ಬೇಡ್ತಿ ನದಿ ತಿರುವು ವಿರುದ್ಧ ಹೋರಾಟ 
ಬೆಂಗಳೂರು

ಅಭಿವೃದ್ಧಿಯೆನ್ನುವುದು ಅಂತಕನ ದೂತನಂತಾಗಬಾರದು!

ಏನದು ಸುಸ್ಥಿರ ಅಭಿವೃದ್ದಿ? ವರ್ತಮಾನದ ಪೀಳಿಗೆಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಬೇಕಾದ ವ್ಯವಸ್ಥೆ ಕಲ್ಪಿಸುವಾಗ, ಭವಿಷ್ಯದ ಪೀಳಿಗೆ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಯಾವುದೇ ಕೊರತೆಯಾಗದಂತೆ ನೋಡಿಕೊಂಡು ಅವರಿಗೂ ಉಳಿಸಿ ಕೈಗೊಳ್ಳುವ ಅಭಿವೃದ್ಧಿ. ಸರಳವಾಗಿ ಹೇಳುವುದಾದರೆ ಪರಿಸರವನ್ನು, ಜೀವವೈವಿಧ್ಯವನ್ನು ಹಾಳುಗೆಡವದೇ ಅದನ್ನು ಸಾಧಿಸುವುದು. ದೇಶದ ಜಿಡಿಪಿ ಹೆಚ್ಚಾಗುವುದಷ್ಟೇ ಅಲ್ಲ, ಅದು ಮನುಷ್ಯನ ಸ್ವಾತಂತ್ರ್ಯ, ಸಂತೋಷ ಮತ್ತು ಆಯ್ಕೆಯ ಹಕ್ಕುಗಳು ವಿಸ್ತಾರಗೊಳ್ಳುವ ಪ್ರಕ್ರಿಯೆ.

| ರಾಜಶೇಖರ ಜೋಗಿನ್ಮನೆ

ಅಭಿವೃದ್ಧಿಯ ಮೂಲ ಪರಿಕಲ್ಪನೆ ನಮ್ಮ ಆಡಳಿತಗಾರರಿಗೆ ಅರ್ಥವೇ ಆಗಲಿಲ್ಲ ಎಂಬುದಕ್ಕೆ ಪದೇಪದೆ ಪುರಾವೆಗಳು ದೊರಕುತ್ತಲೇ ಇವೆ. ಅವರಿಗೇನಾದರೂ ಅದು ಅರ್ಥವಾಗಿದ್ದಿದ್ದರೆ ಯೋಜನೆಗಳಾವವೂ ಜನವಿರೋಧಿಯಾಗುತ್ತಿರಲಿಲ್ಲ, ಜೀವ ವಿರೋಧಿಯಾಗುತ್ತಿರಲಿಲ್ಲ. ಹಾಗಾದರೆ ಅಭಿವೃದ್ಧಿ ಅಂದರೇನು? ಸ್ಥೂಲವಾಗಿ ಹೇಳುವುದಾದರೆ ಅಭಿವೃದ್ಧಿಯೆಂಬುದು ಆರ್ಥಿಕ ಬೆಳವಣಿಗೆಗೆ ಸೀಮಿತವಲ್ಲ. ಜನಜೀವನದ ಸರ್ವಾಂಗೀಣ ಸುಧಾರಣೆಯನ್ನು ಒಳಗೊಂಡಿದೆ. ಭಾರತದಂಥ ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿ ಪ್ರಜೆಯೂ ಪ್ರಭುವೇ ಆಗಿರುವುದರಿಂದ ಆತ ಘನತೆಯಿಂದ ಬದುಕಬೇಕು, ಆ ಗೌರವದ ಬದುಕಿಗೆ ಬೇಕಾದ ಸಂಪನ್ಮೂಲಗಳು ಮತ್ತು ಅವಕಾಶಗಳು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾಗಿ ದೊರೆಯುವಂತಾಗಬೇಕು.

