ಬೆಂಗಳೂರು: ರಾಜ್ಯ ಸರ್ಕಾರವು ಸ್ಥಾಪಿಸಿರುವ ತಿಗಳ ಅಭಿವೃದ್ಧಿ ನಿಗಮದಲ್ಲಿ ವಹ್ನಿಕುಲ ಕ್ಷತ್ರಿಯ ಜಾತಿ ಹಾಗೂ ಅದರ ಉಪಜಾತಿಗಳನ್ನು ಸೇರಿಸಿರುವುದನ್ನು ವಿರೋಧಿಸಿ, ನಿಗಮದ ಆದೇಶವನ್ನು ಹಿಂಪಡೆಯುವಂತೆ ಕರ್ನಾಟಕ ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘವು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಸಂಘದ ಅಧ್ಯಕ್ಷ ವರ್ತೂರು ಜೆ.ಕೆ. ಗಿರೀಶ್ ನೇತೃತ್ವದ ನಿಯೋಗವು ದೆಹಲಿಯಲ್ಲಿ ಆಯೋಗದ ಅಧ್ಯಕ್ಷೆ ಸಾಧ್ವಿ ನಿರಂಜನ ಜ್ಯೋತಿ ಅವರನ್ನು ಭೇಟಿಯಾಗಿ, ತಿಗಳ ಜಾತಿಗೂ ವಹ್ನಿಕುಲ ಕ್ಷತ್ರಿಯ ಜಾತಿಗೂ ಸಂಬಂಧವಿಲ್ಲ. ಎರಡೂ ಜಾತಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದೆ.
2020ರಲ್ಲಿ ಈ ಕುರಿತು ಆಯೋಗದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸುಮಾರು 125 ವರ್ಷಗಳ ಹಿಂದಿನ ಸರ್ಕಾರಿ ದಾಖಲೆಗಳು ಸೇರಿದಂತೆ ಐತಿಹಾಸಿಕ ದಾಖಲೆಗಳನ್ನು ವಿಚಾರಣೆಯ ವೇಳೆ ಸಲ್ಲಿಸಲಾಗಿತ್ತು ಎಂದು ಮುಖಂಡರು ತಿಳಿಸಿದರು. ಅಂದಿನ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಎರಡೂ ಜಾತಿಗಳು ಪ್ರತ್ಯೇಕವಾಗಿವೆ ಎಂಬ ವರದಿ ನೀಡಿದ್ದರೂ, ರಾಜಕೀಯ ಪ್ರಭಾವದಿಂದ ಅದು ತಡೆಹಿಡಿಯಲ್ಪಟ್ಟಿದೆ ಎಂದು ಆರೋಪಿಸಿದರು.
ತಿಗಳ ಜಾತಿಯ ಉಪಜಾತಿಗಳ ಪಟ್ಟಿಯಲ್ಲಿ ವಹ್ನಿಕುಲ ಕ್ಷತ್ರಿಯ ಜಾತಿಗಳನ್ನು ಸೇರಿಸಿ ನಿಗಮ ರಚಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಮುಖಂಡರು, ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಂಬಂಧಿಸಿದ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಹಾಗೂ ಹಿಂದುಳಿದ ವರ್ಗಗಳ ಆಯೋಗದಲ್ಲಿ ಬಾಕಿ ಉಳಿದಿರುವ ಜಾತಿಗಳ ಪ್ರತ್ಯೇಕತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸಂಘದ ಪದಾಧಿಕಾರಿಗಳಾದ ಸಿ.ವೇಣು, ಮಾದೇಶ್, ಜಿ.ಚಂದ್ರಶೇಖರ್, ಪುರ ಲೋಕೇಶ್ ಹಾಗೂ ಪ್ರಶಾಂತ್ ವೆಂಕಟಾಪುರ ಉಪಸ್ಥಿತರಿದ್ದರು.