WPL: ಆರ್​ಸಿಬಿಗೆ ಆರನೇ ಗೆಲುವಿನ ಸಂಭ್ರಮ; ನೇರವಾಗಿ ಫೈನಲ್​ ಪ್ರವೇಶ 
ಬೆಂಗಳೂರು

WPL: ಆರ್​ಸಿಬಿಗೆ ಆರನೇ ಗೆಲುವಿನ ಸಂಭ್ರಮ; ನೇರವಾಗಿ ಫೈನಲ್​ ಪ್ರವೇಶ

ವಡೋದರ: ಮಾಜಿ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ (Royal Challengers Bengaluru) ವುಮೆನ್ಸ್​ ಪ್ರೀಮಿಯರ್​ ಲೀಗ್​ (WPL) ನಾಲ್ಕನೇ ಆವೃತ್ತಿಯಲ್ಲಿ ನೇರವಾಗಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಆಲ್ರೌಂಡರ್​ ನಾಡಿನ್​ ಡಿ ಕ್ಲರ್ಕ್​ (22ಕ್ಕೆ 4) ಕರಾರುವಾಕ್​ ಬೌಲಿಂಗ್​ ಹಾಗೂ ಗ್ರೇಸ್​ ಹ್ಯಾರಿಸ್​ (75 ರನ್​, 37 ಎಸೆತ, 13 ಬೌಂಡರಿ, 2 ಸಿಕ್ಸರ್​ ಮತ್ತು 22ಕ್ಕೆ 2 ವಿಕೆಟ್​) ಆಲ್ರೌಂಡ್​ ಆಟದ ಬಲದಿಂದ ಸ್ಮೃತಿ ಮಂದನಾ (Smriti Mandhana) ಪಡೆ ತನ್ನ 8ನೇ ಹಾಗೂ ಅಂತಿಮ ಲೀಗ್​ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ಎದುರು 8 ವಿಕೆಟ್​ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡ ಆರ್​ಸಿಬಿ, 2024ರ ಬಳಿಕ ಎರಡನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿತು. 2-3ನೇ ಸ್ಥಾನಿಗಳ ನಡುವಿನ ಎಲಿಮಿನೇಟರ್​ ಪಂದ್ಯದ (ಫೆ.3) ವಿಜೇತರ ವಿರುದ್ಧ ಫೆಬ್ರವರಿ 5ರಂದು ಆರ್​ಸಿಬಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ. ಇದರೊಂದಿಗೆ ಐಪಿಎಲ್​-ಡಬ್ಲ್ಯುಪಿಎಲ್​ನಲ್ಲಿ (IPL) ಏಕಕಾಲದಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸುವ ವಿಶೇಷ ಅವಕಾಶ ಆರ್​ಸಿಬಿಗೆ ಎದುರಾಗಿದೆ.

ಕೋಟಂಬಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟೂರ್ನಿಯ 18ನೇ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಯುಪಿಗೆ ನಾಯಕಿ ಮೆಗ್​ ಲ್ಯಾನಿಂಗ್​ (41) ಹಾಗೂ ಆಲ್ರೌಂಡರ್​ ದೀಪ್ತಿ ಶರ್ಮ (55 ರನ್​, 43 ಎಸೆತ, 6 ಬೌಂಡರಿ, 1 ಸಿಕ್ಸರ್​) ಮೊದಲ ವಿಕೆಟ್​ಗೆ 49 ಎಸೆತಗಳಲ್ಲಿ 74 ರನ್​ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಡಿ ಕ್ಲರ್ಕ್​ ಮತ್ತು ಹ್ಯಾರಿಸ್​ ಬಿಗಿ ಬೌಲಿಂಗ್​ ಎದುರು ನಿರಂತರ ವಿಕೆಟ್​ ಕಳೆದುಕೊಂಡ ಯುಪಿ  8 ವಿಕೆಟ್​ಗೆ 143 ರನ್​ಗಳಿಗೆ ಸಮಾಧಾನ ಕಂಡಿತು. ಪ್ರತಿಯಾಗಿ ಗ್ರೇಸ್​ ಹ್ಯಾರಿಸ್​ ಮತ್ತು ಸ್ಮೃತಿ ಮಂದನಾ (54*ರನ್​, 27 ಎಸೆತ, 8 ಬೌಂಡರಿ, 2 ಸಿಕ್ಸರ್​) ನಡೆಸಿದ ಶತಕದ ಜತೆಯಾಟದ ನೆರವಿನಿಂದ 13.1 ಓವರ್​ಗಳಲ್ಲಿ 2 ವಿಕೆಟ್​ಗೆ 147 ರನ್​ ಕಲೆಹಾಕಿದ ಆರ್​ಸಿಬಿ ಸುಲಭ ಗೆಲುವು ದಾಖಲಿಸಿ ಲಯಕ್ಕೆ ಮರಳಿತು.

ಯುಪಿ ವಾರಿಯರ್ಸ್​: 8 ವಿಕೆಟ್​ಗೆ 143 (ಲ್ಯಾನಿಂಗ್​ 41, ದೀಪ್ತಿ 55, ಆಮಿ 1, ಹರ್ಲಿನ್​ 14, ಟೆಯಾನ್​ 6, ಶ್ವೇತಾ 7, ಸಿಮ್ರನ್​ 10, ನಾಡಿನ್​ ಡಿ ಕ್ಲರ್ಕ್​ 22ಕ್ಕೆ 4, ಹ್ಯಾರಿಸ್​ 22ಕ್ಕೆ 2). 
ಆರ್​ಸಿಬಿ: 13.1 ಓವರ್​ಗಳಲ್ಲಿ 2 ವಿಕೆಟ್​ಗೆ 147 (ಹ್ಯಾರಿಸ್​ 75, ಸ್ಮ$ತಿ 54*, ಜಾರ್ಜಿಹಾ 16, ಶಿಖಾ ಪಾಂಡೆ 36ಕ್ಕೆ 1). ಪಂದ್ಯಶ್ರೇಷ್ಠ: ಗ್ರೇಸ್​ ಹ್ಯಾರಿಸ್​.