ಹೀಗೆಂದು ಯಾವುದಾದರೂ ರಾಜಕಾರಣಿಯ ಹತ್ತಿರ ಹೇಳಿ ನೋಡಿ. ಇದು ‘ಐಡಿಯಲ್ ಸ್ಟೇಟ್ ಪರಿಕಲ್ಪನೆಯಾಯಿತು, ಅದೆಲ್ಲ ಇಲ್ಲಿ ಸಾಧ್ಯವೇ?’ ಎಂದು ನಗೆಯಾಡುತ್ತಾರೆ. ಆದ್ದರಿಂದಲೇ ನಮ್ಮಲ್ಲಿ ಅಭಿವೃದ್ಧಿ ಹೆಸರಿನ ಎಷ್ಟೋ ಯೋಜನೆಗಳು ‘ಕಿಂಚಿತ್ತೂ ದಯವಿಲ್ಲದ ಅಂತಕನ ದೂತ’ನಂತಾಗಿವೆ. ಅವು ಬರುವಾಗೆಲ್ಲ ಬದುಕು ಅತಂತ್ರವಾಗುವ ಆತಂಕವನ್ನು ಹೊತ್ತು ತರುತ್ತವೆ. ಇದೆಲ್ಲ ಹೋಗಲಿ, ಸುಸ್ಥಿರ ಅಭಿವೃದ್ಧಿಯ ಕಲ್ಪನೆಯಾದರೂ ಅಧಿಕಾರಸ್ಥರಿಗೆ ಇದೆ ಎನ್ನುವುದೂ ಅನುಮಾನಾಸ್ಪದವೇ.

ಏನದು ಸುಸ್ಥಿರ ಅಭಿವೃದ್ದಿ? ವರ್ತಮಾನದ ಪೀಳಿಗೆಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಬೇಕಾದ ವ್ಯವಸ್ಥೆ ಕಲ್ಪಿಸುವಾಗ, ಭವಿಷ್ಯದ ಪೀಳಿಗೆ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಯಾವುದೇ ಕೊರತೆಯಾಗದಂತೆ ನೋಡಿಕೊಂಡು ಅವರಿಗೂ ಉಳಿಸಿ ಕೈಗೊಳ್ಳುವ ಅಭಿವೃದ್ಧಿ. ಸರಳವಾಗಿ ಹೇಳುವುದಾದರೆ ಪರಿಸರವನ್ನು, ಜೀವವೈವಿಧ್ಯವನ್ನು ಹಾಳುಗೆಡವದೇ ಅದನ್ನು ಸಾಧಿಸುವುದು. ದೇಶದ ಜಿಡಿಪಿ ಹೆಚ್ಚಾಗುವುದಷ್ಟೇ ಅಲ್ಲ, ಅದು ಮನುಷ್ಯನ ಸ್ವಾತಂತ್ರ್ಯ, ಸಂತೋಷ ಮತ್ತು ಆಯ್ಕೆಯ ಹಕ್ಕುಗಳು ವಿಸ್ತಾರಗೊಳ್ಳುವ ಪ್ರಕ್ರಿಯೆ.

ರಾಜ್ಯದಲ್ಲಿ ದಶಕಗಳಿಂದ ನಡೆಯುತ್ತಿರುವ ಪರಿಸರ ಹೋರಾಟಗಳ ಹಿಂದಿನ ಆಶಯ ಕೂಡ ಬೇರೇನಲ್ಲ. ಆದರೆ, ಸರ್ಕಾರಗಳಿಗೆ ಅದು ಅರ್ಥವಾಗಿದೆಯೇ? ಇಲ್ಲ. ಅರ್ಥವಾಗಿದ್ದಿದ್ದರೆ ಕಸ್ತೂರಿರಂಗನ್ ವರದಿಯಂಥವು ಬಂದಾಗ ಅವುಗಳ ದುಷ್ಪರಿಣಾಮಗಳನ್ನು ಇಲ್ಲವಾಗಿಸುವತ್ತ ಗಮನಿಸುತ್ತಿದ್ದರೇ ಹೊರತೂ ಸಾರಾಸಗಟಾಗಿ ನಿರಾಕರಿಸುತ್ತಿರಲಿಲ್ಲ. ಎತ್ತಿನಹೊಳೆಯಂಥ ಯೋಜನೆಗಳ ವೈಫಲ್ಯ ಕಣ್ಮುಂದೇಯೇ ಇರುವಾಗ ಬೇಡ್ತಿ- ಅಘನಾಶಿನಿಯಂಥ ನದಿ ತಿರುವು ಯೋಜನೆಗಳ ಕುರಿತು ಯೋಚಿಸುತ್ತಲೂ ಇರಲಿಲ್ಲ. ಬಯಲು ನಾಡಿನ ಮಣ್ಣಿಗೆ ಎಷ್ಟು ನೀರು ಸಾಕು, ಅಷ್ಟನ್ನು ಒದಗಿಸಲು ಸ್ಥಳೀಯವಾಗಿ ಏನು ಮಾಡಬಹುದು, ಅಣೆಕಟ್ಟೆಗಳಲ್ಲಿ ತುಂಬಿದ ಹೂಳು ತೆಗೆಯುವ ಬಗೆ ಹೇಗೆ ಎಂದು ಯೋಚಿಸುತ್ತಿದ್ದರು. ಹೊರತೂ ಪರಿಸರ ಹೋರಾಟಗಳು, ಪರಿಸರವಾದಿಗಳು ಅಭಿವೃದ್ಧಿ ವಿರೋಧಿಗಳು ಎಂಬ ಅನುಮಾನಗಳನ್ನು ಬಿತ್ತಿ ಅದನ್ನೇ ಬೆಳೆಯಲು ಹೋಗುತ್ತಿರಲಿಲ್ಲ.

ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪರಿಸರವನ್ನು, ಅದಕ್ಕೆ ಹಾನಿಯಾದರೆ ಉಂಟಾಗುವ ದೂರಗಾಮಿ ಪರಿಣಾಮಗಳನ್ನು ನಿರ್ಲಕ್ಷಿಸಿದ್ದೇ ಪರಿಸರ ಹೋರಾಟಗಳ ಹುಟ್ಟಿಗೆ ಕಾರಣವಾಯಿತು ಎಂಬುದನ್ನು ಇವರೆಲ್ಲ ಅರ್ಥಮಾಡಿಕೊಳ್ಳಬೇಕು. ಮನುಷ್ಯೇತರ ಜೀವಿಗಳಿಗೆ ಈ ಭೂಮಿಯಲ್ಲಿ ಬದುಕುವ ಹಕ್ಕಿದೆ ಎನ್ನುವುದನ್ನು ಮರೆತಿದ್ದು ಹಾಗೂ ನಿಸರ್ಗದೊಡನೆ ಹೊಂದಿಕೊಂಡೇ ಸುದೀರ್ಘ ಕಾಲದಿಂದ ಬಾಳುತ್ತಿರುವ ಸ್ಥಳೀಯ ಸಮುದಾಯಗಳನ್ನು ಅಲಕ್ಷಿಸಿದ್ದು ಕೂಡ ಅದಕ್ಕೆ ಕಾರಣ. ಯಾವ ಪರಿಸರ ಹೋರಾಟ ಅಭಿವೃದ್ಧಿಯ ವಿರೋಧಿಯಾಗಿದೆ? ಬದಲಿಗೆ, ಪ್ರತಿ ಹೋರಾಟವೂ ಏಕಪಕ್ಷೀಯ ಮತ್ತು ಅವೈಜ್ಞಾನಿಕ ಅಭಿವೃದ್ಧಿಗೆ ವಿರುದ್ಧವಾಗಿದೆ.

ಕೆಟ್ಟ ರಾಜರ ಹಾಗೆ!

