- 2023ರಲ್ಲಿ 4 ಸಾವಿರ ಮಂದಿಯಲ್ಲೀಗ 829 ಮಾತ್ರ ಪತ್ತೆ
- 85+ ವಯಸ್ಸಿನ ವೋಟರ್ಸ್ ಸಂಖ್ಯೆಯೂ 40,307ಕ್ಕೆ ಇಳಿಕೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಬಾರಿ ಚುನಾವಣೆ ನಡೆದಾಗಲೆಲ್ಲ ಶತಾಯುಷಿ ಮತದಾರರು ಎಲ್ಲರ ಗಮನ ಸೆಳೆಯುತ್ತಾರೆ. ಊರುಗೋಲು ಆಸೆಯಿಂದ, ವೀಲ್‌ಚೇರ್ ಅಥವಾ ಬಂಧುಗಳ ನೆರವಿನಿಂದ ಮತಗಟ್ಟೆಗೆ ಆಗಮಿಸಿ ಮತ ಹಾಕಿ ವೋಟಿನ ಬಗ್ಗೆ ತಮಗಿರುವ ಕಾಳಜಿ, ಉತ್ಸಹವನ್ನು ತೋರ್ಪಡಿಸುತ್ತಾರೆ. ಇಂತಹ ಸಂಖ್ಯೆಯೀಗ ಕ್ರಮೇಣ ಕಡಿಮೆಯಾಗುತ್ತಿದೆ.
ಎಸ್‌ಐಆರ್ ಕರಡು ಮತಪಟ್ಟಿ ಪ್ರಕಟಗೊಂಡ ವೇಳೆ ಮಹಾನಗರದಲ್ಲಿ 100 ವರ್ಷ ತುಂಬಿದವರ ಸಂಖ್ಯೆ ಇಳಿಕೆಯಾಗಿರುವುದು ದೃಢಪಟ್ಟಿದೆ. 2023ರ ವಿಧಾನಸಭಾ ಚುನಾವಣೆ ವೇಳೆ 4 ಸಾವಿರದಷ್ಟಿದ್ದ ಶತಯುಷಿ ಮತದಾರರ ಸಂಖ್ಯೆ ಈಗ 829ಕ್ಕೆ ಕುಸಿದಿದೆ. ಅಂದರೆ, ಸರಾಸರಿ ನಾಲ್ವರಲ್ಲಿ ಒಬ್ಬರು ಈಗ ಮತಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಇಂತಹವರಲ್ಲಿ ಹೆಚ್ಚಿನವರಲ್ಲಿ ಮೃತರಾಗಿದ್ದು, ಕೆಲ ಮಂದಿಯ ಹೆಸರು ಪಟ್ಟಿಗೆ ಸೇರ್ಪಡೆ ಆಗಿಲ್ಲದಿರಬಹುದು ಎಂದು ಎಸ್‌ಐಆರ್‌ಗೆ ನಿಯೋಜನೆಗೊಂಡಿರುವ ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಶತಾಯುಷಿ ಮತದಾರರು ಮಹದೇವಪುರ (109) ಹಾಗೂ ಆನೇಕಲ್ (106) ಕ್ಷೇತ್ರದಲ್ಲಿದ್ದಾರೆ. ಅತಿ ಕಡಿಮೆ ಶತಾಯುಷಿ ಮತದಾರರು ಗಾಂಧಿನಗರ, ಗೋವಿಂದರಾಜನಗರ (ತಲಾ 9 ಮಂದಿ) ಮತ್ತು ದಾಸರಹಳ್ಳಿ, ಬಿಟಿಎಂ ಲೇಔಟ್ (ತಲಾ 10 ಮಂದಿ) ಕ್ಷೇತ್ರಕ್ಕೆ ಸೇರಿದವರಾಗಿದ್ದಾರೆ.
ಹಿರಿಯ ಮತದಾರರ ಸಂಖ್ಯೆಯೂ ಇಳಿಕೆ:
ಚುನಾವಣಾ ಆಯೋಗವು 85 ವರ್ಷ ತುಂಬಿದ ಅತಿ ಹಿರಿಯ ಮತದಾರರನ್ನು ಪ್ರತ್ಯೇಕವಾಗಿ ಗುರುತಿಸುವ ಕ್ರಮ ಅನುಸರಿಸುತ್ತಿದೆ. ಇಂತಹವರಿಗೆ ಕೆಲ ವರ್ಷಗಳಿಂದೀಚಿಗೆ ಮನೆಯಿಂದಲೇ ಮತ ಚಲಾಯಿಸುವ ವಿಶೇಷ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇದರಿಂದ ಮತಗಟ್ಟೆಗೆ ಧಾವಿಸಿಬರಲು ಕಷ್ಟಪಡುವ ಅತಿ ಹಿರಿಯ ಮತದಾರರು ತಪ್ಪದೇ ಮತ ಹಕ್ಕು ಚಲಾಯಿಸಲು ಸಾಧ್ಯವಾಗಿಸಿದೆ. ಈ ವರ್ಗದ ಮತದಾರರ ಸಂಖ್ಯೆಯೂ ರಾಜಧಾನಿಯಲ್ಲಿ ಕ್ರಮೇಣ ಇಳಿಕೆಯಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ 95 ಸಾವಿರದಷ್ಟಿದ್ದ 85+ ವೋಟರ್ಸ್ ಪೈಕಿ ಈಗ 40,307 ಮಂದಿ ಮಾತ್ರ ಕರಡು ಪಟ್ಟಿಯಲ್ಲಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ದೊರೆತ ವರ್ಷ ಹಾಗೂ ಭಾರತ ಬಿಟ್ಟು ತೊಲಗಿ (1942) ಆಂದೋಲನದ ಮಧ್ಯೆ ಜನಿಸಿದವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕಡಿಮಯಾಗುತ್ತಿರುವುದು ಎಸ್‌ಐಆರ್ ಕರಡು ಪಟ್ಟಿಯ ಅಂಕಿ-ಅಂಶ ತೆರದಿಟ್ಟಿವೆ.
