- ಮರ ತೆರವು ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆ ಆರೋಪ
- ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದ ಎನ್.ಆರ್. ರಮೇಶ್
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಅರಣ್ಯ ವಿಭಾಗದಿಂದ ಪರವಾನಗಿ ಪಡೆದಿರುವ ಮೂವರು ಗುತ್ತಿಗೆದಾರರ ವಿರುದ್ಧ ರೌಡಿ ಶೀಟರ್ ಪಟ್ಟಿಗೆ ಅವರ ಹೆಸರನ್ನು ಸೇರಿಸಿರುವ ಹಿನ್ನೆಲೆಯಲ್ಲಿ ಕಾರ್ಯಾದೇಶ ಪತ್ರವನ್ನು ಹಿಂಪಡೆಯಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.
ಈ ಸಂಬಂಧ ಜಿಬಿಎ ಮುಖ್ಯ ಆಯುಕ್ತರು, ಕೇಂದ್ರ, ದಕ್ಷಿಣ ಮತ್ತು ಪಶ್ಚಿಮ ನಗರ ಪಾಲಿಕೆಗಳ ಆಯುಕ್ತರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಅವರು, ಅರಣ್ಯ ವಿಭಾಗದಲ್ಲಿ ಗುತ್ತಿಗೆ ಪಡೆದಿರುವ ಶ್ರೀನಿವಾಸ್, ಎ.ಗೋವಿಂದಯ್ಯ ಹಾಗೂ ಇ.ಚನ್ನಪ್ಪ ಎಂಬುವವರಿಗೆ ಈಗಾಗಲೇ ಗುತ್ತಿಗೆ ಪರವಾನಗಿಯನ್ನು ರದ್ದುಪಡಿಸಿದ್ದರೂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಸಂತೋಷ್ ಕುಮಾರ್ ಹೊಸದಾಗಿ ಕಾರ್ಯಾದೇಶ ಪತ್ರವನ್ನು ನೀಡಿದ್ದಾರೆ. ಇದು ಕಾನೂನುಬಾಹಿರ ಕೆಲಸವಾಗಿದ್ದರೂ, ಮೇಲಾಧಿಕಾರಿಗಳ ಗಮನಕ್ಕೆ ತಾರದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಹಾಗಾಗಿ ತಕ್ಷಣವೇ ನಿಯಮ ಮೀರಿ ನೀಡಿರುವ ಕಾರ್ಯಾದೇಶ ಪತ್ರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕಳಂಕಿತ ಗುತ್ತಿಗೆದಾರರಿಗೆ ನೀಡಿದ್ದ ಪರವಾನಗಿಯನ್ನು 2017ರ ಫೆ.23ರಂದೇ ರದ್ದುಪಡಿಸಲಾಗಿದೆ. ಹಳೆಯ ಮರಗಳ ತೆರವು ಹಾಗೂ ಒಣಗಿದ ಮರಗಳನ್ನು ಕತ್ತರಿಸುವ ವಿಚಾರದಲ್ಲಿ ಸಾರ್ವಜನಿಕರಿಂದ ಹಣ ಪಡೆದ ಬಗ್ಗೆ ಆಗಿನ ಪಾಲಿಕೆ ಅಧಿಕಾರಿಗಳು ಆಕ್ಷೇಪಿಸಿ ಶಿಸ್ತುಕ್ರಮ ಕೈಗೊಂಡಿದ್ದರು. ಇದೀಗ ಮತ್ತೆ ಪ್ರಭಾವ ಬೀರಿ ಮರ ಕಟಾವು ಮಾಡುವ ಕಾರ್ಯಾದೇಶ ಪತ್ರವನ್ನು ಪಡೆದು ಜನರಿಗೆ ವಂಚಿಸಲಾಗುತ್ತಿದೆ. ಹಾಗಾಗಿ ರೌಡಿ ಶೀಟರ್ ಪಟ್ಟಿಗೆ ಸೇರ್ಪಡೆಯಾಗಿರುವ ಮೂವರು ಗುತ್ತಿಗೆದಾರರಿಂದ ಕಾರ್ಯಾದೇಶ ಪತ್ರ ವಾಪಸ್ ಪಡೆಯುವ ಜತೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ಎನ್.ಆರ್. ರಮೇಶ್ ಅವರು ಜಿಬಿಎ ಮುಖ್ಯ ಆಯುಕ್ತರನ್ನು ಆಗ್ರಹಿಸಿದ್ದಾರೆ.