ಅಭಿವೃದ್ಧಿ ಹೆಸರಲ್ಲೋ, ಕುಡಿಯುವ ನೀರು ಕೊಡುವ ಯೋಜನೆಯೆಂದೋ ಬೃಹತ್ ಯೋಜನೆಯೊಂದನ್ನು ಜಾರಿಗೆ ತರುವಾಗ ಸರ್ಕಾರ ಕೆಟ್ಟ ರಾಜರ ಹಾಗೆ ವರ್ತಿಸುತ್ತದೆ. ಹೇಗೆಂದರೆ, ಅಲ್ಲಿನ ಮೂಲ ನಿವಾಸಿಗಳು, ಶೋಷಿತ ಸಮುದಾಯಗಳು ಅಥವಾ ಅವರ ಸಾಂಪ್ರದಾಯಿಕ ಜೀವನೋಪಾಯಗಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಮೊದಲು ಯೋಚಿಸಬೇಕು. ಇವರು ಹಾಗೆ ಮಾಡುವುದಿಲ್ಲ. ಅದು ಎಷ್ಟು ಸಾವಿರ ಕೋಟಿ ಯೋಜನೆಯಾಗಬಹುದು, ಅದರಿಂದೆಷ್ಟು ಕಮಿಷನ್ ಪಡೆಯಬಹುದು? ಎಂಬಂಥ ಸ್ವಾರ್ಥ ಹಾಗೂ ಭೌತಿಕ ಮೂಲಸೌಕರ್ಯಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು, ಅದರಿಂದಾಗುವ ಸಾಲು ಸಾಲು ಅರಣ್ಯ ನಾಶ, ಜಲಮೂಲಗಳ ಮಾಲಿನ್ಯ ಮತ್ತು ಸುದೀರ್ಘ ಭವಿಷ್ಯದಲ್ಲಿ ಉಂಟಾಗಬಹುದಾದ ಜೀವವೈವಿಧ್ಯದ ನಷ್ಟಕ್ಕೆ ನೀಡುವುದಿಲ್ಲ. ಯೋಜನೆ ಪರಿಸರದ ಮೇಲೆ ಬೀರಬಹುದಾದ ಬೀರಬಹುದಾದ ಪರಿಣಾಮದ ವರದಿಯನ್ನು ದಾಖಲೆಗೆ ಬೇಕಾಗಿ ಮಾಡುತ್ತಾರೆಯೇ ಹೊರತೂ ಯೋಜನೆಯ ನೈಜ ಪರಿಣಾಮಗಳನ್ನು ಸಾರ್ವಜನಿಕರ ಮುಂದೆ ಪಾರದರ್ಶಕವಾಗಿ ತೆರೆದಿಡುವುದಿಲ್ಲ. ಯೋಜನಾ ನಿರ್ಮಾತೃರು ಮಾಡುವ ಮತ್ತೊಂದು ಬಹುದೊಡ್ಡ ಅಪರಾಧವೆಂದರೆ ಯೋಜನಾ ಹಂತದಲ್ಲಿ ಸ್ಥಳೀಯ ಜನರ ಅನುಭವಗಳನ್ನು ಅಥವಾ ಪರಿಸರ ತಜ್ಞರ ಮುನ್ನೆಚ್ಚರಿಕೆಗಳನ್ನು ಲೆಕ್ಕಿಸುವುದಿಲ್ಲ. ಒಮ್ಮೆ ಮಂಜೂರಾದರೆ ಸಾಕು ಎಂಬುದಷ್ಟೇ ಅವರ ಕಾಳಜಿ.

ಈ ಎಲ್ಲ ನೆಲೆಯಲ್ಲಿ ಯೋಚಿಸಿದಾಗ ರಾಜಧಾನಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಇತ್ತೀಚೆಗೆ ನಡೆದ ಬೇಡ್ತಿ -ಅಘನಾಶಿನಿ ಕಣಿವೆ ಉಳಿಸಿ ಜನಾಂದೋಲನ ಯಾವುದೋ ಒಂದು ಪ್ರದೇಶದ ಸಮಸ್ಯೆ ಎಂದು ತಳ್ಳಿಹಾಕುವಂತಿಲ್ಲ. ಹೋರಾಟಗಾರರು ಆ ದಿನ ಎತ್ತಿದ ಪ್ರಶ್ನೆಗಳು, ಮುಂದಿಟ್ಟ ಶಿಫಾರಸುಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕಿದೆ. ಏಕೆಂದರೆ ಈ ಬೇಡಿಕೆಗೆ ಒಂದು ಸಾರ್ವತ್ರಿಕ ಆಯಾಮವಿದೆ. ಜನಜೀವನ ಮತ್ತು ವನಜೀವನದ ಹಿತವಿದೆ. ಸಹ್ಯಾದ್ರಿಯ ಉಳಿವು, ಮಲೆನಾಡಿನ ಸಿಹಿ ನೀರಿನ ಮೂಲಗಳ ಅರಿವು ಹಾಗೂ ಅಳಿವಿನ ಪ್ರಶ್ನೆಗಳನ್ನು ಈ ಚಳವಳಿ ಆಡಳಿತಗಾರರ ಮುಂದಿಟ್ಟಿದೆ. ಸಹ್ಯಾದ್ರಿ ನಾಶವಾದರೆ ಏನೆಲ್ಲಾ ಅನಾಹುತವಾದೀತು ಎನ್ನುವುದು ಅರ್ಥವಾಗಬೇಕೆಂದರೆ ಪಶ್ಚಿಮಘಟ್ಟದ 22 ಪ್ರಮುಖ ನದಿ ಕಣಿವೆಗಳ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಬಗ್ಗೆ ನೀತಿ ನಿರೂಪಕರು ಗಮನ ಹರಿಸಲೇಬೇಕಿದೆ.

