examinationsinkannada 
ಬೆಂಗಳೂರು

ರೈಲ್ವೆಯಲ್ಲಿ ಕನ್ನಡದಲ್ಲೇ ಪರೀಕ್ಷೆಗೆ ಆಗ್ರಹ

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ಕರವೇಯಿಂದ ರಾಜ್ಯದ 3 ಕಡೆ ಪ್ರತಿಭಟನೆ ನಾಳೆ
  • ಕೇಂದ್ರ ಸಚಿವರ ಮಧ್ಯಪ್ರವೇಶಕ್ಕೆ ನಾರಾಯಣಗೌಡ ಆಗ್ರಹ
ಬೆಂಗಳೂರು: ನೈಋತ್ಯ ರೈಲ್ವೆ ಇಲಾಖೆಯ ಪದೋನ್ನತಿ ಪರೀಕ್ಷೆಗಳನ್ನು ಕನ್ನಡದಲ್ಲೇ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆಗ್ರಹಿಸಿದ್ದು, ಮಂಗಳವಾರ (ಮಾ.17) ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಲು ಮುಂದಾಗಿದೆ.
ರಾಜ್ಯದ ವಿವಿಧ ಕಡೆಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ಸಿಬ್ಬಂದಿಗೆ ಪದೋನ್ನತಿ ನೀಡುವ ಸಲುವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಈ ಪರೀಕ್ಷೆಯನ್ನು ಹಿಂದಿ/ಇಂಗ್ಲಿಷ್‌ನಲ್ಲಿ ಮಾತ್ರ ನಡೆಸಿ ಕನ್ನಡವನ್ನು ಕಡೆಗಣಿಸಲಾಗಿದೆ. ಈ ವಿಚಾರವಾಗಿ ಹಿಂದೆಯೇ ಇಲಾಖೆ ಜತೆ ಚರ್ಚಿಸಿದ್ದ ವೇಳೆ ತಪ್ಪು ತಿದ್ದಿಕೊಳ್ಳುವ ಭರವಸೆಯನ್ನು ರೈಲ್ವೆ ಇಲಾಖೆಯ ಅಧಿಕಾರಿಗಳು ನೀಡಿದ್ದರು. ಆದರೀಗ, ಏಕಾಏಕಿಯಾಗಿ ಅಧಿಸೂಚನೆ ಹೊರಡಿಸಿ ಹಿಂದಿ/ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟು ಕನ್ನಡಿಗರಿಗೆ ಹುದ್ದೆ ವಂಚಿಸುವ ಹುನ್ನಾರ ನಡೆಸಲಾಗಿದೆ. ಈ ನಿಲುವಿನ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಸಚಿವರು ಮಧ್ಯಪ್ರವೇಶಿಸಲಿ:

ರೈಲ್ವೆ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸುವ ಕುರಿತು ಕರ್ನಾಟಕದವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇತ್ತೀಚಿಗೆ ಭರವಸೆ ನೀಡಿದ್ದರು. ಕನ್ನಡಿಗರಿಗೆ ಅನ್ಯಾಯ ಆಗದಿರಲು ಅಧಿಕಾರಿಗಳ ಮೂಲಕ ಅಧಿಸೂಚನೆ ಹೊರಡಿಸುವ ಬಗ್ಗೆ ವಾಗ್ದಾನ ನೀಡಿದ್ದರು. ಆದರೆ, ಈ ಭರವಸೆ ಈಡೇರುವ ಮುನ್ನವೇ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಕೊಕ್ ನೀಡಿರುವುದು ಖಂಡನೀಯ. ಈ ನಡೆಯನ್ನು ಕನ್ನಡಿಗರ ಬೆನ್ನಿಗೆ ಚೂರಿ ಹಾಕಲಾಗಿದೆ ಎಂಬುದಾಗಿ ಪರಿಗಣಿಸುತ್ತೇವೆ ಎಂದು ಅವರು ಆಕ್ಷೇಪಿಸಿದರು.
ಪ್ರಸ್ತುತ ಇಲಾಖೆ ಕೈಗೊಂಡಿರುವ ಕ್ರಮದ ಹಿನ್ನೆಲೆ, ರಾಜ್ಯ ಪ್ರತಿನಿಧಿಸುತ್ತಿರುವ ಕೇಂದ್ರದ ಸಚಿವರಾದ ವಿ.ಸೋಮಣ್ಣ, ಪ್ರಲ್ಹಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಅವರು ಮಧ್ಯಪ್ರವೇಶಿಸಿ ಆಗಿರುವ ತಪ್ಪನ್ನು ಸರಿಪಡಿಸಬೇಕು. ಜತೆಗೆ ಹಾಲಿ ಪರೀಕ್ಷೆಯನ್ನು ರದ್ದುಪಡಿಸಿ ಇನ್ನೊಮ್ಮೆ ಕನ್ನಡದಲ್ಲೇ ಪರೀಕ್ಷೆ ನಡೆಸಬೇಕು ಎಂದು ನಾರಾಯಣಗೌಡ ಒತ್ತಾಯಿಸಿದರು.