ಡಿಜಿಟಲ್ ಇ-ಸ್ಟಾಂಪ್  
ಬೆಂಗಳೂರು

ಡಿಜಿಟಲ್ ಇ-ಸ್ಟಾಂಪ್ ಜಾರಿ ತಾಲೀಮು

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದಲ್ಲೇ ಡಿಜಿಟಲ್ ಇ-ಸ್ಟಾಂಪ್ (Digital e-stamp) ಸೇವೆ ಒದಗಿಸಲು ಅಂತಿಮ ತಾಲೀಮು ನಡೆಯುತ್ತಿದೆ. ಜ.14ರ ವರೆಗೂ ರಾಜ್ಯವ್ಯಾಪಿ ತರಬೇತಿ ನೀಡಲಾಗುತ್ತಿದೆ.
ಕಾನೂನು ದಾಖಲೆಗಳಿಗೆ ಅಗತ್ಯವಿದ್ದ ಛಾಪಾ ಕಾಗದ ಮಾಯವಾಗಿ ಇ-ಸ್ಟಾಂಪ್ ಜಾರಿಗೆ ಬಂದಿತ್ತು. ಇದೀಗ ಇ-ಸ್ಟಾಂಪ್‌ಗೂ ಕೋಕ್ ಕೊಟ್ಟು ಡಿಜಿಟಲ್ ಇ-ಸ್ಟಾಂಪ್ ಪರಿಚಯಿಸಲಾಗುತ್ತಿದೆ. ಇದಕ್ಕಾಗಿ ಕರ್ನಾಟಕ ಮುದ್ರಾಂಕ (ಡಿಜಿಟಲ್ ಇ-ಸ್ಟಾಂಪ್) ನಿಯಮಗಳು 2025 ಅನ್ನು ರಚಿಸಲಾಗಿದೆ. ಈ ನಿಯಮ ಪ್ರಕಾರ ಕಾವೇರಿ 2.0 ತಂತ್ರಾಂಶದಿಂದ ನಾಗರೀಕರು ಮನೆಯಿಂದಲೇ ಆನ್‌ಲೈನ್ ಮೂಲಕ ಇ-ಸ್ಟಾಂಪ್ ಅನ್ನು ಪಡೆಯಬಹುದಾಗಿದೆ. ಪಕ್ಷಕಾರರ ಆಧಾರ್ ಆಧಾರಿತ ಇ-ಸಹಿ ಅಗತ್ಯ ಇರುವ ಕಾರಣ ಆಧಾರ್ ಕಡ್ಡಾಯವಾಗಿ ಬೇಕಾಗಿದೆ. ಇ-ಸಹಿ ಜತೆಗೆ ೆಟೋ ಸಹ ಡಿಜಿಟಲ್ ಇ- ಸ್ಟಾಂಪ್‌ನಲ್ಲಿ ಮುದ್ರಿತವಾಗಿ ಕೈಸೇರಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಡಿಸಿಎಸ್ ಶುಲ್ಕವೂ ನಿಗದಿ:

ಡಿಜಿಟಲ್ ಇ-ಸ್ಟಾಂಪ್ ಅನ್ನು ಸಾರ್ವಜನಿಕರು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಜನಸೇವಕ ಸೇವಾ ಕೇಂದ್ರಗಳ ಮೂಲಕ ಪಡೆಯುವ ಸಂದರ್ಭದಲ್ಲಿ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ(ಇಡಿಸಿಎಸ್) ಶುಲ್ಕವನ್ನು ನಿಗದಿ ಮಾಡಿ ಕಂದಾಯ ಇಲಾಖೆ ಆದೇಶಿಸಿದೆ. ಇ-ಸ್ಟಾಂಪ್ ಪಡೆಯುವಾಗ ಕೇವಲ ಪಕ್ಷಕಾರರ ಹೆಸರು ಉಲ್ಲೇಖ ಮಾಡಿದರೆ ಸೇವಾ ಶುಲ್ಕ ಮೊದಲ ವ್ಯಕ್ತಿಗೆ 20 ರೂ. ಮತ್ತು ಹೆಚ್ಚುವರಿ ವ್ಯಕ್ತಿಗೆ ತಲಾ 5 ರೂ. ಇರಲಿದೆ. ಕನಿಷ್ಠ 20 ರೂ.ಯಿಂದ ಗರಿಷ್ಠ 50 ರೂ. ಶುಲ್ಕ ನಿಗದಿ ಮಾಡಲಾಗಿದೆ. ಇ-ಸ್ಟಾಂಪ್‌ನಲ್ಲಿ ಪಕ್ಷಕಾರರ ಹೆಸರು ಜತೆಗೆ ಭೂಮಿ, ಇ-ಸ್ವತ್ತು, ಇ-ಆಸ್ತಿ ಮಾಹಿತಿ ಉಲ್ಲೇಖಿಸಿದರೆ ಸೇವಾ ಶುಲ್ಕ 20 ರೂ. ಮತ್ತು ಹೆಚ್ಚುವರಿ ವ್ಯಕ್ತಿಗಳಿಗೆ ತಲಾ 5 ರೂ. ಹಾಗೂ ಮೊದಲ ಆಸ್ತಿಗೆ 5 ರೂ. ಮತ್ತು ಹೆಚ್ಚುವರಿ ಆಸ್ತಿಗಳಿಗೆ 5 ರೂ. ನಿಗದಿ ಮಾಡಲಾಗಿದೆ. ಕನಿಷ್ಠ 25 ರೂ.ಯಿಂದ ಗರಿಷ್ಠ 100 ರೂ. ಸೇವಾ ಶುಲ್ಕ ಇರಲಿದೆ.