ಪಶ್ಚಿಮಘಟ್ಟ ಕೇವಲ ಮರಗಳ ಸಾಲಲ್ಲ, ದಕ್ಷಿಣ ಭಾರತದ ಜೀವನಾಡಿ. ಈ ಜೀವನಾಡಿಯ ಜೀವ ಉಳಿಸಲು ಸರ್ಕಾರಗಳು ಇನ್ನಾದರೂ ಎಚ್ಚರಗೊಳ್ಳಬೇಕು. ಮನುಕುಲದ ಹಿತಕ್ಕಾಗಿ ಸ್ಥಳೀಯರ ಹಿತಾಸಕ್ತಿ ಕಾಪಾಡುತ್ತಲೇ ಕಟ್ಟುನಿಟ್ಟಿನ ಪರಿಸರಸ್ನೇಹಿ ನೀತಿಗಳನ್ನು ರೂಪಿಸಬೇಕಿದೆ.

ಸರ್ಕಾರ ಕಲಿಯದ ಪಾಠಗಳು

* ಪರಿಸರ ನಾಶವೇ ಪ್ರಾಕೃತಿಕ ವಿಕೋಪಗಳಿಗೆ ಕಾರಣ ಎಂಬ ಸತ್ಯವನ್ನು ಸರ್ಕಾರಗಳು ಕಡೆಗಣಿಸಿವೆ. ಕೊಡಗು ಮತ್ತು ಮಲೆನಾಡು ಪ್ರದೇಶಗಳಲ್ಲಿ ಪದೇ ಪದೇ ಸಂಭವಿಸುತ್ತಿರುವ ಭೂಕುಸಿತ ಹಾಗೂ ಪ್ರವಾಹಗಳಿಗೆ ಅವೈಜ್ಞಾನಿಕ ರಸ್ತೆ ನಿರ್ಮಾಣ, ಕಾಡಿನ ನಾಶವೇ ಕಾರಣ ಎಂದು ತಜ್ಞರು ಎಚ್ಚರಿಸುತ್ತಿದ್ದರೂ ಸರ್ಕಾರಗಳು ದೊಡ್ಡ ಮಟ್ಟದ ಮೂಲ ಸೌಕರ್ಯಗಳ ಹೆಸರಿನಲ್ಲಿ ಪರಿಸರಕ್ಕೆ ಹಾನಿ ಮಾಡುತ್ತಲೇ ಇವೆ.

* ಸ್ಥಳೀಯರ ವಿಶ್ವಾಸ ಗಳಿಸದೆ ಕಾಗದದ ಮೇಲೆ ಯೋಜನೆಗಳನ್ನು ಹೇರುವುದು ಸರ್ಕಾರಗಳ ದುರಭ್ಯಾಸ. ಕಸ್ತೂರಿ ರಂಗನ್ ವರದಿಯಂತಹ ಮಹತ್ವದ ವರದಿಗಳನ್ನು ಕೂಡ ಜನರಿಗೆ ಸರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಸ್ಥಳೀಯರ ಜೀವನೋಪಾಯಕ್ಕೆ ಭದ್ರತೆ ಒದಗಿಸುವ ಕ್ರಮಗಳ ಬಗ್ಗೆ ಸರ್ಕಾರ ಯೋಚಿಸದಿರುವುದರಿಂದ ಸಂರಕ್ಷಣಾ ಕ್ರಮಗಳ ವಿರುದ್ಧವೇ ಪ್ರತಿಭಟನೆಗಳು ಹುಟ್ಟಿಕೊಳ್ಳುವಂತಾಗಿದೆ.

* ಪ್ರವಾಸೋದ್ಯಮದ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆ, ಹೋಂ-ಸ್ಟೇಗಳು ಮತ್ತು ರೆಸಾರ್ಟ್‌ಗಳ ಅನಿಯಂತ್ರಿತ ಬೆಳವಣಿಗೆಗೆ ಪ್ರೋತ್ಸಾಹಿಸಲಾಗುತ್ತಿದೆ. ಇದು ಪಶ್ಚಿಮಘಟ್ಟಗಳ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದೆ.