ನಗರದಲ್ಲಿ ಏಕೈಕ ತೃತೀಯ ಲಿಂಗಿ ಮತದಾರ:
ಮಹಾನಗರದಲ್ಲಿರುವ ನಾಲ್ಕು ಚುನಾವಣಾ ಜಿಲ್ಲೆಗಳಲ್ಲಿ ಒಟ್ಟು 829 ಶತಾಯುಷಿ ಮತದಾರರಿದ್ದು, ಇವರ ಪೈಕಿ 451 ಮಹಿಳೆಯರಾಗಿದ್ದಾರೆ. ನಗರ ಜಿಲ್ಲೆಯಲ್ಲಿ ಅತಿಹೆಚ್ಚು 434 ಶತಾಯುಷಿ ವೋಟರ್ಸ್ ಇದ್ದಾರೆ. ಉತ್ತರ-141, ದಕ್ಷಿಣ-129 ಹಾಗೂ ಕೇಂದ್ರ ಜಿಲ್ಲೆಯಲ್ಲಿ 125 ಮಂದಿಯ ಹೆಸರು ಇದೆ. ವಿಶೇಷವೆಂದರೆ ಇಡೀ ಬೆಂಗಳೂರಿನಲ್ಲಿ ಏಕೈಕ ತೃತೀಯ ಲಿಂಗಿ ಶತಾಯುಷಿ ಮತದಾರ ಉತ್ತರ ಜಿಲ್ಲೆಯವರಾಗಿದ್ದಾರೆ. ಇವರನ್ನು ಹೊರತುಪಡಿಸಿ 85+ ವೋಟರ್ಸ್ ಪೈಕಿ ತೃತೀಯ ಲಿಂಗಿ ಮತದಾರರೊಬ್ಬರ ಹೆಸರು ಮತಪಟ್ಟಿಯಲ್ಲಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.
ರಾಜಧಾನಿಯಲ್ಲಿ ಶತಾಯುಷಿ ವೋಟರ್ಸ್ ವಿವರ:
85+ ವಯಸ್ಸಿನ ಮತದಾರರ ವಿವರ:
75 ದಾಟಿದವರನ್ನು ಪರಿಗಣಿಸಲು ಮನವಿ:
ಚುನಾವಣೆ ವೇಳೆ ಹಿರಿಯ ನಾಗರಿಕರು ಮತಗಟ್ಟೆಗೆ ತೆರಳಿ ಮತಹಕ್ಕು ಚಲಾಯಿಸಲು ನಾನಾ ಕಷ್ಟಗಳನ್ನು ಅನುಭವಿಸುತ್ತಾರೆ. ಅಂಗವೈಕಲ್ಯ ಇದ್ದವು, ಆರೋಗೈ ಸಮಸ್ಯೆ ಕಾರಣದಿಂದ ಅಂತಹವರು ಮತದಾನದಿಂದ ದೂರು ಉಳಿಯುತ್ತಿದ್ದಾರೆ. ಇದನ್ನು ಪರಿಗಣಿಸಿಯೇ ಇತ್ತೀಚಿನ ಎಲೆಕ್ಷನ್‌ನಿಂದ 80 ದಾಟಿದ ವೃದ್ಧರಿಗೆ ಮನೆಯಿಂದಲೇ ಮತ ಹಾಕುವ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಈ ವರ್ಗದ ಬಹುತೇಕ ಮತದಾರರು ಹಕ್ಕು ಚಲಾಯಿಸಲು ಸಾಧ್ಯವಾಗಿದೆ. ಈ ಅವಕಾಶವನ್ನು 75 ದಾಟಿದವರಿಗೂ ವಿಸ್ತರಿಸಬೇಕು ಎಂದು ಹಲವು ಹಿರಿಯ ನಾಗರಿಕರು ಮನವಿ ಮಾಡಿದ್ದಾರೆ.