ಯಾರಿಗೆಲ್ಲ ತರಬೇತಿ

ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಮತ್ತು ಎಸ್‌ಸಿಎಚ್‌ಐಎಲ್‌ಎಲ್ ಮೂಲಕ ಇ-ಸ್ಟಾಂಪ್ ಮಾರಾಟಗಾರರು, ಸಹಕಾರಿ ಸೌಹಾರ್ದಗಳ ಸಿಬ್ಬಂದಿ ವರ್ಗ, ಆಸಕ್ತ ಸಾರ್ವಜನಿಕರಿಗೆ ತರಬೇತಿ ಏರ್ಪಡಿಸಲಾಗಿದೆ. ಪ್ರತಿಯೊಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತರಬೇತಿ ನಡೆಯಲಿದ್ದು, ಜಿಲ್ಲಾ ನೋಂದಣಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.

ಜನರಿಗೆ ಆಗುವ ಪ್ರಯೋಜನ

-ಮಧ್ಯವರ್ತಿಗಳ ನೆರವಿಲ್ಲದೆ ಆನ್‌ಲೈನ್‌ನಲ್ಲಿ ಸಿಗಲಿದೆ ಇ-ಸ್ಟಾಂಪ್
-ದಿನದ 24 ಗಂಟೆ ಸೇವೆ ಸಿಗಲಿದ್ದು, ಆನ್‌ಲೈನ್‌ನಲ್ಲೇ ಶುಲ್ಕ ಪಾವತಿ
-ಆಧಾರ್ ಆಧಾರಿತ ಇ-ಸಹಿ ಅಥವಾ ಡಿಎಸ್‌ಎಸ್ ಬಳಸಿ ಡಿಜಿಟಲ್ ಸಹಿ
-ಸ್ವಯಂಚಾಲಿತವಾಗಿ ಸ್ಟಾಂಪ್ ಡ್ಯೂಟಿ ಲೆಕ್ಕಾಚಾರ
-ಭೌತಿಕ ಇ-ಸ್ಟಾಂಪ್ ಇಲ್ಲದ ಕಾರಣ ನಾಶವಾಗುವ ಭಯ ಇಲ್ಲ
-ಕ್ಯೂಆರ್ ಕೋಡ್ ಭದ್ರತೆ, ಹೆಚ್ಚುವರಿ ಶುಲ್ಕ ವಸೂಲಿಗೆ ಬ್ರೇಕ್
ನೋಂದಣಿ ಕಡ್ಡಾಯವಲ್ಲದ ದಸ್ತಾವೇಜು
-ಬ್ಯಾಂಕ್ ಗ್ಯಾರಂಟಿ
-ಸಾಲ ಒಪ್ಪಂದ
-ಇಂಡೆಮ್ನಿಟಿ ಬಾಂಡ್
-ಹೈಪೋಥೆಕೇಶನ್ ಒಪ್ಪಂದ
-ಪಣ ಮತ್ತು ಅಡಮಾನ
-ಘೋಷಣೆ (ಡಿಕ್ಲರೇಷನ್)
-ಪ್ರಾಮಿಸ್ಸರಿ ನೋಟ್ಸ್
-ಅಫಿಡವಿಟ್
-ಸ್ವಾಧೀನ ರಹಿತ ಕ್ರಯದ ಕರಾರು