* ಪರಿಸರ ತಜ್ಞರು ನೀಡುವ ಎಚ್ಚರಿಕೆಗಳನ್ನು ರಾಜಕೀಯ ದುರಾಸೆಗಾಗಿ ಕಡೆಗಣಿಸಲಾಗುತ್ತಿದೆ.

ಸರ್ಕಾರದ ಜಾಣ ಕುರುಡು

ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುವವನು ಉದ್ದಾರವಾಗುವುದು ಕಷ್ಟ. ನಮ್ಮ ಸರ್ಕಾರಗಳೇ ಹಾಗಾದರೆ ದೇಶದ ಜನ ನೆಮ್ಮದಿಯಿಂದಿರುವುದು ಕಷ್ಟ. ಈ ಮಾಹಿತಿ ಗಮನಿಸಿ:

2013-14ರಲ್ಲೇ ಎತ್ತಿನಹೊಳೆ ನದಿ ತಿರುವು ಯೋಜನೆ ಅವೈಜ್ಞಾನಿಕ, ಅಲ್ಲಿ ನೀರಿಲ್ಲ ಎಂದು ನಾಡಿನ ಪರಿಸರ ತಜ್ಞರು ಅಧ್ಯಯನ ವರದಿಯನ್ನು ಮುಂದಿಟ್ಟು ವಾದಿಸಿದ್ದರು. ಅದನ್ನು ನಿರ್ಲಕ್ಷಿಸಿ ಯೋಜನೆ ಜಾರಿ ಮಾಡಲಾಯಿತು. ಗುಂಡ್ಯ ದಟ್ಟಾರಣ್ಯ ಪ್ರದೇಶ, ಹಾಸನ ಜಿಲ್ಲೆಯ ಘಟ್ಟ ಪ್ರದೇಶವನ್ನು ಕೊಚ್ಚಿ ಹಾಕಿದ್ದಾಯಿತು. 20 ಸಾವಿರ ಕೋಟಿ ರೂ. ಗಳನ್ನು ಸುರಿದರೂ ಸಿಗುವುದು ಕೇವಲ 3-4 ಟಿ.ಎಂ.ಸಿ ನೀರು ಎಂದು ಅರ್ಥವಾಗಿದೆ. ಆದರೂ ಇದೊಂದು ‘ಭಾರಿ ಪಾರಿಸಾರಿಕ ಅಪರಾಧ’ ಎಂದು ಪರಿಗಣಿಸದೇ ಮತ್ತೆ ಮತ್ತೆ ಅಂಥದೇ ನದಿ ತಿರುವುಗಳಿಗೆ ಸರ್ಕಾರ ಮುಂದಾಗುತ್ತದೆ ಎಂದರೆ ಏನರ್ಥ?

* ಅನಂತ ಅಶೀಸರ ಅಧ್ಯಕ್ಷರಾಗಿದ್ದ ಪಶ್ಚಿಮ ಘಟ್ಟ ತಜ್ಞರ ಪಡೆಯು 2012-2013ರಲ್ಲೇ ಮಲೆನಾಡು ಸುಸ್ಥಿರ ಅಭಿವೃದ್ಧಿ, ಪರಿಸರ ಧಾರಣಾ ಸಾಮರ್ಥ್ಯ ಕುರಿತ ವರದಿ, ನದಿ ಮೂಲಗಳ ರಕ್ಷಣಾ ಯೋಜನೆ, ಕರಾವಳಿ ಹಸಿರು ಕವಚ, ಬೇಡ್ತಿ- ಅಘನಾಶಿನಿ ಸಂರಕ್ಷಿತ ಪ್ರದೇಶ ರಚನೆ, ದೇವರ ಕಾಡುಗಳ ರಕ್ಷಣಾ ಯೋಜನೆ, ಮಲೆನಾಡು ಸುಸ್ಥಿರ ತೋಟಗಾರಿಕಾ ಅಭಿವೃದ್ಧಿ, ಹಲವು ಜೈವಿಕ ವೈವಿಧ್ಯ ತಾಣಗಳು ಮತ್ತು ವೃಕ್ಷಧಾಮ, ಗ್ರಾಮ ಸಾಮಾಜಿಕ ಅರಣ್ಯಗಳನ್ನು ಜನಸಹಭಾಗಿತ್ವದಲ್ಲಿ ರಕ್ಷಿಸುವ ಯೋಜನೆ, ಕೃಷಿ ಸುಸ್ಥಿರ ಅಭಿವೃದ್ಧಿ - ಹೀಗೆ ಹಲವು ಕಾರ್ಯಸಾಧ್ಯ ಯೋಜನೆಗಳನ್ನು ಪ್ರಾಯೋಗಿಕವಾಗಿ ಜಾರಿ ಮಾಡಿ ತೋರಿಸಿತ್ತು. ಆ ನಿಟ್ಟಿನಲ್ಲಿ ಮುಂದುವರಿಯುವ ಆಸಕ್ತಿ ಸರ್ಕಾರಕ್ಕೆ ಏಕಿಲ್ಲ?

