿ ಪ್ರಮುಖ ಸಾಧನವಾಗಿದೆ. ಸಣ್ಣ ರೈತರನ್ನು ಡಿಜಿಟಲ್ ತಂತ್ರಜ್ಞಾನಗಳ ವ್ಯಾಪ್ತಿಗೆ ತರುವ ಮೂಲಕ ಸಮಗ್ರ ಅಭಿವೃದ್ಧಿ ಸಾಧಿಸಬಹುದು. ಕೃಷಿ ಕ್ಷೇತ್ರದ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧಕರು ಮತ್ತು ರೈತರ ಮಧ್ಯೆ ನಿರಂತರ ಸಂವಾದ ಅಗತ್ಯವಿದೆ.
- ಡಾ. ಆರ್.ಎಸ್. ಸೆಂಥಿಲ್ ವಿನಾಯಕಂ, ಐಐಪಿಎಂ ನಿರ್ದೇಶಕ