stone-quarries 
ಬೆಂಗಳೂರು

ಕಲ್ಲುಗಣಿಗಳ ಬೀಗಮುದ್ರೆ ತೆರವಿಗೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ರಾಜ್ಯ ಕಲ್ಲುಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟದಿಂದ ಮನವಿಪತ್ರ
ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 65 ಕಲ್ಲುಗಣಿಗಳಿಗೆ ಬೀಗಮುದ್ರ ಹಾಕಿದ್ದು, ಇದನ್ನೇ ನಂಬಿಕೊಂಡಿದ್ದ ಸುಮಾರು 10 ಸಾವಿರ ಕೂಲಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಹಾಗಾಗಿ ಕ್ವಾರಿಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಕಲ್ಲುಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟವು ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಿ. ಸಿದ್ದರಾಜು, ಇತ್ತೀಚಿಗೆ ರಾಜಧಾನಿ ಸಮೀಪ ಕಲ್ಲುಗಣಿಯಲ್ಲಿ ಬಂಡೆ ಕುಸಿದು 7 ಮಂದಿ ಮೃತಪಟ್ಟರು. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಇತರ ಕ್ವಾರಿಗಳ ಕಾರ್ಯಾಚರಣೆಗೆ ಅಕವಾಶ ಮಾಡಿಕೊಟ್ಟಿಲ್ಲ. ಇದರಿಂದಾಗಿ ಪ್ರತಿ ಟನ್ ಎಂ ಸ್ಟ್ಯಾಂಡ್ ಮತ್ತು ಜಲ್ಲಿ 500-600 ರೂ. ಹೆಚ್ಚಾಗಿದೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣದ ಹೊರವಲಯದಲ್ಲಿರುವ ಮದಪಟ್ನ ಗ್ರಾಮದ (ತಾವರೆಕೆರೆ ಹೋಬಳಿ) ದೊಡ್ಡೇರಿ, ಡಿ ದೊಣ್ಣೆಹಳ್ಳಿ, ಸೂಲೀವಾರ, ಮಾಧವಪಟ್ಟಣ ವಿಭಾಗದ ಕ್ರಷರ್ ಮತ್ತು ಕಲ್ಲು ಕ್ವಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ನಾವು ಪರಿಸರ ಇಲಾಖೆಯಿಂದ ಅನುಮತಿ ಪಡೆದಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿಯೊಂದಿಗೆ 30 ವರ್ಷಗಳ ಅವಧಿಗೆ ಪರವಾನಗಿ ಪಡೆದಿದ್ದೇವೆ. ಸರ್ಕಾರದ ಸುರಕ್ಷತಾ ಮಾನದಂಡಗಳನ್ನೂ ಪಾಲಿಸುತ್ತಿದ್ದೇವೆ. ಆದರೆ, ಗಣಿಗಳ ಕಾರ್ಯನಿರ್ವಹಣೆಗೆ ತಾತ್ಕಾಲಿಕ ನಿರ್ಬಂಧ ಹೇರಿದ್ದು, ಇದರಿಂದ ಹೊಸ ಮನೆ ನಿರ್ಮಿಸುವವರಿಗೆ ಹೊರೆಯಾಗುತ್ತಿದೆ ಎಂದರು.

ಸರ್ಕಾರದ ಬೊಕ್ಕಸಕ್ಕೆ ನಷ್ಟ ಸಾಧ್ಯತೆ:

ಆಕಸ್ಮಿಕವಾಗಿ ಆದ ಅವಘಡ ತಪ್ಪಿಗೆ ಸರ್ಕಾರದ ಬೊಕ್ಕಸಕ್ಕೂ ಸಹ ನಷ್ಟವಾಗುತ್ತಿದೆ. ಕಳೆದ ವರ್ಷ 5 ಸಾವಿರ ಕೋಟಿ ರೂ. ಇದ್ದ ಗಣಿ ವಲಯದ ತೆರಿಗೆಯಲ್ಲಿ ಗುರಿ ಮೀರಿ ಒಂದು ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತವನ್ನು ತೆರಿಗೆ ರೂಪದಲ್ಲಿ ನೀಡಿದ್ದೇವೆ. ಈ ಸಾಲಿನಲ್ಲಿ 11 ಸಾವಿರ ಕೋಟಿ ರೂ. ಗುರಿ ನಿಗದಿ ಮಾಡಿದೆ. ಆದರೆ, ಸರ್ಕಾರ ಕ್ವಾರಿಗಳನ್ನು ಮುಚ್ಚಿರುವುದರಿಂದ ತೆರಿಗೆ ಸಂಗಹ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಎಲ್ಲ ಕಲ್ಲುಗಣಿ ಮತ್ತು ಕ್ರಷರ್‌ಗಳನ್ನು ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಡಿ. ಸಿದ್ದರಾಜು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಮದನ್, ಕೆ.ಎಸ್. ಗಿರೀಶ್, ರಾಮಸ್ವಾಮಿ, ಉಮಾಶಂಕರಯ್ಯ ಉಪಸ್ಥಿತರಿದ್ದರು.