* ಪಶ್ಚಿಮಘಟ್ಟದ ನದಿಗಳಲ್ಲಿ ನೀರಿಲ್ಲ, ರಾಜ್ಯದ ವಿದ್ಯುತ್ ಉತ್ಪಾದನಾ ಜಲಾಶಯಗಳು, ನೀರಾವರಿ ಜಲಾಶಯಗಳು ಬರಿದಾಗಿವೆ, ಹೂಳು ತುಂಬಿವೆೆ. ನಿರ್ವಹಣೆ ಇಲ್ಲದೆ ಕಂಗೆಟ್ಟಿವೆ. ಅತ್ತ ಏಕೆ ಕ್ರಮವಿಲ್ಲ?

* 2020-2021ರಲ್ಲಿ ರಾಜ್ಯ ಸರ್ಕಾರವೇ ಕೈಗೊಂಡ ಪಶ್ಚಿಮಘಟ್ಟದಲ್ಲಿ ಭೂಕುಸಿತಕ್ಕೆ ಸಂಬಂಧಿಸಿದ ತಜ್ಞರ ವರದಿಯಲ್ಲಿ ಮಾಡಿದ ಶಿಫಾರಸುಗಳನ್ನು ಜಾರಿಗೇಕೆ ತಂದಿಲ್ಲ?

*ಕುಡಿಯುವ ನೀರು ಅತ್ಯವಶ್ಯ, ಅನಿವಾರ್ಯ ಬೇಡಿಕೆ ನಿಜ. ಅದಕ್ಕೆ ಬಯಲುನಾಡಿಗೆ ನೀರು ಒದಗಿಸುವುದು ಕೂಡ ಸರಿ. ಆದರೆ ಎಲ್ಲದಕ್ಕೂ ಸಹ್ಯಾದ್ರಿಯ ನದಿ ಕಣಿವೆಗಳನ್ನೇ ಬಗೆದರೆ ಏನಾದೀತು? ಈಗಿರುವ ನೀರಾವರಿ ಜಲಾಶಯಗಳಿಗೇ ನೀರು ತುಂಬಿಸಲು ಅದೇ ಘಟ್ಟದ ನದಿಗಳಲ್ಲಿ ನೀರಿಲ್ಲ ಎಂಬ ವಾಸ್ತವ, ವಿಜ್ಞಾನದ ಅರಿವು ಆಡಳಿತಗಾರರಿಗೆ ಇರಬೇಕಲ್ಲವೇ?

ಇನ್ನಾದರೂ ತಜ್ಞರು, ಪರಿಸರ ಕಾರ್ಯಕರ್ತರು, ಇಂಜಿನಿಯರ್‌ಗಳು ಹಾಗೂ ಜನಪ್ರತಿನಿಧಿಗಳ ಜತೆ ಸರ್ಕಾರ ಪುನರ್ವಿಮರ್ಶೆ ನಡೆಸಬೇಕು. ಇಂದಿನ ನೈಜ ಪರಿಸ್ಥಿತಿ ಅರಿತು ನದಿ ತಿರುವು ಯೋಜನೆಗಳ ವೈಲ್ಯವನ್ನು ಅರ್ಥ ಮಾಡಿಕೊಂಡು ಅವುಗಳನ್ನು ಕೈಬಿಡಬೇಕು.